

ಕೆ.ಆರ್.ನಗರ: ಪೆಟ್ರೋಲ್, ಡೀಸೆಲ್ ಬೆಲೆ ಏರಿಸಿರುವ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ಗುರುವಾರ ಕೆ.ಆರ್.ನಗರದಲ್ಲಿ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಸಿ.ಎಸ್.ಪೂರ್ಣಿಮಾ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ರವಾನಿಸಿದರು.
ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಪುರಸಭೆ ಸದಸ್ಯ ಉಮೇಶ್ ಮಾತನಾಡಿ, ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಸರ್ಕಾರ ಬಡವರ ಮೇಲೆ ಹೊರೆ ಹಾಕುತ್ತಿದೆ ಎಂದು ಕಿಡಿಕಾರಿದರು.
ತಾಲೂಕು ಬಿಜೆಪಿ ಅಧ್ಯಕ್ಷ ಹೊಸೂರು ಧರ್ಮ ಮಾತನಾಡಿ, ಸರ್ಕಾರ ಅಸ್ತಿತ್ವಕ್ಕೆ ಬಂದು 13 ತಿಂಗಳಾಗಿದ್ದರೂ ಯಾವುದೇ ಅಭಿವೃದ್ಧಿ ಕೆಲಸಗಳನ್ನು ನಡೆಸಿಲ್ಲ. ಚುನಾವಣೆಗಾಗಿಯೇ ಕಾಂಗ್ರೆಸ್ ಗ್ಯಾರಂಟಿ ಯೋಜನೆ ಘೋಷಿಸಿದ್ದು, ಆರ್ಥಿಕ ಸ್ಥಿತಿಯನ್ನು ಅಧಃಪತನಕ್ಕೆ ಕೊಂಡೊಯ್ಯುತ್ತಿದೆ ಎಂದು ದೂರಿದರು.
ಎರಡು ಪಕ್ಷಗಳ ಮುಖಂಡರು ಮತ್ತು ಕಾರ್ಯಕರ್ತರು ಪಟ್ಟಣದ ಹಾಸನ ಮೈಸೂರು ರಸ್ತೆಯಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಯ ಬಳಿಯಿಂದ ಮೆರವಣಿಗೆ ಹೊರಟು ತಾಲೂಕು ಕಚೇರಿವರೆಗೂ ಸಾಗಿದರು.
ಪುರಸಭಾ ಸದಸ್ಯ ಕೆ.ಎಲ್.ಜಗದೀಶ್, ಸಂತೋಷ್‌ಗೌಡ, ಮಾಜಿ ಸದಸ್ಯ ಜಿ.ಪಿ.ಮಂಜು, ಉಮಾಶಂಕರ್, ಜೆಡಿಎಸ್ ನಗರ ಕಾರ್ಯದರ್ಶಿ ರುದ್ರೇಶ್, ರಂಗಸ್ವಾಮಿ, ಎಸ್.ಸಿ. ಮೋರ್ಚಾ ಅಧ್ಯಕ್ಷ ಕೆ.ಆರ್.ಮಂಜು, ಮುಖಂಡ ಗೋವಿಂದರಾಜು, ಪ್ರವೀಣ್, ಮಹಾದೇವಪ್ಪ, ಸುನೀಲ್, ಉಷಾ, ಮಂಜುಳಾ, ರೇಣುಕಾ, ಮಂಜುಳಮ್ಮ, ಬಸವರಾಜು ಇತರರು ಇದ್ದರು.