

| ರಾಘವ ಶರ್ಮ ನಿಡ್ಲೆ ನವದೆಹಲಿ
ಸಮಾಜವಾದಿ (ಎಸ್ಪಿ) ಪಕ್ಷದಲ್ಲಿ ತನಗೆ ಭವಿಷ್ಯವಿಲ್ಲ ಎಂಬುದು ಮೊದಲೇ ಖಾತರಿಯಾಗಿದ್ದರೂ, ಬಿಜೆಪಿ ಸೇರ್ಪಡೆಗೆ ಸೂಕ್ತ ಸಮಯಕ್ಕಾಗಿ ಕಾದಿದ್ದ ಸಮಾಜವಾದಿ ಪಕ್ಷದ ನಾಯಕ, ಮಾಜಿ ಸಿಎಂ ಮುಲಾಯಂ ಸಿಂಗ್ ಯಾದವ್ ಸೊಸೆ ಅಪರ್ಣಾ ಯಾದವ್ ದೆಹಲಿಯಲ್ಲಿ ಅಧಿಕೃತವಾಗಿ ಕೇಸರಿಪಡೆ ಸೇರಿದ್ದಾರೆ.
ಮುಲಾಯಂ ಸಿಂಗ್ ಎರಡನೇ ಪತ್ನಿ ಸಾಧನಾ ಯಾದವ್ ಪುತ್ರ ಪ್ರತೀಕ್ ಯಾದವ್ರ ಪತ್ನಿ ಅಪರ್ಣಾ ಯಾದವ್ 2017ರಲ್ಲಿ ಲಖನೌ ಕ್ಯಾಂಟ್ ಕ್ಷೇತ್ರದಿಂದ ಎಸ್ಪಿ ಅಭ್ಯರ್ಥಿಯಾಗಿ ಬಿಜೆಪಿಯ ರೀಟಾ ಬಹುಗುಣ ಜೋಶಿ ವಿರುದ್ಧ ಸ್ಪರ್ಧಿಸಿ ಸೋತಿದ್ದರು. 2014ರಿಂದಲೂ ಪ್ರಧಾನಿ ನರೇಂದ್ರ ಮೋದಿ ಕಾರ್ಯಗಳನ್ನು ಮೆಚ್ಚಿರುವ ಅಪರ್ಣಾ ಯಾದವ್, 2017ರ ವಿಧಾನಸಭೆ ಮತ್ತು 2019ರ ಲೋಕಸಭೆ ಚುನಾವಣೆ ವೇಳೆ ಬಿಜೆಪಿ ಸೇರುವ ಮಾತಗಳು ಕೇಳಿಬಂದಿದ್ದವು. ಆದರೆ, ಯಾದವ ಪರಿವಾರದಲ್ಲಿ ಒಡಕಿರಬಾರದು ಎಂದು ಎಲ್ಲಾ ವೈಮನಸ್ಯಗಳನ್ನು ಬದಿಗೆ ಸರಿಸಲಾಗಿತ್ತು. ಎಸ್ಪಿಯಲ್ಲಿದ್ದುಕೊಂಡೇ, ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಕಾನೂನು ಸೇರಿ ಹಲವು ಯೋಜನೆಗಳನ್ನು ಮೆಚ್ಚಿರುವ ಅಪರ್ಣಾ ಯಾದವ್, ರಾಮ ಮಂದಿರ ನಿರ್ವಣಕ್ಕಾಗಿ 11 ಲಕ್ಷ ರೂ. ನೆರವನ್ನು ನೀಡಿ ಗಮನಸೆಳೆದಿದ್ದರು. ಸಾಧನಾ ಯಾದವ್ ಅಥವಾ ಕುಟುಂಬಸ್ಥರು ರಾಜಕೀಯಕ್ಕೆ ಬರುವುದನ್ನು ನಾನು ಒಪ್ಪಲಾರೆ ಎಂದು ಎಸ್ಪಿ ನಾಯಕ ಅಖಿಲೇಶ್ ಯಾದವ್ ತಂದೆ ಮುಲಾಯಂಗೆ ಅನೇಕ ಬಾರಿ ತಿಳಿಸಿದ್ದರು. 2017ರಲ್ಲೂ ಇದೇ ವಿಷಯದಲ್ಲಿ ಭಿನ್ನಮತ ಸೃಷ್ಟಿಯಾಗಿತ್ತು.
ಅಖಿಲೇಶ್, ಮುಲಾಯಂ ಸಿಂಗ್ ಮೊದಲನೇ ಪತ್ನಿ ಮಾಲತಿ ದೇವಿಯವರ ಪುತ್ರ. ಮಾಲತಿಯವರ ನಿಧನದ ನಂತರ 2003ರಲ್ಲಿ ತಮಗಿಂತ 20 ವರ್ಷ ಚಿಕ್ಕ ವಯಸ್ಸಿನ ಸಾಧನಾ ಯಾದವ್ರನ್ನು ಮುಲಾಯಂ ಸಿಂಗ್ 2ನೇ ವಿವಾಹವಾಗಿದ್ದರು. ಅದಾಗಲೇ ಸಾಧನಾರಿಗೆ ಪ್ರತೀಕ್ ಗುಪ್ತಾ (ಆಗ 16 ವರ್ಷ) ಎಂಬ ಪುತ್ರನಿದ್ದ. 1987ರಲ್ಲಿ ಚಂದ್ರಪ್ರಕಾಶ್ ಗುಪ್ತಾರನ್ನು ಮದುವೆಯಾಗಿದ್ದ ಸಾಧನಾ, ಕೆಲ ವರ್ಷಗಳ ಬಳಿಕ ಪತಿಗೆ ವಿಚ್ಛೇದನ ನೀಡಿದ್ದರು. ಮುಲಾಯಂ ಕುಟುಂಬ ಸೇರಿದ ಬಳಿಕ ತಮ್ಮನ್ನು ಪ್ರತೀಕ್ ಯಾದವ್ ಎಂದು ಗುರುತಿಸಿಕೊಂಡ ಸಾಧನಾ ಪುತ್ರ, ರಾಜಕೀಯಕ್ಕೆ ಬರಬೇಕೆಂಬ ಮಹತ್ವಾಕಾಂಕ್ಷೆ ನನ್ನಲ್ಲಿಲ್ಲ ಎಂದು ಅನೇಕ ಬಾರಿ ಸ್ಪಷ್ಟಪಡಿಸಿದ್ದರು. ಆದರೆ, ಸಾಧನಾ ಯಾದವ್ ಮಾತ್ರ ತಮ್ಮ ಪುತ್ರನಿಗೆ ಸೂಕ್ತ ಸ್ಥಾನಮಾನ ನೀಡಲೇಬೇಕು ಎಂದು ಮುಲಾಯಂ ಮೇಲೆ ಒತ್ತಡ ಹೇರುತ್ತಲೇ ಇದ್ದರು. ಹಾಗಂತ, ಪ್ರತೀಕ್ ತನ್ನ ಪತ್ನಿ ಅಪರ್ಣಾ ಯಾದವ್ರ ರಾಜಕೀಯ ಪ್ರವೇಶವನ್ನು ಎಂದಿಗೂ ವಿರೋಧಿಸಿರಲಿಲ್ಲ. ಅಖಿಲೇಶ್ ಯಾದವ್ಗೆ ಮಾತ್ರ ಇದು ಸುತಾರಾಂ ಒಪ್ಪಿಗೆ ಇರಲಿಲ್ಲ. 2017ರಲ್ಲಿ ಮುಲಾಯಂ ಒತ್ತಡದಿಂದಾಗಿ ಅರ್ಪಣಾ ಯಾದವ್ಗೆ ಲಖನೌ ಕ್ಯಾಂಟ್ ಕ್ಷೇತ್ರದ ಟಿಕೆಟ್ ಸಿಕ್ಕಿತ್ತು. ಈ ಸಲದ ವಿಧಾನಸಭೆ ಚುನಾವಣೆಗೆ ಕುಟುಂಬದ ಯಾರಿಗೂ ಟಿಕೆಟ್ ನೀಡಲಾಗುವುದಿಲ್ಲ ಎಂದು ಮೊದಲೇ ಪ್ರಕಟಿಸಿದ್ದ ಅಖಿಲೇಶ್ ಯಾದವ್, ಪರೋಕ್ಷವಾಗಿ ಅಪರ್ಣಾ ಯಾದವ್ಗೆ ನೀವು ಪಕ್ಷ ಬಿಡಬಹುದು ಎಂಬ ಸಂದೇಶ ರವಾನಿಸಿದ್ದರು. ಅಲ್ಲದೆ, ಅವರು ಪಕ್ಷ ಬಿಡುವುದಿದ್ದರೆ ಯಾರೂ ತಡೆಯಬಾರದು ಎಂದೂ ಪಕ್ಷದ ಮುಖಂಡರಿಗೆ ತಿಳಿಸಿದ್ದರು.
ಸಮಾಜವಾದಿ ಪಕ್ಷದ ರಾಜಕೀಯದಂಗಳಲ್ಲಿ ಸಾಧನಾ ಯಾದವ್ ಬಹಿರಂಗವಾಗಿ ಕಾಣಿಸಿಕೊಳ್ಳದಿದ್ದರೂ, ಮುಲಾಯಂ ಮೂಲಕ ಪಕ್ಷದ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುತ್ತಿದ್ದರು ಎಂಬ ಆರೋಪವಿದೆ. ಇದರಿಂದಾಗಿಯೇ ಅನೇಕ ಬಾರಿ ಅಖಿಲೇಶ್ ಬೆಂಬಲಿಗರು ಅಸಮಾಧಾನಗೊಂಡಿದ್ದುಂಟು. 2016ರಲ್ಲಿ ಪಕ್ಷದ ಎಂಎಲ್ಸಿ ಮತ್ತು ಅಖಿಲೇಶ್ ಆಪ್ತರಾಗಿದ್ದ ಉದಯ್ವೀರ್ ಮುಲಾಯಂರಿಗೆ ಪತ್ರ ಬರೆದು, ಸಾಧನಾ ಯಾದವ್ ಪಕ್ಷದಲ್ಲಿ ಬಿಕ್ಕಟ್ಟು ಸೃಷ್ಟಿಸುತ್ತಿದ್ದಾರೆ ಎಂದು ದೂರಿದ್ದರು. ನಂತರ ಉದಯ್ವೀರ್ನ್ನು ಪಕ್ಷದಿಂದ ಉಚ್ಚಾಟಿಸಲಾಗಿತ್ತು. ಅಖಿಲೇಶ್ ಅಥವಾ ಪತ್ನಿ ಡಿಂಪಲ್ ಯಾದವ್ ಎಂದಿಗೂ ಸಾಧನಾ ಕುಟುಂಬಸ್ಥರನ್ನು ತಮ್ಮ ರಾಜಕೀಯ ಚಟುವಟಿಕೆಗಳಲ್ಲಿ ಸೇರಿಸಿಕೊಂಡದ್ದಿಲ್ಲ. ಮುಲಾಯಂ ಕಿರಿಯ ಸೋದರ ಶಿವಪಾಲ್ ಯಾದವ್ ಸಾಧನಾ ಯಾದವ್ಗೆ ಆಪ್ತರಾಗಿದ್ದರಿಂದ ಅಖಿಲೇಶ್ ಜತೆಗಿನ ಸಂಬಂಧ ಅಷ್ಟಕ್ಕಷ್ಟೇ ಎಂಬಂತಿತ್ತು. 2017ರ ಚುನಾವಣೆ ಹೊಸ್ತಿಲಲ್ಲಿ ಕುಟುಂಬ ಕಲಹ ತಾರಕಕ್ಕೇರಿತ್ತು ಮತ್ತು ಸಮಾಜವಾದಿ ಪಕ್ಷದ ಚುನಾವಣೆ ಹಿನ್ನಡೆಗೂ ಒಂದು ಕಾರಣವಾಗಿತ್ತು. ಇತ್ತೀಚಿನ ದಿನಗಳಲ್ಲಿ ಶಿವಪಾಲ್-ಅಖಿಲೇಶ್ ನಡುವೆ ಸಂಬಂಧ ಸುಧಾರಿಸಿದೆ. ಅವರು ಬಿಜೆಪಿ ಸೇರುತ್ತಾರೆಂಬ ವದಂತಿಗಳ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ಶಿವಪಾಲ್, ನಾನು ಅಖಿಲೇಶ್ ನಾಯಕತ್ವ ಬೆಂಬಲಿಸುತ್ತಿದ್ದು, ಬಿಜೆಪಿ ಸರ್ಕಾರ ಬಡಿದಟ್ಟುವುದೇ ಗುರಿ ಎಂದು ಸ್ಪಷ್ಟಪಡಿಸಿದ್ದಾರೆ.
ಯಾರಿಗೆ ಟಿಕೆಟ್ ಕೊಡಲು ನಮಗೆ ಸಾಧ್ಯವಾಗುತ್ತಿಲ್ಲವೋ ಅವರಿಗೆ ಬಿಜೆಪಿ ಟಿಕೆಟ್ ನೀಡುತ್ತಿದೆ. ಅಪರ್ಣಾ ಯಾದವ್ಗೆ ಅಭಿನಂದನೆಗಳು. ಸಮಾಜವಾದಿ ಪಕ್ಷದ ಸಿದ್ಧಾಂತ ವಿಸ್ತಾರಗೊಳ್ಳುತ್ತಿ ರುವುದಕ್ಕೆ ಖುಷಿಯಿದ್ದು, ಅದು ಬಿಜೆಪಿಯನ್ನೂ ತಲುಪುತ್ತಿದೆ. | ಅಖಿಲೇಶ್ ಯಾದವ್ ಸಮಾಜವಾದಿ ಪಕ್ಷದ ನಾಯಕ ನಾನು ಯಾದವ ಪರಿವಾರದಿಂದ ವಿಮುಖಳಾಗಿಲ್ಲ. ರಾಷ್ಟ್ರಧರ್ಮವೇ ನನ್ನ ಪ್ರಥಮ ಆದ್ಯತೆ. ಪ್ರಧಾನಿ ಮೋದಿಯವರಿಂದ ಪ್ರಭಾವಿತಳಾಗಿದ್ದೇನೆ. ಕಳೆದೈದು ವರ್ಷದಲ್ಲಿ ಯೋಗಿ ಸರ್ಕಾರ ಮಾಡಿರುವ ಸಾಧನೆಯೂ ಗಮನಸೆಳೆದಿದೆ. | ಅಪರ್ಣಾ ಯಾದವ್ ಬಿಜೆಪಿ ಸೇರ್ಪಡೆ ವೇಳೆ
ಗೋವಾಕ್ಕೆ ಆಪ್ ಸಿಎಂ ಅಭ್ಯರ್ಥಿ: ವಕೀಲ ಮತ್ತು ಸಾಮಾಜಿಕ ಕಾರ್ಯಕರ್ತ ಅಮಿತ್ ಪಾಲೇಕರ್ ಅವರನ್ನು ಗೋವಾ ಚುನಾವಣೆಗೆ ಸಿಎಂ ಅಭ್ಯರ್ಥಿಯಾಗಿ ಆಮ್ ಆದ್ಮಿ ಪಕ್ಷ ಘೊಷಣೆ ಮಾಡಿದೆ. ಗೋವಾ ಜನಸಂಖ್ಯೆಯ ಶೇ.35ರಷ್ಟಿರುವ ಒಬಿಸಿ ಭಂಡಾರಿ ಸಮುದಾಯದ ಪಾಲೇಕರ್, ಇತ್ತೀಚೆಗೆ ಹಳೆ ಗೋವಾದ ಪಾರಂಪರಿಕ ತಾಣದಲ್ಲಿ ಅಕ್ರಮ ನಿರ್ವಣಗಳನ್ನು ವಿರೋಧಿಸಿ ಉಪವಾಸ ಸತ್ಯಾಗ್ರಹ ನಡೆಸಿದ್ದರು. ಕಳೆದ ಅಕ್ಟೋಬರ್ನಲ್ಲಿ ಎಎಪಿಗೆ ಸೇರ್ಪಡೆಯಾದ ಅವರು ಬಿಜೆಪಿ ಪ್ರತಿನಿಧಿಸುವ ಸೆಂಟ್ ಕ್ರೂಜ್ ಕ್ಷೇತ್ರದಿಂದ ಆಪ್ ಅಭ್ಯರ್ಥಿಯಾಗಿದ್ದಾರೆ.
ಅಖಿಲೇಶ್ ಸ್ಪರ್ಧೆ?: ಆಜಂಗಢ ಲೋಕಸಭೆ ಕ್ಷೇತ್ರದ ವ್ಯಾಪ್ತಿಯ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಬೇಕು ಎಂಬ ಅಭಿಪ್ರಾಯವಿದ್ದು, ಜನರು ಆಶೀರ್ವದಿಸಿದರೆ ಸ್ಪರ್ಧೆ ಮಾಡುವೆ ಎಂದು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಹೇಳಿದ್ದಾರೆ. ಪಕ್ಷದ ನಾಯಕರೂ ಅಖಿಲೇಶ್ ಮೇಲೆ ಸ್ಪರ್ಧೆ ಮಾಡುವಂತೆ ಒತ್ತಡ ಹೇರಿದ್ದಾರೆನ್ನಲಾಗಿದೆ. ಈ ಹಿಂದೆ ನಾನು ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿಲ್ಲ ಎಂದು ಅಖಿಲೇಶ್ ತಿಳಿಸಿದ್ದರು.
ಎನ್ಡಿಎ ಮೈತ್ರಿ ಘೋಷಣೆ:ಉತ್ತರ ಪ್ರದೇಶದಲ್ಲಿ ಕೇಂದ್ರ ಸಚಿವೆ ಅನುಪ್ರಿಯಾ ಪಟೇಲ್ ನೇತೃತ್ವದ ಅಪ್ನಾ ದಳ ಮತ್ತು ನಿಷಾದ್ ಪಕ್ಷದೊಂದಿಗೆ ಸೀಟು ಹಂಚಿಕೆ ಮಾಡುವುದಾಗಿ ಬಿಜೆಪಿ ಘೊಷಿಸಿದೆ. ಮೂರು ಪಕ್ಷಗಳು ಸ್ಪರ್ಧಿಸುವ ನಿಖರ ಅಂಕಿ ಅಂಶವನ್ನು ನಾಯಕರು ಬಹಿರಂಗಪಡಿಸಿಲ್ಲ.
ಬಿಪಿನ್ ರಾವತ್ ಸೋದರ ಬಿಜೆಪಿಗೆ: ಭಾರತದ ಮೊದಲ ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ಆಗಿದ್ದ ದಿವಂಗತ ಜನರಲ್ ಬಿಪಿನ್ ರಾವತ್ ಅವರ ಸೋದರ ಕರ್ನಲ್ ವಿಜಯ್ ರಾವತ್ ಉತ್ತರಾಖಂಡದಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದಾರೆ. ನನ್ನ ತಂದೆ ಜನರಲ್ ಲಕ್ಷ್ಮಣ್ ಸಿಂಗ್ ರಾವತ್ ಸೇನೆಯಿಂದ ನಿವೃತ್ತರಾದ ಬಳಿಕ ಬಿಜೆಪಿ ಸೇರಿದ್ದರು. ಪ್ರಧಾನಿ ಮೋದಿ ಅವರ ದೂರದೃಷ್ಟಿ ನಮ್ಮೆಲ್ಲರನ್ನು ಆಕರ್ಷಿಸಿದೆ. ಹೀಗಾಗಿಯೇ ನಾನು ಈ ಪಕ್ಷ ಸೇರುತ್ತಿದ್ದೇನೆ ಎಂದು ವಿಜಯ್ ರಾವತ್ ಹೇಳಿದ್ದಾರೆ.