

ದಾವಣಗೆರೆ : ಅಂತರಂಗ ಶುದ್ಧಿ ಮಾಡುವುದೇ ಪಾದಯಾತ್ರೆಯ ಸಂಕಲ್ಪ ಆಗಬೇಕು ಎಂದು ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ ಹೇಳಿದರು.
ಮಾಗಾನಹಳ್ಳಿ ಕೋಡಿ ಕ್ಯಾಂಪ್‌ನ ಶ್ರೀ ಗುರುಕೊಟ್ಟೂರೇಶ್ವರ ಸ್ವಾಮಿಯ ದೇವಸ್ಥಾನದವರೆಗೆ ಭಾನುವಾರ ಹಮ್ಮಿಕೊಂಡಿದ್ದ ಶ್ರಾವಣ ಮಾಸದ ಪಾದಯಾತ್ರೆಗೆ ನಗರದ ಚೌಕಿಪೇಟೆಯ ಬಕ್ಕೇಶ್ವರ ದೇವಸ್ಥಾನ ಆವರಣದಲ್ಲಿ ಚಾಲನೆ ನೀಡಿ ಮಾತನಾಡಿದರು.
ಪಾದ ಎಂದರೆ ಜ್ಞಾನ-ಕ್ರಿಯೆಗಳ ಸಂಗಮ. ಇವೆರಡೂ ಇದ್ದರೆ ಜೀವನ ಪರಿಪೂರ್ಣವಾಗಲಿದೆ. ಇವನ್ನು ಅಳವಡಿಸಿಕೊಂಡು ಜೀವನ ಯಾತ್ರೆ ಯಶಸ್ವಿಗೊಳಿಸುವುದೇ ನಿಜವಾದ ಪಾದಯಾತ್ರೆಯಾಗಿದೆ. ಜ್ಞಾನ-ಕ್ರಿಯೆ ಇರಿಸಿಕೊಂಡವನು ನಿಜವಾದ ಶರಣ, ಜ್ಞಾನಿಯಾಗಬಲ್ಲ ಎಂದರು.
ನಡಿಗೆ, ಯೋಗಾಭ್ಯಾಸದಿಂದ ಆರೋಗ್ಯ ಉತ್ತಮವಾಗಿರಲಿದೆ. ಪಾದಯಾತ್ರೆ ಕೂಡ ಯೋಗದ ಒಂದು ಭಾಗವಾಗಿದೆ. ನಡಿಗೆ ಮೂಲಕವಾಗಿ ನಾವು ಅಂತರಂಗದ ಯಾತ್ರೆ ನಡೆಸಬೇಕು ಎಂದು ಹೇಳಿದರು.
ಶ್ರೀ ಗುರು ಕೊಟ್ಟೂರೇಶ್ವರರು 12ನೇ ಶತಮಾನದ ಬಸವಣ್ಣನವರ ತತ್ವ ಪಾಲಕರಾಗಿದ್ದರು. ಬಸವಣ್ಣನವರ ತತ್ವಗಳನ್ನು 15-16ನೇ ಶತಮಾನದಲ್ಲಿ ಮನೆ ಮನೆಗೆ ಪ್ರಚಾರ ಮಾಡಿದ ಮಹಾತ್ಮರು. ಪಂಚಗಣಾಧೀಶ್ವರರಲ್ಲಿ ನಾಯಕತ್ವ ಪಡೆದಿದ್ದರು ಎಂದು ಸ್ಮರಿಸಿದರು.
ದಾವಣಗೆರೆ ಸೇರಿ ವಿವಿಧೆಡೆಯಿಂದ ಲಕ್ಷಾಂತರ ಭಕ್ತರು ಪಾದಯಾತ್ರೆ ಮೂಲಕ ಪ್ರತಿವರ್ಷ ಕೊಟ್ಟೂರು ಬಸವೇಶ್ವರರ ರಥೋತ್ಸವಕ್ಕೆ ತೆರಳುತ್ತಾರೆ. ಪಾದಯಾತ್ರಿಗಳಿಗೆ ಒಳಿತಾಗುವ ನಂಬಿಕೆ ಇದೆ. ಗುರುಬಸವರಾಜೇಂದ್ರ ಸ್ವಾಮಿ ಪಾದಯಾತ್ರೆ ಟ್ರಸ್ಟ್ ಈ ಬಾರಿಯಿಂದ ಕೋಡಿ ಕ್ಯಾಂಪ್‌ವರೆಗೆ ಶ್ರಾವಣದಲ್ಲಿ ಪಾದಯಾತ್ರೆ ನಡೆಸಲು ಆಶಯ ಹೊಂದಿದ್ದು ಇದು ನಿರಂತರವಾಗಿ ನಡೆಯಲಿ ಎಂದರು.
ಜಿಲ್ಲಾ ಯೋಗ ಒಕ್ಕೂಟದ ಅಧ್ಯಕ್ಷ ವಾಸುದೇವ ರಾಯ್ಕರ್ ಮಾತನಾಡಿ, ಯೋಗದ ಜತೆಗೆ ಪಾದಯಾತ್ರೆಯೂ ಅವಶ್ಯಕವಿದೆ. ಯೋಗ ಬಳಗದಿಂದ ಅಗತ್ಯ ಸಹಕಾರ ನೀಡಲಾಗುವುದು ಎಂದು ಹೇಳಿದರು.
ಪಾದಯಾತ್ರೆ ಟ್ರಸ್ಟ್ ಅಧ್ಯಕ್ಷ ಕಣಕುಪ್ಪಿ ಮುರುಗೇಶಪ್ಪ, ಕಣಕುಪ್ಪಿ ಕರಿಬಸಪ್ಪ, ಲಯನ್ಸ್ ಕ್ಲಬ್ ಅಧ್ಯಕ್ಷ ಎಸ್.ಜಿ.ಉಳುವಯ್ಯ, ಉತ್ತಂಗಿ ಪ್ರಕಾಶ, ತೀರ್ಥರಾಜ ಹೋಲೂರು, ರಾಜು ಎಲ್.ಬದ್ದಿ, ಪರಶುರಾಮ, ನಾಗರಾಜ, ಮಾದೇಗೌಡರು, ಬಾದಾಮಿ ಜಯಣ್ಣ, ನಿರಂಜನ ಅಣಬೂರುಮಠ, ಚಂದ್ರು, ಚನ್ನಬಸವ ಶೀಲವಂತ್ ಇತರರಿದ್ದರು.
ಕೊಟ್ಟೂರು ಶ್ರೀ ಗುರುಬಸವರಾಜೇಂದ್ರ ಸ್ವಾಮಿ ಪಾದಯಾತ್ರೆ ಟ್ರಸ್ಟ್, ಸರ್ವ ಯೋಗ ಕೇಂದ್ರಗಳು, ಲಯನ್ಸ್ ಕ್ಲಬ್, ಜಿಲ್ಲಾ ಯೋಗ ಒಕ್ಕೂಟ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
---