

ನವದೆಹಲಿ: ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಅವರ ಪಾದಮುಟ್ಟಿ ನಮಸ್ಕರಿಸಿದ್ದಕ್ಕೆ ಖಲಿಸ್ತಾನಿ ಪರ ಉಗ್ರರ ಸಂಘಟನೆಯಾದ ಸಿಖ್ಸ್ ಫಾರ್ ಜಸ್ಟೀಸ್(ಎಸ್ಎಫ್ಜೆ) ನ. 01ರಂದು ಆಸ್ಟ್ರೇಲಿಯಾದಲ್ಲಿ ನಡೆಯುವ ಸಿಂಗ್ ದಿಲ್ಜಿತ್ ದೋಸಾಂಜ್(Diljit Dosanjh) ಅವರ ಸಂಗೀತ ಕನ್ಸರ್ಟ್ ಅನ್ನು ಬಂದ್ ಮಾಡುವ ಬೆದರಿಕೆ ಹಾಕಿದೆ ಎಂದು ಬುಧವಾರ(ಅ. 29) ವರದಿಯಾಗಿದೆ.
1984ರ ಸಿಖ್ ವಿರೋಧಿ ಹಿಂಸಾಚಾರದ ಸಮಯದಲ್ಲಿ ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಜನಸಮೂಹವನ್ನು ಪ್ರಚೋದಿಸಿದ್ದರು ಎಂದು ಆರೋಪಿಸಿರುವ ಎಸ್ಎಫ್ಜೆ, ಅವರ ಪಾದ ಮುಟ್ಟಿ ನಮಸ್ಕರಿಸಿದ್ದಕ್ಕೆ ಆಸ್ಟ್ರೇಲಿಯಾಲ್ಲಿ ನಿಮ್ಮ ಕನ್ಸರ್ಟ್ ಬಂದ್ ಮಾಡಿ ಅದೇ ದಿನ ಅಕಾಲ್ ತಖ್ತ್ ಸಾಹಿಬ್ ‘ಸಿಖ್ ನರಮೇಧ’ ಸ್ಮರಣಾರ್ಥ ದಿನವನ್ನು ಆಚರಿಸುತ್ತದೆ ಎಂದು ಹೇಳಿದೆ.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಎಸ್‌ಎಫ್‌ಜೆಯ ಜನರಲ್ ಕೌನ್ಸೆಲ್ ಗುರುಪತ್ವಂತ್ ಸಿಂಗ್ ಪನ್ನುನ್, ಬಚ್ಚನ್ ಅವರಿಗೆ ಗೌರವ ಸಲ್ಲಿಸುವ ಮೂಲಕ ದಿಲ್ಜಿತ್ 1984ರ ಸಿಖ್ ನರಮೇಧದ ಪ್ರತಿಯೊಬ್ಬ ಬಲಿಪಶು, ವಿಧವೆ ಹಾಗೂ ಅನಾಥರನ್ನು ಅವಮಾನಿಸಿದ್ದಾರೆ. ಖೂನ್ ಕಾ ಬದ್ಲಾ ಖೂನ್ (ರಕ್ತಕ್ಕಾಗಿ ರಕ್ತ) ಎಂಬ ನರಮೇಧದ ಘೋಷಣೆಯೊಂದಿಗೆ ಹಿಂದೂಸ್ತಾನಿ ಗುಂಪುಗಳನ್ನು ಸಾರ್ವಜನಿಕವಾಗಿ ಪ್ರಚೋದಿಸಿದ ಅಮಿತಾಬ್ ಬಚ್ಚನ್ ಅವರ ಪಾದಗಳನ್ನು ಮುಟ್ಟಿದ್ದಾರೆ ಎಂದು ಟೀಕಿಸಿದ್ದಾರೆ.
ದೋಸಾಂಜ್ ಅವರ ನಿಗದಿತ ಕಾರ್ಯಕ್ರಮವನ್ನು ಸ್ಮರಣೆಯ ಅಪಹಾಸ್ಯ ಎಂದು ಕರೆದಿರುವ ಪನ್ನುನ್, ವಿಶ್ವಾದ್ಯಂತ ಸಿಖ್ ಗುಂಪುಗಳು ಮತ್ತು ಕಲಾವಿದರನ್ನು ಕನ್ಸರ್ಟ್ ಅನ್ನು ಬಹಿಷ್ಕರಿಸುವಂತೆ ಒತ್ತಾಯಿಸಿದ್ದಾರೆ. ನ. 01ರಂದು ಸ್ಥಳದ ಹೊರಗೆ ಪ್ಯಾಂಥಿಕ್ ಶಟ್‌ಡೌನ್ ರ್ಯಾಲಿಯನ್ನು ಆಯೋಜಿಸುವುದಾಗಿ ಹೇಳಿದ್ದು, ಸ್ಮರಣೆ ಮಾರಾಟಕ್ಕಿಲ್ಲ ಮತ್ತು ನರಮೇಧವನ್ನು ಚಪ್ಪಾಳೆಗಾಗಿ ಸಾಮಾನ್ಯೀಕರಿಸಲಾಗುವುದಿಲ್ಲ. ದೋಸಾಂಜ್ ಒಂದು ತಿಂಗಳ ಶೋಕಾಚರಣೆಯನ್ನು ವಾಣಿಜ್ಯೀಕರಣಗೊಳಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಇನ್ನೂ ಖಲಿಸ್ತಾನಿಗಳ ಬೆದರಿಕೆ ಬಗ್ಗೆ ಸಿಂಗರ್ ದಿಲ್ಜಿತ್ ದೋಸಾಂಜ್ ಸಾರ್ವಜನಿಕವಾಗಿ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ. (ಏಜೆನ್ಸೀಸ್)