ದುರಂತಕ್ಕೆ ಪೈಲೆಟ್​ ದೂಷಿಸಬೇಡಿ... ಕೇಂದ್ರಕ್ಕೆ ಸುಪ್ರೀಂ ಕೋರ್ಟ್​ ನೋಟಿಸ್! | Air India Crash

Untitled design (40)
Published on

ನವದೆಹಲಿ: ಭಾರತೀಯ ವಾಯುಯಾನ ಇತಿಹಾಸದಲ್ಲೇ ಅತ್ಯಂತ ಘೋರ ದುರಂತ (Air India Crash) ಎಂದು ಕರೆಯಲಾದ ಅಹಮದಾಬಾದ್ ಏರ್ ಇಂಡಿಯಾ​ ವಿಮಾನ ಅಪಘಾತದ ಬಗ್ಗೆ ಇಂದಿಗೂ ಕೆಲವರಲ್ಲಿ ಗೊಂದಲಗಳು ಬಗೆಹರಿದಿಲ್ಲ. ವಿಮಾನ ದುರಂತದ ಪ್ರಾಥಮಿಕ ವರದಿ ಹೊರಬಿದ್ದಿದ್ದರೂ ದುರಂತಕ್ಕೆ ಪೈಲೆಟ್​ ನೇರ ಹೊಣೆಯೇ? ಎಂಬುದು ಅಸ್ಪಷ್ಟವಾಗಿದೆ. ಇದಕ್ಕೆ ಸಂಬಂಧಿಸಿದಂತೆ ಮೃತ ಪೈಲೆಟ್​ ತಂದೆ ಸಲ್ಲಿಸಿದ್ದ ಮೇಲ್ಮನವಿಯನ್ನು ಇಂದು ಸುಪ್ರೀಂ ಕೋರ್ಟ್​ ಆಲಿಸಿತು.

ಘಟನೆಯ ಕಾರಣವನ್ನು ನಿರ್ಧರಿಸಲು ಮತ್ತು ಹೊಣೆಗಾರಿಕೆಯನ್ನು ಖಚಿತಪಡಿಸಿಕೊಳ್ಳಲು ಸ್ವತಂತ್ರ ತನಿಖೆ ನಡೆಸಬೇಕೆಂದು ಕೋರಿ ಏರ್ ಇಂಡಿಯಾ ಪೈಲಟ್‌ ಸುಮೀತ್ ಸಭರ್ವಾಲ್ ತಂದೆ ಸಲ್ಲಿಸಿದ್ದ ಅರ್ಜಿಯ ಮೇರೆಗೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ. ನ್ಯಾಯಮೂರ್ತಿಗಳಾದ ಜೋಯ್ಮಲ್ಯ ಬಾಗ್ಚಿ ಮತ್ತು ಜೆ ಸೂರ್ಯಕಾಂತ್ ಅವರನ್ನೊಳಗೊಂಡ ಪೀಠವು, ಈ ಅಪಘಾತಕ್ಕೆ ಪೈಲೆಟ್​ ಅನ್ನು ದೂಷಿಸುವುದು ಸರಿಯಲ್ಲ. ಅವರು ಈಗಾಗಲೇ ಮೃತಪಟ್ಟಿದ್ದಾರೆ ಎಂದು ಅಭಿಪ್ರಾಯಿಸಿತು.

ಏರ್ ಇಂಡಿಯಾ ಅಹಮದಾಬಾದ್ ಅಪಘಾತಕ್ಕೆ ಪೈಲಟ್ ಅನ್ನು ದೂಷಿಸಬಾರದು. ಇದು ದುಃಖಕರ ಘಟನೆ. ಈಗಾಗಲೇ ಹೊರಬಂದಿರುವ ಪ್ರಾಥಮಿಕ ವರದಿಯಲ್ಲಿ ಪೈಲಟ್ ತಪ್ಪು ಮಾಡಿದ್ದಾರೆ ಎಂದು ಎಲ್ಲಿಯೂ ಉಲ್ಲೇಖವಾಗಿಲ್ಲ. ತಪ್ಪು ವರದಿಗಳು ಇರಬಾರದು" ಎಂದು ಸುಪ್ರೀಂ ಕೋರ್ಟ್ ಹೇಳಿತು. ಅರ್ಜಿಗೆ ಸಂಬಂಧಿಸಿದಂತೆ ಕೇಂದ್ರ ಮತ್ತು ಡಿಜಿಸಿಎಗೆ ನೋಟಿಸ್ ಜಾರಿ ಮಾಡಿದ ಸುಪ್ರೀಂ ಕೋರ್ಟ್​, ವಿಚಾರಣೆಯನ್ನು ಮುಂದಿನ ವಾರಕ್ಕೆ ಮುಂದೂಡಿದೆ.

241 ಪ್ರಯಾಣಿಕರು ದುರ್ಮರಣ

ಅಹಮದಾಬಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್‌ಗೆ ಹೊರಟಿದ್ದ AI-171 ಏರ್​ ಇಂಡಿಯಾ ವಿಮಾನವು ಭೀಕರ ಅಪಘಾತಕ್ಕೀಡಾದ ಘಟನೆ ಎಂದಿಗೂ ಮರೆಯಲಾಗದು. ಭಾರತೀಯ ವಿಮಾನಯಾನ ಇತಿಹಾಸದಲ್ಲೇ ಅತ್ಯಂತ ಘೋರ ದುರಂತ ಎನ್ನಲಾದ ಏರ್ ಇಂಡಿಯಾ ವಿಮಾನ ಅಪಘಾತ, 241 ಪ್ರಯಾಣಿಕರ ಪ್ರಾಣವನ್ನು ಕಸಿದುಕೊಳ್ಳುವುದಲ್ಲದೇ ವೈದ್ಯಕೀಯ ಕಾಲೇಜು ಕಟ್ಟಡಕ್ಕೆ ಡಿಕ್ಕಿ ಹೊಡೆದ ಪರಿಣಾಮ ಅಲ್ಲಿನ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳ ಉಸಿರನ್ನೂ ಕಸಿದುಕೊಂಡಿತು. ಈ ದುರಂತದಲ್ಲಿ ಒಬ್ಬ ಪ್ರಯಾಣಿಕ ಮಾತ್ರ ಪವಾಡದಂತೆ ಬದುಕುಳಿದಿದ್ದು, ಒಟ್ಟಾರೆಯಾಗಿ 260 ಮಂದಿ ಉಸಿರು ಚೆಲ್ಲಿದರು.

ಅಪಘಾತದ ತನಿಖೆ ನಡೆಸಿದ ವಿಮಾನ ಅಪಘಾತ ತನಿಖಾ ಬ್ಯೂರೋ (AAIB) ತನ್ನ ಪ್ರಾಥಮಿಕ ವರದಿಯನ್ನು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ಮತ್ತು ಸಂಬಂಧಿತ ಅಧಿಕಾರಿಗಳಿಗೆ ಸಲ್ಲಿಸಿತು. ಆದರೆ, ಪೈಲೆಟ್​ ಉದ್ದೇಶಪೂರ್ವಕಾಗಿ ಇಂಧನ ಸ್ವಿಚ್​ ಅನ್ನು ಆಫ್​ ಮಾಡಿದ್ದಾರೆ ಎಂಬ ಆರೋಪಗಳು ಕೇಳಿಬಂದ ಹಿನ್ನೆಲೆ ಮೃತ ಪೈಲೆಟ್​ ತಂದೆ ಸುಪ್ರೀಂ ಕೋರ್ಟ್​ಗೆ ಸ್ವತಂತ್ರ ತನಿಖೆಗೆ ಅನುಮತಿ ನೀಡುವಂತೆ ಮೇಲ್ಮನವಿ ಸಲ್ಲಿಸಿದರು,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net