

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಕರೆಗೆ ಓಗೊಟ್ಟ ಮತ್ತೊಂದು ದೇಶೀಯ ಔಷಧ ಕಂಪನಿ ಕರೊನಾ ಚಿಕಿತ್ಸೆ ಬಳಸಲಾಗುವ ಲಸಿಕೆಯನ್ನು ಭಾರತದಲ್ಲಿಯೇ ತಯಾರಿಸಿದೆ.
ಕರೊನಾ ಚಿಕಿತ್ಸೆಗಾಗಿ ಕೋವಿಫೊರ್ ಎಂಬ ಚುಚ್ಚುಮದ್ದನ್ನು ತಯಾರಿಸಿರುವುದಾಗಿ ದೇಶೀಯ ಔಷಧ ಕಂಪನಿ ಹೆಟೆರೋ ಭಾನುವಾರ ಘೋಷಿಸಿದೆ. ಇದಕ್ಕೆ ಭಾರತೀಯ ಔಷಧ ಮಹಾನಿಯಂತ್ರಕರು ಪರವಾನಗಿ ನೀಡಿದ್ದಾರೆ ಎಂದು ತಿಳಿಸಿದೆ.
ದೇಶದಲ್ಲಿ ಕರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ನಡುವೆಯೇ, ಈ ಲಸಿಕೆ ಸಜ್ಜುಗೊಂಡಿರುವುದು ಚಿಕಿತ್ಸೆ ನೀಡಲು ಭಾರಿ ಅನುಕೂಲಕರವಾಗಲಿದೆ. ಶೀಘ್ರವೇ ದೇಶಾದ್ಯಂತ ಚಿಕಿತ್ಸೆ ಲಭ್ಯವಾಗಲಿದೆ ಎಂದು ಕಂಪನಿಯ ಮುಖ್ಯಸ್ಥ ಡಾ. ಬಿ. ಪಾರ್ಥಸಾರಥ ರೆಡ್ಡಿ ಹೇಳಿದ್ದಾರೆ.
ಕೋವಿಫೊರ್ ಲಸಿಕೆ, ಅಮೆರಿಕದ ರೆಮ್ಡೆಸಿವಿರ್ನ ಲಸಿಕೆಯ ಭಾರತೀಯ ಅವತರಣಿಕೆಯಾಗಿದೆ. ಇದನ್ನು ಜನರಿಕ್ ಔಷಧ ರೂಪದಲ್ಲಿ ಉತ್ಪಾದಿಸಲಾಗಿದೆ. ಈ ಹಿಂದೆ ಕೋವಿಡ್ ರೋಗಿಗಳಿಗೆ ತುರ್ತು ಸಂದರ್ಭದಲ್ಲಿ ನೀಡಲು ಭಾರತದಲ್ಲಿ ಶಿಫಾರಸು ಮಾಡಲಾಗಿತ್ತು. ಇದೀಗ ಇದನ್ನು ದೇಶದಲ್ಲಿ ಉತ್ಪಾದಿಸಿ ರೋಗಿಗಳಿಗೆ ಪೂರೈಸಲಾಗುತ್ತಿದೆ.
ನಿನ್ನೆಯಷ್ಟೇ ಮುಂಬೈ ಮೂಲದ ಗ್ಲೆನ್ ಮಾರ್ಕ್ ಕಂಪನಿ ಕರೊನಾದಿಂದ ಲಘು ಹಾಗೂ ಸಾಧಾರಣ ಸೋಮಕಿಗೆ ಒಳಗಾದ ರೋಗಿಗಳಿಗೆಂದೇ ಫೆಬಿಫ್ಲೂ ಎಂಬ ಮಾತ್ರೆಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿತ್ತು. ಇದೀಗ ಮತ್ತೊಂದು ದೇಶೀಯ ಕಂಪನಿ ಈ ನಿಟ್ಟಿನಲ್ಲಿ ಯಶಸ್ಸು ಸಾಧಿಸಿದಂತಾಗಿದೆ.