ಸಂಪಾದಕೀಯ | ಸೂಕ್ತ ನಿಲುವು

supreme-court-282758563-16x9_0
Published on

ನಿರಾಶ್ರಿತರು ಮತ್ತು ನುಸುಳುಕೋರರ ರೂಪದಲ್ಲಿ ಭಾರತಕ್ಕೆ ಬಂದು ನೆಲೆಸಿದವರು ದೇಶದ ಆಂತರಿಕ ಭದ್ರತೆಗೆ ಮಾರಕವಾಗಿ ಪರಿಗಣಿಸಿದ್ದಾರೆ. ಇಲ್ಲಿ ನೆಲೆಸಿ, ದೇಶವಿರೋಧಿ ಚಟುವಟಿಕೆಗಳಿಗೆ ಸಹಕಾರ ನೀಡುತ್ತಿರುವುದು, ಭಾರತದ ಶತ್ರುರಾಷ್ಟ್ರದೊಂದಿಗೆ ಕೈಜೋಡಿಸುವುದು ಹೀಗೆ ಹಲವು ಗಂಭೀರ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಈಗಾಗಲೇ ಬಾಂಗ್ಲಾದೇಶದ ನುಸುಳುಕೋರರ ಹಾವಳಿ ಮಿತಿಮೀರಿದೆ. ಅನೇಕ ಜಿಲ್ಲೆಗಳಲ್ಲಿ ಇವರು ಅಲ್ಲಿಯ ಭೌಗೋಳಿಕ ಚಿತ್ರಣ, ಜನಸಂಖ್ಯೆಯನ್ನೇ ಏರುಪೇರು ಮಾಡಿದ್ದಾರೆ. ಮಾತ್ರವಲ್ಲ, ನಕಲಿ ನೋಟು ಚಲಾವಣೆ, ಮಾದಕ ದ್ರವ್ಯ ಕಳ್ಳಸಾಗಣೆ, ಮಾನವ ಕಳ್ಳಸಾಗಣೆ, ಅಕ್ರಮವಾಗಿ ಶಸ್ತ್ರಾಸ್ತ್ರಗಳ ಸಾಗಣೆ ಸೇರಿದಂತೆ ಹಲವು ಅಪರಾಧಿಕ ಕೃತ್ಯಗಳಲ್ಲಿ ಇವರು ತೊಡಗಿರುವುದು ಈ ಹಿಂದಿನ ಪ್ರಕರಣಗಳಿಂದ ಸ್ಪಷ್ಟವಾಗಿದೆ.

ಜಮ್ಮು-ಕಾಶ್ಮೀರದ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತ್ಯುತ್ತರವಾಗಿ ಭಾರತ ನಡೆಸಿದ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆಯ ಬಳಿಕ ದೇಶದಲ್ಲೇ ಅಡಗಿರುವ ಶತ್ರುಗಳನ್ನು ಹುಡುಕಿ, ಅವರನ್ನು ಕಾನೂನಿನ ಕಟಕಟೆಗೆ ತಂದು ನಿಲ್ಲಿಸಲಾಗುತ್ತಿದೆ. ಅನುಮಾನಾಸ್ಪದ ಸಾಮಾಜಿಕ ಜಾಲತಾಣ ಖಾತೆಗಳ ಮೇಲೆ ಪೊಲೀಸ್ ಇಲಾಖೆ ನಿಗಾ ಇಟ್ಟಿದೆ. ಈ ಕಾರ್ಯ ಯಾವಾಗಲೋ ಆಗಬೇಕಿತ್ತು. ಆದರೆ, ಈಗಲಾದರೂ ನಡೆಯುತ್ತಿದೆ ಎಂಬುದು ಸಮಾಧಾನದ ಸಂಗತಿ. ಈ ಮಾದರಿಯ ಕಾರ್ಯಾಚರಣೆಯ ವೇಳೆ ಗುಜರಾತ್​ನಲ್ಲಿ ಸಾವಿರಾರು ಬಾಂಗ್ಲಾ ನುಸುಳುಕೋರರು ಪತ್ತೆಯಾಗಿದ್ದಾರೆ.

ಇದು ಒಂದು ರಾಜ್ಯ ಅಥವಾ ಪ್ರಾಂತ್ಯಕ್ಕೆ ಸೀಮಿತವಾದ ಸಮಸ್ಯೆಯಾಗಿ ಉಳಿದಿಲ್ಲ. ಯಾವುದೋ ನೆಪದಲ್ಲಿ ಆಶ್ರಯ ಕೇಳಿ ಬಂದವರು, ಗಡಿಯಿಂದ ನುಸುಳಿ ಬಂದವರು ಮತ್ತು ನಕಲಿ ದಾಖಲಾತಿ ಸೃಷ್ಟಿಸಿ, ಆ ಮುಖೇನ ಭಾರತೀಯ ನಾಗರಿಕತ್ವ ಪಡೆದುಕೊಂಡವರು ಸಮಾಜವಿರೋಧಿ ಕೃತ್ಯಗಳಲ್ಲಿ ತೊಡಗಿರುವುದು ಆತಂಕಕಾರಿ ಬೆಳವಣಿಗೆ. ಈ ನಡುವೆ, ನಿರಾಶ್ರಿತರ ವಿಷಯದಲ್ಲಿ ಸೋಮವಾರ ಸುಪ್ರೀಂ ಕೋರ್ಟ್ ಮಹತ್ವದ ಮಾತುಗಳನ್ನಾಡಿದೆ. ‘ಜಗತ್ತಿನಾದ್ಯಂತದಿಂದ ಬರುವ ನಿರಾಶ್ರಿತರಿಗೆ ಆಶ್ರಯ ಕೊಡಲು ಭಾರತವೇನು ಧರ್ಮಶಾಲೆಯಲ್ಲ.

140 ಕೋಟಿ ಜನಸಂಖ್ಯೆಯನ್ನು ಹೊಂದಿರುವ ಭಾರತ ತನ್ನದೇ ಆದ ಸಮಸ್ಯೆಗಳೊಂದಿಗೆ ಸೆಣೆಸುತ್ತಿದೆ. ಹಾಗಾಗಿ, ಪ್ರತಿ ದೇಶದಿಂದ ಬಂದ ಶರಣಾರ್ಥಿಗಳಿಗೆ ಆಶ್ರಯ ನೀಡಲು ಸಾಧ್ಯವಿಲ್ಲ’ ಎಂದು ಹೇಳಿದ ನ್ಯಾಯಮೂರ್ತಿ ದೀಪಂಕರ್ ದತ್ತಾ ಹಾಗೂ ನ್ಯಾಯಮೂರ್ತಿ ಕೆ. ವಿನೋದ್ ಚಂದ್ರನ್ ಇದ್ದ ಪೀಠವು ಭಾರತದಲ್ಲೇ ನೆಲೆಸಲು ಅವಕಾಶ ಕೊಡಬೇಕು ಎಂಬ ಶ್ರೀಲಂಕಾ ಪ್ರಜೆಯ ಅರ್ಜಿಯನ್ನು ತಿರಸ್ಕರಿಸಿದೆ. ಎಲ್​ಟಿಟಿಇ ಜತೆ ಸಂಪರ್ಕ ಹೊಂದಿದ್ದ ಶ್ರೀಲಂಕಾ ಪ್ರಜೆ ಏಳು ವರ್ಷಗಳ ಶಿಕ್ಷೆಯನ್ನು ಅನುಭವಿಸಿದ್ದಾನೆ. ನುಸುಳುಕೋರರು ಅಥವಾ ನಿರಾಶ್ರಿತರಿಂದ ಭಾರತವನ್ನು ರಕ್ಷಿಸಲೇಬೇಕಿದೆ.

ಈ ವಿಷಯದಲ್ಲಿ ಈಗಲೂ ನಿರ್ಲಕ್ಷ್ಯ ಮುಂದುವರಿದರೆ ಅದು ದೊಡ್ಡ ಪ್ರಮಾದವೇ. ದೇಶದೊಳಗಿನ ದ್ರೋಹಿಗಳನ್ನು, ರಾಷ್ಟ್ರವಿರೋಧಿಗಳನ್ನು ಪತ್ತೆ ಮಾಡಿ, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಇದು ಸಕಾಲ. ಅಲ್ಲದೆ, ನಿರಾಶ್ರಿತರ ಸೋಗಿನಲ್ಲಿ ಬಂದು ನೆಲೆಸುವವರ ಬಗ್ಗೆ ಎಚ್ಚರಿಕೆ ವಹಿಸಬೇಕಿದೆ. ಸುಪ್ರೀಂ ಕೋರ್ಟ್​ನ ಅಭಿಪ್ರಾಯವನ್ನು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಗಂಭೀರವಾಗಿ ಪರಿಗಣಿಸಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net