ಹಿಮ, ಮರುಭೂಮಿ, ಹಸಿರು.. 3 ಕಾಲಗಳಲ್ಲಿ 'ಬಿಲ್ಲ ರಂಗ ಭಾಷಾ' ಅವತಾರ! ಕಿಚ್ಚನ ಫ್ಯಾನ್ಸ್​ಗೆ ಇದು ಸಿಹಿ ಸುದ್ದಿ

ವಿಜಯವಾಣಿ (86)
Published on

ಬೆಂಗಳೂರು: ಕನ್ನಡ ಚಿತ್ರರಂಗದ ಪೈಲ್ವಾನ್​, ಅಭಿನಯ ಚಕ್ರವರ್ತಿ ಹಾಗೂ ಎಲ್ಲರ ಅಚ್ಚುಮೆಚ್ಚಿನ ಬಾದ್​ಷಾ ನಟ ಕಿಚ್ಚ ಸುದೀಪ್​ ಇಂದು (ಸೆ.02) 51ನೇ ಜನ್ಮದಿನಕ್ಕೆ ಕಾಲಿಟ್ಟಿದ್ದಾರೆ. ಎಂದಿನಂತೆ ಈ ವರ್ಷವು ತಮ್ಮ ಹುಟ್ಟುಹಬ್ಬವನ್ನು ಸರಳವಾಗಿ ಅಭಿಮಾನಿಗಳೊಂದಿಗೆ ಆಚರಿಸಿಕೊಳ್ಳುವ ಸುದೀಪ್, ಪ್ರಥಮ ಬಾರಿಗೆ ಫ್ಯಾನ್ಸ್​ಗಳನ್ನು ಜೆಪಿ ನಗರದ ಟೆಲಿಫೋನ್​ ಎಕ್ಸ್​ಚೇಂಜ್​ ಆಫೀಸ್​ ಬಳಿ ಇರುವ ಎಂಇಎಸ್​ ಮೈದಾನಕ್ಕೆ ಆಹ್ವಾನಿಸಿ, ಅಲ್ಲಿಯೇ ಸಿಗುತ್ತೇನೆ ಬನ್ನಿ ಎಂದು ಹೇಳಿದ್ದರು. ಇದೀಗ ಅದರಂತೆಯೇ ಅಭಿಮಾನಿ ಬಳಗದೊಂದಿಗೆ ಬೆಳಗ್ಗೆ 10ರಿಂದ 12 ಗಂಟೆಯವರೆಗೆ ಸಮಯ ಕಳೆಯಲಿದ್ದಾರೆ.

ಮೊನ್ನೆಯಷ್ಟೇ ಪತ್ರಿಕಾಗೋಷ್ಠಿ ಕರೆದಿದ್ದ ಕಿಚ್ಚ ಈ ಬಾರಿಯು ತಾವು ಸರಳವಾಗಿ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವುದನ್ನು ಅಭಿಮಾನಿಗಳಲ್ಲಿ ಮನವಿ ಮಾಡಿದ್ದರು. ಇಂದು ಮಧ್ಯರಾತ್ರಿ 51ನೇ ವಸಂತಕ್ಕೆ ಕಾಲಿಟ್ಟ ಸುದೀಪ್​ ತಮ್ಮ ಪತ್ನಿ ಪ್ರಿಯಾ ಸುದೀಪ್​, ಪುತ್ರಿ ಸಾನ್ವಿ ಹಾಗೂ ಕುಟುಂಬಸ್ಥರ ಸಮ್ಮುಖದಲ್ಲಿ ಕೇಕ್​ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡರು. ಚಿತ್ರರಂಗ ಸೇರಿದಂತೆ ರಾಜಕೀಯ ಗಣ್ಯರಿಂದ ನಟನಿಗೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಇನ್ನು ಈ ಮಧ್ಯೆ ನಿರ್ದೇಶಕ ಅನೂಪ್ ಭಂಡಾರಿ ನಿರ್ದೇಶನದ ಹಾಗೂ ಕಿಚ್ಚ ಅಭಿನಯದ 'ಬಿಲ್ಲ ರಂಗ ಭಾಷಾ' ಚಿತ್ರದ ಕಿರು ವಿಡಿಯೋವೊಂದು ನಟನ ಜನ್ಮದಿನದಂದೇ ಬಿಡುಗಡೆಗೊಳಿಸಿರುವ ಚಿತ್ರತಂಡ ಫ್ಯಾನ್ಸ್​ ಸಂತಸವನ್ನು ಇದೀಗ ದುಪ್ಪಟ್ಟಾಗಿಸಿದೆ.

ಇತ್ತೀಚೆಗಷ್ಟೇ 'ಮ್ಯಾಕ್ಸ್' ಚಿತ್ರದ ಚಿತ್ರೀಕರಣ ಕೆಲಸಗಳನ್ನು ಮುಗಿಸಿರುವ ಕಿಚ್ಚ ಇದೀಗ ‘ಬಿಲ್ಲಾ ರಂಗ ಭಾಷಾ’ ಸಿನಿಮಾಗಾಗಿ ಭರ್ಜರಿ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಸದ್ಯ ಈ ಸಿನಿಮಾದ ಚಿತ್ರೀಕರಣದತ್ತ ಮುಖ ಮಾಡಿರುವ ಸುದೀಪ್, ಫ್ಯಾನ್ಸ್​ಗೆ ಖುಷಿಯಾಗುವಂತ ಲುಕ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಸದ್ಯ ಪ್ರಿ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದ್ದು, ಮುಂದಿನ ಐದಾರು ತಿಂಗಳಲ್ಲಿ ಶೂಟಿಂಗ್ ಶುರುವಾಗಲಿದೆ ಎಂದು ಹೇಳಲಾಗಿದೆ. ಇಂದು ಕಿಚ್ಚನ ಜನ್ಮದಿನಕ್ಕೆ ರಿಲೀಸ್ ಮಾಡಿರುವ ಕಿರು ವಿಡಿಯೋದಲ್ಲಿ ಹಿಮ, ಮರುಭೂಮಿ, ಹಸಿರು ಪ್ರದೇಶಗಳು ಕಂಡುಬಂದಿವೆ. ಇದೆಲ್ಲಾ ನೋಡಿದ್ರೆ ಬಹುಶಃ ಸುದೀಪ್​ ಅವರು ಮೂರು ಕಾಲಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುಳಿವು ಸಿಕ್ಕಿದೆ.

ಬಿಗ್ ಬಜೆಟ್ ಚಿತ್ರ ಇದಾಗಿದ್ದು, 'ವಿಕ್ರಾಂತ ರೋಣ' ರೂವಾರಿ ಅನೂಪ್ ಭಂಡಾರಿ ನಿರ್ದೇಶನವಾಗಿರುವುದು ಮತ್ತಷ್ಟು ವಿಶೇಷ. 'ಹನುಮಾನ್' ಚಿತ್ರದ ತಯಾರಕರೇ ಕಿಚ್ಚನ 'ಬಿಲ್ಲ ರಂಗ ಭಾಷಾ' ಚಿತ್ರಕ್ಕೆ ಕೈಜೋಡಿಸಿರುವುದು ಚಿತ್ರತಂಡಕ್ಕೆ ಆನೆ ಬಲ ತುಂಬಿದಂತಿದೆ. ಸದ್ಯ ಈ ವಿಡಿಯೋ ನೋಡಿದ ಸುದೀಪ್ ಅಭಿಮಾನಿಗಳು ಸಖತ್ ಥ್ರಿಲ್ ಆಗಿದ್ದು, ಸಿನಿಮಾದಲ್ಲಿ ನಟನ ಲುಕ್​, ಅಭಿನಯವನ್ನು ಬೆಳ್ಳಿ ಪರದೆಯ ಮೇಲೆ ಕಣ್ತುಂಬಿಕೊಳ್ಳಲು ತೀವ್ರ ಕಾತರ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net