ನೆನಪಿನ ಸಾಗರದಲ್ಲಿ ಒಂದು ವರ್ಷ; ಭಾವುಕ ಪತ್ರ ಬರೆದ ಅಶ್ವಿನಿ ಪುನೀತ್​ ರಾಜಕುಮಾರ್​

Puneeth 1 Year
Published on

ಬೆಂಗಳೂರು: ಪುನೀತ್ ರಾಜ್ ಕುಮಾರ್ ನಿಧನರಾಗಿ ಇಂದಿಗೆ (ಅ.29) ಒಂದು ವರ್ಷ. ಕಳೆದ ವರ್ಷ ಇದೇ ದಿನ ಪುನೀತ್​ ತೀವ್ರ ಹೃದಯಾಘಾತದಿಂದ ಇನ್ನಿಲ್ಲವಾದರು. ಈ ಒಂದು ವರ್ಷದಲ್ಲಿ ಏನೆಲ್ಲ ಆಯಿತು ಎಂಬುದು ಎಲ್ಲರಿಗೂ ಗೊತ್ತೇ ಇದೆ.

ಪುನೀತ್​ ನಿಧನರಾಗಿ ಒಂದು ವರ್ಷವಾದ ಹಿನ್ನೆಲೆಯಲ್ಲಿ ಅವರ ಪತ್ನಿ ಅಶ್ವಿನಿ ಪುನೀತ್​ ರಾಜಕುಮಾರ್​ ಸೋಷಿಯಲ್​ ಮೀಡಿಯಾದಲ್ಲಿ ಒಂದು ಭಾವುಕ ಪತ್ರವನ್ನು ಬರೆದಿದ್ದಾರೆ. ಪುನೀತ್​ ಅವರನ್ನು ಸದಾ ಕಾಲ ಜೀವಂತವಾಗಿರಿಸಿದ್ದಕ್ಕಾಗಿ ಎಲ್ಲರಿಗೂ ತಮ್ಮ ನಮನಗಳನ್ನು ಸಲ್ಲಿಸಿದ್ದಾರೆ.

ಈ ಕುರಿತು ಒಂದು ಪೋಸ್ಟ್​ ಹಾಕಿರುವ ಅವರು, 'ಅಪ್ಪು ಅವರು ನಮ್ಮ ನೆನಪುಗಳಲ್ಲಿ ಮಾತ್ರವಲ್ಲದೆ, ನಮ್ಮ ಆಲೋಚನೆಗಳು ಹಾಗೂ ನಾವು ಮಾಡುವ ಸತ್ಕಾರ್ಯಗಳಲ್ಲಿಯೂ ನಮ್ಮ ನಡುವೆ ಸದಾ ಜೀವಂತವಾಗಿದ್ದಾರೆ. ಅವರ ಕನಸು ಮತ್ತು ಮೌಲ್ಯಗಳನ್ನು ಜೀವಂತವಾಗಿಡಲು ನೂರಅರು ಕುಟುಂಬ ಸದಸ್ಯರು, ಅವರ ಸಾವಿರಾರು ಸ್ನೇಹಿತರು ಹಾಗೂ ಕೋಟ್ಯಂತರ ಅಭಿಮಾನಿಗಳಿಂದ ನಾನು ಪಡೆದ ಬೆಂಬಲದ ಶಕ್ತಿಯೇ ನನಗೆ ದಾರಿ ಮಾಡಿಕೊಟ್ಟಿದೆ. ಅಪ್ಪು ಅವರ ಮೇಲೆ ನಿಮ್ಮೆಲ್ಲರಿಗೂ ಇರುವ ಪ್ರೀತಿ ಮತ್ತು ಗೌರವದಿಂದ, ಸದಾ ಕಾಲ ಅವರನ್ನು ಜೀವಂತವಾಗಿರಿಸಿದ್ದಕ್ಕಾಗಿ ಎಲ್ಲರಿಗೂ ನನ್ನ ನಮನಗಳು' ಎಂದು ಧನ್ಯವಾದಗಳನ್ನು ತಿಳಿಸಿದ್ದಾರೆ.

ಇನ್ನು, ಪುನೀತ್​ ಅವರ ಮೊದಲ ವರ್ಷದ ಪುಣ್ಯ ಸ್ಮರಣೆಯ ಅಂಗವಾಗಿ ಇಂದು ಬೆಳಿಗ್ಗೆಯೇ ಪುನೀತ್​ ಅವರ ಕುಟುಂಬಸ್ಥರು ಮತ್ತು ಆಪ್ತರು ಪುನೀತ್ ಪುಣ್ಯಭೂಮಿಗೆ ಭೇಟಿ ನೀಡಿ, ಪೂಜೆ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಸಾವಿರಾರು ಜನ ಅಭಿಮಾನಿಗಳು, ಪುಣ್ಯಭೂಮಿಗೆ ಭೇಟಿ ನೀಡಿ ಸಮಾಧಿಯ ದರ್ಶನ ಪಡೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net