

ಚಿಕ್ಕಬಳ್ಳಾಪುರ: ಶನಿವಾರ ಅಶ್ವಿನಿ ಪುನೀತ್ ರಾಜ್ಕುಮಾರ್ಗೆ ಉಡುಗೊರೆ ನೀಡಲು ಅಪ್ಪು ಅಭಿಮಾನಿಗಳು ವಿಶೇಷವಾದ ರೇಷ್ಮೆ ಸೀರೆಯೊಂದನ್ನು ತಯಾರಿಸಿ ತಂದಿದ್ದಾರೆ. ಅಪ್ಪು ಭಾವಚಿತ್ರವಿರುವ ರೇಷ್ಮೆ ಸೀರೆ ಇದಾಗಿದ್ದು, ಚಿಕ್ಕಬಳ್ಳಾಪುರದ ರೇಷ್ಮೆ ಡಿಸೈನರ್ಸ್ ಕಡೆಯಿಂದ ಅಶ್ವಿನಿ ಪುನೀತ್ ರಾಜ್ಕುಮಾರ್ರಿಗಾಗಿಯೇ ವಿಭಿನ್ನವಾಗಿ ತಯಾರಿಸಲಾಗಿದೆ.
ಪುನೀತ್ರಾಜ್ಕುಮಾರ್ ಸಮಾಧಿಯ ಬಳಿ ಆಗಮಿಸಿದ ಸಂದರ್ಭದಲ್ಲಿ ಅಪ್ಪು ಅಭಿಮಾನಿಗಳು ಈ ವಿಶೇಷ ಸೀರೆಯನ್ನು ಅಶ್ವಿನಿ ಪುನೀತ್ರಿಗೆ ನೀಡಬೇಕೆಂದಿದ್ದರು. ಆದರೆ ಜನಸಂದಣಿಯ ಕಾರಣ ಈ ಸೀರೆಯನ್ನು ಅವರಿಗೆ ನೀಡಲಾಗದೇ ತಮ್ಮ ಬಳಿಯೇ ಇಟ್ಟುಕೊಂಡಿದ್ದರು. ಆದರೆ ಶನಿವಾರ ರಾಘಣ್ಣ ಚಿಕ್ಕಬಳ್ಳಾಪುರಕ್ಕೆ ಆಗಮಿಸಿದ ವೇಳೆ ಈ ಸೀರೆಯನ್ನು ಅವರ ಬಳಿ ನೀಡಿದ್ದಾರೆ.
ಗೋಲ್ಡನ್ ಬಣ್ಣದ ಈ ರೇಷ್ಮೆ ಸೀರೆಯಲ್ಲಿ ಅಪ್ಪು ಭಾವಚಿತ್ರವನ್ನು ನೀಲಿ ಬಣ್ಣದಿಂದ ಮಾಡಲಾಗಿದೆ. ಹಾಗೂ ಸೀರೆಯ ಕೆಳಭಾಗದಲ್ಲಿ ಡಾ.ಪುನೀತ್ ರಾಜ್ಕುಮಾರ್ ಎಂಬ ಹೆಸರನ್ನು ಸಾಲಾಗಿ ಚಿತ್ರಿಸಲಾಗಿದೆ. ಅಭಿಮಾನಿಗಳು ಕೊಟ್ಟ ಈ ಸೀರೆಯನ್ನು ಸ್ವೀಕರಿಸಿದ ರಾಘಣ್ಣ ಕೆಲಕ್ಷಣ ಭಾವುಕರಾದರು. ನಂತರ ಅಶ್ವಿನಿ ಅವರಿಗೆ ನೀಡುವುದಾಗಿ ತಿಳಿಸಿ ತಾವೇ ಆ ಸೀರೆಯನ್ನು ಪಡೆದುಕೊಂಡರು.