

ಬೆಂಗಳೂರು: ಬಣ್ಣ ನೋಡದ ಸರ್ಕಾರಿ ಶಾಲೆಗಳಿಗೆ ಸುಣ್ಣ-ಬಣ್ಣ ಬಳಿಯುವ ಕೆಲಸಗಳ ಮೂಲಕ ತಮ್ಮ ತಂಡದೊಂದಿಗೆ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಅನು ಅಕ್ಕ ಎಂದೇ ಹೆಸರುವಾಸಿಯಾಗಿರುವ ಅನು ಎಂಬುವವರು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇವರ ತಂಡದ ಕೆಲಸಕ್ಕೆ ಪ್ರಶಂಸೆ ವ್ಯಕ್ತಪಡಿಸುವ ಅನೇಕರು ಅನು ಹೋಗುವ ಜಾಗಗಳ ಬಗ್ಗೆ ಮಾಹಿತಿ ಪಡೆದು, ಅಲ್ಲಿಗೆ ತೆರಳಿ ಅವರನ್ನು ಮಾತನಾಡಿಸುವುದು, ಫೋಟೋ ತೆಗೆದುಕೊಳ್ಳುವ ಪ್ರಯತ್ನದಲ್ಲಿರುತ್ತಾರೆ. ಸದ್ಯ ಇದು ಈಗ ತೊಂದರೆಗೆ ಕಾರಣವಾಗಿದೆ.
ರಾಜ್ಯದ ಹಲವಾರು ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿ, ಶಾಲೆಯ ಗೋಡೆಗಳಿಗೆ ಬಣ್ಣ ಹಚ್ಚಿ, ಹೊಸ ಮೆರಗು ಕೊಡುತ್ತಿರುವ ಅನು ಅಕ್ಕ ಹಾಗೂ ತಂಡ, ತಾವು ಹೋದ ಸ್ಥಳವನ್ನು ವಿಡಿಯೋದಲ್ಲಿ ತಿಳಿಸುತ್ತಾರೆ. ಈ ಮಾಹಿತಿಯನ್ನು ತಿಳಿದುಕೊಳ್ಳುವ ಅನೇಕರು, ಅನು ಕೆಲಸ ಮಾಡುತ್ತಿರುವ ಸ್ಥಳಕ್ಕೆ ಭೇಟಿ ಕೊಟ್ಟು ಅವರಿಗೆ ಮತ್ತು ಅವರ ತಂಡದವರಿಗೆ ಕೂಲ್ ಡ್ರಿಂಕ್ಸ್, ಬೇಕರಿ ತಿಂಡಿ ಸೇರಿದಂತೆ ತಿನ್ನುವ ಪದಾರ್ಥಗಳನ್ನು ಪ್ರೀತಿ, ಅಭಿಮಾನದ ಮೇರೆಗೆ ತಂದುಕೊಡುತ್ತಿದ್ದಾರೆ.
ಸದ್ಯ ಈ ಬಗ್ಗೆ ವಿಡಿಯೋ ಮೂಲಕ ಒಂದು ಮನವಿ ಮಾಡಿ ಅನು ಅಕ್ಕ, "ನಾವು ಪೈಂಟ್ ಮಾಡುತ್ತಿದ್ದೇವೆ, ಕಷ್ಟಪಟ್ಟು ಕೆಲಸ ಮಾಡ್ತಿದ್ದೇವೆ ಎಂದು ಕೆಲವು ಕಂಪನಿಯ ಕೆಮಿಕಲ್ ಭರಿತ ಕೂಲ್ ಡ್ರಿಂಕ್ಸ್ ಅನ್ನು ತರ್ತಿದ್ದೀರಾ, ಅದೆಲ್ಲಾ ಬೇಡ. ಬೇಕರಿ ತಿಂಡಿಗಳನ್ನು ದಯವಿಟ್ಟು ತರಬೇಡಿ. ಯಾಕಂದ್ರೆ, ಅದನ್ನೆಲ್ಲಾ ನಾವು ತಿನ್ನೊಲ್ಲ, ಕುಡಿಯುವುದಿಲ್ಲ. ಆಮೇಲೆ ಬೇರೆ ಯಾರಿಗೂ ಹಂಚಲು ಸಾಧ್ಯವಿಲ್ಲ. ಹಂಗೂ ನಿಮಗೆ ತರಲೇಬೇಕು ಅನಿಸಿದ್ರೆ, ಅದರ ಬದಲಿಗೆ ಎಳನೀರು ಅಥವಾ ಹಣ್ಣು-ಹಂಪಲು ತಂದರೆ ಉಳಿದವರಿಗೂ ಕೊಡಬಹುದು" ಎಂದರು.
"ಪೇಂಟ್ ಮಾಡುವ ನಮಗೆ ಬಣ್ಣ ಬಳಿಯುವ ರೋಲರ್, ಬ್ರಶ್, ಕೈಗೆ ಹಾಕುವ ಗ್ಲೌಸ್ ಇತರೆ ವಸ್ತುಗಳನ್ನು ತಂದುಕೊಟ್ಟರೆ ಪೈಂಟ್ ಮಾಡಲು ಸಹಾಯ ಆಗುತ್ತದೆ. ನಾವು ಈ ತಾಲೂಕಿಗೆ ಬಂದಿದ್ದೀವಿ ಅಂತ ತಿಳಿದು ಬೇರೆಡೆಯಿಂದ ನೀವು ಬರುವುದರಿಂದ ಇಲ್ಲಿ ನಮಗೆ ಕೆಲಸವಾಗುತ್ತಿಲ್ಲ. ದಯವಿಟ್ಟು ಕ್ಷಮಿಸಬೇಕು. ಈ ರೀತಿ ಮಾಡಬೇಡಿ, ನಮಗೆ ಕೆಲಸ ಮಾಡಲು ಅವಕಾಶ ಮಾಡಿಕೊಡಿ. ಬೆಳಗ್ಗೆಯೆಲ್ಲಾ ಫೋಟೋ ಕೊಡುವುದು, ಸಂಜೆ ಮೇಲೆ ಪೈಂಟ್ ಮಾಡೋದು ಕಷ್ಟವಾಗುತ್ತೆ. ನಿದ್ದೆ ಸಾಕಾಗುವುದಿಲ್ಲ" ಎಂದಿದ್ದಾರೆ.
"ನಿಮ್ಮ ನಿಮ್ಮ ಶಾಲೆಗಳನ್ನು ಪೇಂಟ್ ಮಾಡಿಕೊಳ್ಳಿ. ಇನ್ಮುಂದೆ ಕರ್ನಾಟಕದ ಪ್ರತಿ ತಾಲೂಕಿನ ಶಾಲೆಗೆ ಬರ್ತಿವಿ, ಅಲ್ಲೇ ಸಿಗ್ತೀವಿ ಕ್ಷಮಿಸಬೇಕು" ಎಂದು ಎಲ್ಲರಲ್ಲೂ ಕಳಕಳಿಯಿಂದ ಮನವಿ ಮಾಡಿದ್ದಾರೆ.