

ಕೇರಳ: ಸೌತ್ ಬ್ಯೂಟಿ, ಕರಾವಳಿ ಬೆಡಗಿ ನಟಿ ಅನುಷ್ಕಾ ಶೆಟ್ಟಿ ಅಭಿನಯಿಸುತ್ತಿರುವ ಮುಂದಿನ ಬಿಗ್ ಬಿಜೆಟ್ ಚಿತ್ರದ ಬಗ್ಗೆ ಇದೀಗ ಹೊಸ ಅಪ್ಟೇಟ್ ಹೊರಬಿದ್ದಿದೆ. ಇಷ್ಟು ವರ್ಷಗಳ ಕಾಲ ತೆಲುಗು ಚಿತ್ರರಂಗದಲ್ಲಿ ಹೆಚ್ಚಾಗಿ ಗುರುತಿಸಿಕೊಂಡಿರುವ 'ಸ್ವೀಟಿ' ಈಗ ಮಾಲಿವುಡ್ಗೆ ಎಂಟ್ರಿ ಕೊಡುತ್ತಿರುವುದು ಸದ್ಯ ಸಿನಿಪ್ರಿಯರ ಕುತೂಹಲಕ್ಕೆ ಕಾರಣವಾಗಿದೆ.
ಬಹುನಿರೀಕ್ಷಿತ 'ಕಥನಾರ್' ಚಿತ್ರತಂಡ, ಅನುಷ್ಕಾ ಶೆಟ್ಟಿ ಅವರ ಜನ್ಮದಿನದಂದೇ ಪಾತ್ರದ ಫಸ್ಟ್ ಲುಕ್ ಅನಾವರಣಗೊಳಿಸಿದೆ. ಬಿಗ್ ಬಜೆಟ್ ಚಿತ್ರ ಎಂದು ಹೇಳಲಾದ ಈ ಸಿನಿಮಾದಲ್ಲಿ, ಅನುಷ್ಕಾ 'ನೀಲಾ' ಪಾತ್ರದಲ್ಲಿ ಕಂಗೊಳಿಸಿದ್ದಾರೆ. ಪೋಸ್ಟರ್ ನಟಿಯ ಅಭಿಮಾನಿಗಳ ಹುಬ್ಬೇರಿಸಿದ್ದು, ಚಿತ್ರದ ಮೇಲಿನ ಕೌತುಕವನ್ನು ದುಪಟ್ಟಾಗಿಸಿದೆ.
ಅನುಷ್ಕಾ ಜನ್ಮದಿನದಂದು ಪೋಸ್ಟರ್ ರಿವೀಲ್ ಮಾಡಿರುವ ಚಿತ್ರತಂಡ, ನಟಿಗೆ ವಿಶೇಷವಾಗಿ ಶುಭಾಶಯ ಕೋರಿದೆ. ರೋಜಿನ್ ಥಾಮಸ್ ನಿರ್ದೇಶಿಸಿರುವ ಈ ಚಿತ್ರವು, ಕಡಮತ್ತತ್ತು ಕಥನಾರ್ ಅವರ ಕಥೆಯನ್ನು ಹೇಳಲಿದೆ. ಸಿನಿಮಾ ಎರಡು ಭಾಗವಾಗಿ ಮೂಡಿಬರಲಿದ್ದು, ಮೊದಲ ಭಾಗ ಶೀಘ್ರವೇ ತೆರೆಗೆ ಬರಲು ಸಿದ್ಧವಾಗುತ್ತಿದೆ. ಅನುಷ್ಕಾ ಶೆಟ್ಟಿ, ಜಯಸೂರ್ಯ, ಪ್ರಭುದೇವ ಸೇರಿದಂತೆ ಮುಂತಾದ ಕಲಾವಿದರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ವಿಶೇವಾಗಿ ಚಿತ್ರವು ಮಲಯಾಳಂ, ಹಿಂದಿ, ತಮಿಳು, ತೆಲುಗು, ಕನ್ನಡ, ಇಂಗ್ಲಿಷ್, ಬಂಗಾಳಿ, ಚೈನೀಸ್, ಫ್ರೆಂಚ್, ಕೊರಿಯನ್, ಇಟಾಲಿಯನ್, ರಷ್ಯನ್, ಇಂಡೋನೇಷಿಯನ್, ಜಪಾನೀಸ್ ಮತ್ತು ಜರ್ಮನ್ ಸೇರಿದಂತೆ ಸುಮಾರು 17 ಭಾಷೆಗಳಲ್ಲಿ ರಿಲೀಸ್ ಆಗಲು ಎದುರುನೋಡುತ್ತಿದೆ. ಗೋಕುಲಮ್ ಮೂವೀಸ್ ಬ್ಯಾನರ್ ಅಡಿಯಲ್ಲಿ ಗೋಕುಲಮ್ ಗೋಪಾಲನ್ ಚಿತ್ರವನ್ನು ನಿರ್ಮಿಸಿದ್ದಾರೆ,(ಏಜೆನ್ಸೀಸ್).