2026 ಟಿ20 ವಿಶ್ವಕಪ್ ಫೈನಲ್​ಗೆ ಚಿನ್ನಸ್ವಾಮಿ ಸ್ಟೇಡಿಯಂ ಬೇಡ! ಅಹಮದಾಬಾದ್​ ಕ್ರೀಡಾಂಗಣವೇ ಅಂತಿಮ: ವರದಿ | T20 World Cup

Untitled design (38)
Published on

ನವದೆಹಲಿ: ಮುಂಬರುವ ಟಿ20 ವಿಶ್ವಕಪ್​ ಫೈನಲ್​ಗೆ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣವನ್ನು ಆಯ್ಕೆ ಮಾಡಬೇಕಿದ್ದ ಬಿಸಿಸಿಐ, ಇದೀಗ ಬೆಂಗಳೂರನ್ನು ಪರಿಗಣಿಸದೆ, ಫೈನಲ್​ ಆತಿಥ್ಯ ವಹಿಸಲು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣವನ್ನು (T20 World Cup Final) ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು 'ಮಿಂಟ್'​ ಪತ್ರಿಕೆ ತನ್ನ ವರದಿಯಲ್ಲಿ ತಿಳಿಸಿದೆ.

ಕಾಲ್ತುಳಿತ ಪ್ರಕರಣದಿಂದ ಬೇಡವಾಯ್ತಾ?

ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣ, ಕೋಲ್ಕತ್ತಾದ ಐಕಾನಿಕ್ ಈಡನ್ ಗಾರ್ಡನ್ಸ್, ಚೆನ್ನೈನ ಎಂ. ಚಿದಂಬರಂ ಮತ್ತು ಮುಂಬೈನ ವಾಂಖೆಡೆ ಕ್ರೀಡಾಂಗಣಗಳು ಮುಂದಿನ ವರ್ಷ ಫೆಬ್ರವರಿಯಲ್ಲಿ ಪ್ರಾರಂಭವಾಗುವ ಮೆಗಾ ಈವೆಂಟ್ ಆಯೋಜನೆಗೆ ಆಯ್ಕೆಯಾಗಿರುವ ನಾಲ್ಕು ಭಾರತೀಯ ಕ್ರೀಡಾಂಗಣಗಳು. ಈ ಪಟ್ಟಿಯಲ್ಲಿ ಫೈನಲ್​ ಆತಿಥ್ಯವನ್ನು ಬೆಂಗಳೂರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂಗೆ ನೀಡಬೇಕಿತ್ತು. ಆದರೆ, 2025ರ ಜೂನ್​ 04ರಂದು ಸಂಭವಿಸಿದ ಕಾಲ್ತುಳಿತ ಪ್ರಕರಣವನ್ನು ಗಮನದಲ್ಲಿಟ್ಟುಕೊಂಡು ಬಿಸಿಸಿಐ, ಅಹಮದಾಬಾದ್​ ಸ್ಟೇಡಿಯಂ ಅನ್ನು ಅಂತಿಮ ಆಯ್ಕೆಯಾಗಿ ಪರಿಗಣಿಸಿದೆ.

ಬಿಸಿಸಿಐ ನಿರ್ಧಾರ

2026ರಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಟೂರ್ನಿಯನ್ನು ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆಯೋಜಿಸಲಿದೆ. ಶ್ರೀಲಂಕಾದ ಮೂರು ಕ್ರೀಡಾಂಗಣಗಳು ಪಂದ್ಯಗಳಿಗೆ ಆತಿಥ್ಯ ವಹಿಸಲಿವೆ ಎಂದು ವರದಿ ಉಲ್ಲೇಖಿಸಿದೆ. ಈ ಕುರಿತು ಶೀಘ್ರವೇ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಅಧಿಕೃತ ಘೋಷಿಸುವ ನಿರೀಕ್ಷೆಯಿದೆ. ಇತ್ತೀಚೆಗೆ, ಬಿಸಿಸಿಐ ಉನ್ನತ ಅಧಿಕಾರಿಗಳು ನಡೆಸಿದ ಸಭೆಯ ನಂತರ ಈ ವಿಚಾರ ಹೊರಬಿದ್ದಿದೆ.

ಸಭೆಯಲ್ಲಿ, 2023ರ ಏಕದಿನ ವಿಶ್ವಕಪ್‌ಗಿಂತ ಭಿನ್ನವಾಗಿ, ಟಿ20 ವಿಶ್ವಕಪ್ 2026 ಅನ್ನು ಕಡಿಮೆ ನಗರಗಳಲ್ಲಿ ಆಡಿಸುವ ಬಗ್ಗೆ ಚರ್ಚಿಸಲಾಗಿದೆ. ಮತ್ತು ಆಯ್ಕೆ ಮಾಡಿದ ಸ್ಥಳದಲ್ಲಿ ಕನಿಷ್ಠ ಆರು ಪಂದ್ಯಗಳು ಆಡಿಸುವ ನಿರೀಕ್ಷೆಯಿದೆ. ದಿನಾಂಕಗಳನ್ನು ಇನ್ನೂ ಅಧಿಕೃತವಾಗಿ ಹೊರಬೀಳದಿದ್ದರೂ, ಟೂರ್ನಿ ಫೆಬ್ರವರಿ 7ರಿಂದ ಪ್ರಾರಂಭವಾಗಲಿದ್ದು, ಫೈನಲ್ ಮಾರ್ಚ್ 8ರಂದು ನಡೆಯುವ ಸಾಧ್ಯತೆಯಿದೆ.

ಚಿನ್ನಸ್ವಾಮಿ ಕಾಲ್ತುಳಿತ ಪ್ರಕರಣ

2025ರ ಜೂನ್​ 03ರಂದು ಐಪಿಎಲ್ 18ನೇ ಆವೃತ್ತಿಯ​ ಟ್ರೋಫಿ ಎತ್ತಿಹಿಡಿದ ಆರ್​ಸಿಬಿ, ಲೀಗ್ ಇತಿಹಾಸದಲ್ಲಿ ತನ್ನ ಚೊಚ್ಚಲ ಕಪ್​ಗೆ ಮುತ್ತಿಟ್ಟಿತು. ಗೆದ್ದ ಮರುದಿನವೇ ಜೂ.04ರಂದು ಬೆಂಗಳೂರಿಗೆ ಆಗಮಿಸಿದ ಫ್ರಾಂಚೈಸಿ ಆಟಗಾರರು, ರಾಜ್ಯ ಸರ್ಕಾರ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮಕ್ಕೆ ಆಗಮಿಸಿ, ದೊಡ್ಡ ಕಾಲ್ತುಳಿತ ಘಟನೆಗೆ ಪರೋಕ್ಷವಾಗಿ ಸಾಕ್ಷಿಯಾಯಿತು. ಈ ಭೀಕರ ಘಟನೆಯಲ್ಲಿ 11 ಅಭಿಮಾನಿಗಳು ಮೃತಪಟ್ಟ ಹಿನ್ನೆಲೆ ಆರ್​ಸಿಬಿ ಮಾಲೀಕರ ವಿರುದ್ಧ ಕೇಸ್​ ದಾಖಲಾಯಿತು. ಪ್ರಕರಣ ಕೋರ್ಟ್​ ಮೆಟ್ಟಿಲೇರಿತು. ಈ ಘಟನೆಯಿಂದ ಫ್ರಾಂಚೈಸಿ ಮತ್ತು ಕ್ರೀಡಾಂಗಣಕ್ಕೆ ಒಂದು ಕಪ್ಪುಚುಕ್ಕೆ ಅಂಟಿರುವುದಂತು ಸ್ಪಷ್ಟ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net