

ಬ್ರೆಜಿಲ್: 2,500 ಪೊಲೀಸರು ಮತ್ತು ಸೈನಿಕರು, ರಿಯೊ ಡಿ ಜನೈರೋ ಫಾವೆಲಾಗಳ (Anti-gang operation) ಮೇಲೆ ದಾಳಿ ನಡೆಸಿದ್ದು, ಈ ವೇಳೆ ಸುಮಾರು 60 ಜನರು ಸಾವಿಗೀಡಾಗಿದ್ದಾರೆ ಹಾಗೂ, 81 ಶಂಕಿತರನ್ನು ಬಂಧಿಸಲಾಗಿದೆ ಎಂದು ಅಲ್ಲಿನ ಅಧಿಕಾರಿಗಳ ಮೂಲಗಳು ಮಂಗಳವಾರ (ಅ.28) ತಿಳಿಸಿವೆ. ಇದು ಬ್ರೆಜಿಲ್‌ನಲ್ಲಿ ಈವರೆಗೂ ನಡೆದ ಅತಿದೊಡ್ಡ ಗ್ಯಾಂಗ್ ವಿರೋಧಿ ದಾಳಿಗಳಲ್ಲಿ ಒಂದಾಗಿದೆ ಎಂದು ತಿಳಿದುಬಂದಿದೆ.
ದೇಶದ ಅತ್ಯಂತ ಶಕ್ತಿಶಾಲಿ ಮಾದಕವಸ್ತು ಕಳ್ಳಸಾಗಣೆ ಗುಂಪುಗಳಲ್ಲಿ ಒಂದಾದ ರೆಡ್ ಕಮಾಂಡ್ ಅನ್ನು ಗುರಿಯಾಗಿಸಿಕೊಂಡು ಈ ಸಂಘಟಿತ ಕಾರ್ಯಾಚರಣೆ ನಡೆಸಲಾಯಿತು. ಇದು ಕಾಂಪ್ಲೆಕ್ಸೊ ಡೊ ಅಲೆಮೊ ಮತ್ತು ಪೆನ್ಹಾದಂತಹ ಕಡಿಮೆ ಆದಾಯದ ಪ್ರದೇಶಗಳಲ್ಲಿ ನಡೆಯಿತು. ಈ ವೇಳೆ ಶಸ್ತ್ರಸಜ್ಜಿತ ವಾಹನಗಳು ಕಿರಿದಾದ ಓಣಿಗಳ ಮೂಲಕ ಚಲಿಸುತ್ತಿದ್ದಂತೆ ಗುಂಡಿನ ಚಕಮಕಿ ನಡೆದಿದೆ ಎಂದು ವರದಿಯಾಗಿದೆ.
ಬ್ರೆಜಿಲ್‌ನ ಇತ್ತೀಚಿನ ಇತಿಹಾಸದಲ್ಲೇ ಇದು ಅತ್ಯಂತ ಹಿಂಸಾತ್ಮಕ ಘಟನೆಯಾಗಿದ್ದು, ಅಲ್ಲಿನ ಪ್ರತಿಯೊಂದು ಮಾನವನ ಸಾವಿಗೂ ತನಿಖೆ ನಡೆಸಬೇಕು ಎಂದು ಅಲ್ಲಿನ ಅಧಿಕಾರಿಗಳು ಹೇಳಿಕೆ ನೀಡಿದ್ದಾರೆ.
ರಿಯೊ ಗವರ್ನರ್ ಕ್ಲಾಡಿಯೊ ಕ್ಯಾಸ್ಟ್ರೋ ಅವರು ತಮ್ಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ 60 ಅಪರಾಧಿಗಳನ್ನು ತಟಸ್ಥಗೊಳಿಸಲಾಗಿದೆ ಹಾಗೂ 81 ಶಂಕಿತರನ್ನು ಬಂಧಿಸಲಾಗಿದೆ ಎಂದು ಹೇಳಿದರು. ಪೊಲಿಸರು ನಡೆಸಿದ ಈ ಕಾರ್ಯಾಚರಣೆಯಲ್ಲಿ ಸುಮಾರು 75 ರೈಫಲ್ಗಳು ಮತ್ತು ದೊಡ್ಡ ಪ್ರಮಾಣದ ಮಾದಕವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಇದನ್ನು ರಿಯೊದ ಇತಿಹಾಸದಲ್ಲಿಯೇ ಅತಿದೊಡ್ಡ ಕಾರ್ಯಾಚರಣೆ ಎಂದು ಬಣ್ಣಿಸಲಾಗಿದೆ.
ಈ ಘಟನೆಯನ್ನು ಸೂಕ್ಷ್ಮವಾಗಿ ಗಮನಿಸಿದ ಮಾನವ ಹಕ್ಕುಗಳ ಗುಂಪುಗಳು ರಕ್ತಪಾತವನ್ನು ಖಂಡಿಸಿ, ಹೊಣೆಗಾರಿಕೆಯನ್ನು ಒತ್ತಾಯಿಸಿವೆ. ಬ್ರೆಜಿಲ್‌ನ ಮಾನವ ಹಕ್ಕುಗಳ ಕಾವಲು ವಿಭಾಗದ ನಿರ್ದೇಶಕ ಸೀಸರ್ ಮುನೋಜ್, ಹಿಂಸಾಚಾರವನ್ನು ಒಂದು ದೊಡ್ಡ ದುರಂತ ಎಂದು ಕರೆದಿದ್ದು, ಪ್ರತಿ ಸಾವಿನ ಸಂದರ್ಭಗಳನ್ನು ಸ್ಪಷ್ಟಿಸಬೇಕು ಎಂದು ಹೇಳಿಕೆ ನೀಡಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ದೃಶ್ಯಗಳಲ್ಲಿ ಜನನಿಬಿಡ ಪ್ರದೇಶಗಳಲ್ಲಿ ಹೊಗೆ ಮತ್ತು ಗುಂಡಿನ ಚಕಮಕಿ ನಡೆಯುತ್ತಿರುವುದು ಕಂಡುಬಂದಿದೆ. ಅಲ್ಲಿನ ಅಧಿಕಾರಿಗಳು 46 ಶಾಲೆಗಳನ್ನು ಮುಚ್ಚಿಸಿ, ವಿದ್ಯಾರ್ಥಿಗಳನ್ನು ಮನೆಯೊಳಗೆ ಇರುವಂತೆ ಕೇಳಿಕೊಂಡಿದೆ ಎಂದು ಸುದ್ಧಿ ಮೂಲಗಳು ವರದಿ ಮಾಡಿವೆ. (ಏಜೆನ್ಸೀಸ್)