ನಕಲಿ ದಾಖಲೆ ಮೇಲೆ ಪರಿಹಾರಕ್ಕೆ ಬಿಡಿಎಗೆ ಅರ್ಜಿ, ಐವರ ಸೆರೆ

bda office
Published on

ಬೆಂಗಳೂರು: ಬಿಡಿಎಗೆ ನಕಲಿ ದಾಖಲೆ ಸಲ್ಲಿಸಿ ಭೂ ಪರಿಹಾರಕ್ಕೆ ಯತ್ನಿಸಿದ ಪ್ರಕರಣ ಸಂಬಂಧ ಬಿಬಿಎಂಪಿ ತ್ಯಾಜ್ಯ ವಿಲೇವಾರಿ ಗುತ್ತಿಗೆದಾರ ಸೇರಿ ಐವರನ್ನು ಶೇಷಾದ್ರಿಪುರ ಪೊಲೀಸರು ಬಂಧಿಸಿದ್ದಾರೆ.

ರಾಜರಾಜೇಶ್ವರಿನಗರದ ನಿವಾಸಿ ನಾಗರಾಜ್, ಚಲ್ಲಘಟ್ಟದ ಶ್ರೀನಿವಾಸ್, ರವಿಕುಮಾರ್, ಭರತ್ ಮತ್ತು ಸ್ವಾಮಿ ಬಂಧಿತರು. ರಿಯಲ್ ಎಸ್ಟೇಟ್ ಉದ್ಯಮಿ ಉಮೇಶ್ ಸೇರಿ ಇನ್ನಿತರ ಆರೋಪಿಗಳ ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಬಲೆಬೀಸಲಾಗಿದೆ. ಚಲ್ಲಘಟ್ಟದಲ್ಲಿ ಭೂ ಪರಿಹಾರ ಕುರಿತು ಸಲ್ಲಿಸಿದ್ದ ದಾಖಲೆಗಳನ್ನು ಬಿಡಿಎ ವಿಚಕ್ಷಣಾ ದಳದ ಡಿವೈಎಸ್ಪಿ ಮಲ್ಲೇಶ್ ಪರಿಶೀಲನೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿತ್ತು. ಈ ದೂರು ಆಧರಿಸಿ ತನಿಖೆ ಕೈಗೊಂಡ ಇನ್‌ಸ್ಪೆಕ್ಟರ್ ಹೇಮಂತ್ ಕುಮಾರ್ ನೇತೃತ್ವದ ತಂಡವು, ಆರೋಪಿಗಳನ್ನು ಬಂಧಿಸಿದೆ. ನಾಲ್ವರು ಆರೋಪಿಗಳನ್ನು ವಿಚಾರಣೆ ನಡೆಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಹೆಚ್ಚಿನ ತನಿಖೆ ಸಲುವಾಗಿ ನಾಗರಾಜ್ ಎಂಬಾತನನ್ನು ಕಸ್ಟಡಿಗೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಚಲ್ಲಘಟ್ಟದ ಸರ್ವೆ ನಂ.13 ಮತ್ತು ಹೊಸ ಸರ್ವೆ ನಂಬರ್ 58ರಲ್ಲಿ 6 ಎಕರೆ ಭೂಮಿಗೆ ನಕಲಿ ದಾಖಲೆ ಸೃಷ್ಟಿಸಿದ್ದರು. ಈ ಆಸ್ತಿಯ ಮೂಲ ಮಾಲಿಕ ಮೂಡ್ಡಪ್ಪಗೂ ಆರೋಪಿಗಳು ರಕ್ತ ಸಂಬಂಧ ಇಲ್ಲದಿದ್ದರೂ ಪಿತ್ರಾರ್ಜಿ ಆಸ್ತಿ ಎಂದು ನಕಲಿ ಸೃಷ್ಟಿಸಿದ್ದರು.

ಬಳಿಕ 70 ಕೋಟಿ ರೂ. ಪರಿಹಾರ ಕೋರಿ ಬಿಡಿಎಗೆ ಅರ್ಜಿ ಸಲ್ಲಿಸಿದ್ದರು. ಪರಿಶೀಲಿಸಿ ವರದಿ ನೀಡಲು ನೇಮಕಗೊಂಡಿದ್ದ ಬಿಡಿಎ ವಿಶೇಷ ಭೂಸ್ವಾಧೀನಾಧಿಕಾರಿ ಡಾ. ಸುಧಾ ಮತ್ತು ಸರ್ವೇಯರ್ ಪಿ.ಎನ್. ರವಿಪ್ರಕಾಶ್ ಭೂ ಪರಿಹಾರಕ್ಕೆ ಶಿಫಾರಸು ಮಾಡಿದ್ದರು. ರಿಯಲ್ ಎಸ್ಟೇಟ್ ಉದ್ಯಮಿ ಉಮೇಶ್ ಪರವಾಗಿ ಬಿಡಿಎ ಅಧಿಕಾರಿಗಳು ವರದಿ ನೀಡಿ ಕರ್ತವ್ಯಲೋಪ ಎಸಗಿದ್ದರು.

ಈ ಭೂಮಿಯಲ್ಲಿ ಅಕ್ರಮವಾಗಿ ರೆವಿನ್ಯೂ ಸೈಟ್‌ಗಳನ್ನು ಆರೋಪಿಗಳು ಅಭಿವೃದ್ಧಿಪಡಿಸಿದ್ದರು. ಆಶ್ರಯ ಯೋಜನೆಗೆ ಕಾಯ್ದಿರಿಸಿರುವ ಭೂಮಿ ಆಗಿದ್ದರೂ ಸರ್ವೇಯರ್ ರವಿಪ್ರಕಾಶ್ ಮತ್ತು ವಿಶೇಷ ಭೂಸ್ವಾಧೀನಾಧಿಕಾರಿ ಡಾ. ಸುಧಾ ರವರು ಭೂ ಪರಿಹಾರಕ್ಕೆ ಅರ್ಹವಾಗಿರುವ ಜಮೀನು ಎಂದು ಸುಳ್ಳು ನಕಾಶೆ ತಯಾರು ಮಾಡಿದ್ದರು.ನಿಜವಾದ ಮಾಲಿಕರ ಬಗ್ಗೆ ವಿಚಾರಿಸದೆ ಆರೋಪಿ ಪುಟ್ಟಮ್ಮರವರ ಹೆಸರಿಗೆ ಖಾತೆಗೆ ಬೆಂಗಳೂರು ದಕ್ಷಿಣ ತಾಲೂಕಿನ ವಿಶೇಷ ತಹಶೀಲ್ದಾರ್‌ರವರಿಗೆ ಉಪ ವಿಭಾಗಾಧಿಕಾರಿ ಡಾ. ಎಂ.ಜಿ. ಶಿವಣ್ಣ ಆದೇಶಿಸಿ ನಂಬಿಕೆ ದ್ರೋಹ ಮಾಡಿದ್ದರು.

ಈ ಕೃತ್ಯದಲ್ಲಿ ಅಂದಿನ ದಕ್ಷಿಣ ವಿಭಾಗದ ತಹಸಿಲ್ದಾರ್ ಮತ್ತು ಕಂದಾಯ ಅಧಿಕಾರಿ- ಸಿಬ್ಬಂದಿ ಭಾಗಿಯಾಗಿದ್ದರು. ಅಕ್ರಮದ ಕುರಿತು ಬಿಡಿಎಗೆ ಗೋವಿಂದರಾಜು ಎಂಬುವರು ದೂರು ನೀಡಿದ್ದರು. ಬಿಡಿಎ ವಿಚಕ್ಷಣಾ ದಳವು ಚಲ್ಲಘಟ್ಟದ ಭೂ ಪರಿಹಾರ ಕುರಿತು ಪರಿಶೀಲಿಸಿದಾಗ ಅಕ್ರಮ ಬಯಲಾಗಿದೆ ಎಂದು ಪೊಲೀಸರು ವಿವರಿಸಿದ್ದಾರೆ.

50 ವರ್ಷದ ಹಿಂದೆಯೇ ಸಾವು :

ಭೂಮಿಯ ಮೂಲ ವಾರಸುದಾರ ಮೂಡಪ್ಪ 1976ರಲ್ಲಿ ಮೃತಪಟ್ಟಿದ್ದಾರೆ. 1992ರಲ್ಲಿ ಪೋಡಿ ಮಾಡಿಸಿದ್ದು, 2019-2020ರಲ್ಲಿ ಆಸ್ತಿಗೆ ಸಂಬಂಧಿಸಿದಂತೆ ರಿಲೀಸ್ ಡೀಡ್ ಮಾಡಲಾಗಿದೆ. ಬಳಿಕ ಪುಟ್ಟಮ್ಮ ಹೆಸರಿನಲ್ಲಿ ಬಿಡಿಎಗೆ 57,498 ಚದರ ಅಡಿ ಭೂ ಪರಿಹಾರ ಕೋರಿ ಅರ್ಜಿ ಸಲ್ಲಿಸಿದ್ದರು. ಬಿಡಿಎ ಪರಿಹಾರ ನೀಡಿರಲಿಲ್ಲ. ಆಂತರಿಕ ತನಿಖೆ ನಡೆಸಿದಾಗ ಬೆಳಕಿಗೆ ಬಂದಿದೆ. ಇದರಲ್ಲಿ ಬಿಡಿಎ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ಕೈವಾಡ ಇರುವುದು ತನಿಖೆ ವೇಳೆ ದೃಢವಾಗಿದೆ.

ಮಾಸ್ಟರ್ ಮೈಂಡ್‌ಗಳು

ನಕಲಿ ದಾಖಲೆ ಸೃಷ್ಟಿಸಿ ಬಿಡಿಎಗೆ ವಂಚಿಸುವ ಪ್ರಕರಣದಲ್ಲಿ ಬಿಬಿಎಂಪಿ ತ್ಯಾಜ್ಯ ವಿಲೇವಾರಿ ಗುತ್ತಿಗೆದಾರ ನಾಗರಾಜ್ ಮತ್ತು ರಿಯಲ್ ಎಸ್ಟೇಟ್ ಉದ್ಯಮಿ ಉಮೇಶ್ ಮಾಸ್ಟರ್ ಮೈಂಡ್‌ಗಳು. ಈ ಇಬ್ಬರು ಸೇರಿಕೊಂಡು ಮೂಡಪ್ಪನ ವಂಶಸ್ಥರು ಎಂದು ಶ್ರೀನಿವಾಸ್, ಭರತ್, ಸ್ವಾಮಿ ಮತ್ತು ರವಿಕುಮಾರ್ ಸೃಷ್ಟಿಸಿ ದಾಖಲೆ ಸಿದ್ದಪಡಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net