

| ರುದ್ರಣ್ಣ ಹರ್ತಿಕೋಟೆ ಬೆಂಗಳೂರು
ರಾಜ್ಯದಲ್ಲಿ ಕಳೆದ ಕೆಲ ದಿನಗಳಿಂದ ಸದ್ದು ಮಾಡುತ್ತಿರುವ ಮತಾಂತರ ನಿಷೇಧ ಕಾಯ್ದೆ ಬೆಳಗಾವಿ ವಿಧಾನಮಂಡಲ ಅಧಿವೇಶನದಲ್ಲಿ ಮಂಡನೆಯಾಗಿ ಅಂಗೀಕಾರವಾಗುವುದೇ ಎಂಬ ಪ್ರಶ್ನೆ ಕೇಳಿಬರುತ್ತಿದೆ. ದೇಶದ 9 ರಾಜ್ಯಗಳಲ್ಲಿ ಈಗ ಮತಾಂತರ ನಿಷೇಧ ಕಾಯ್ದೆ ಜಾರಿಯಲ್ಲಿದ್ದು, ಎಲ್ಲ ಕಾಯ್ದೆಗಳನ್ನು ಅಧ್ಯಯನ ಮಾಡಿರುವ ಗೃಹ ಇಲಾಖೆ, ಸುಪ್ರೀಂ ಕೋರ್ಟ್ ಸೂಚನೆ ಹಿನ್ನೆಲೆಯಲ್ಲಿ ರಚನೆಯಾಗಿರುವ ಮಧ್ಯಪ್ರದೇಶದ ಕಾಯ್ದೆಯ ಅಂಶಗಳನ್ನು ಹೆಚ್ಚು ಅಳವಡಿಸಿಕೊಳ್ಳುವ ಬಗ್ಗೆ ಆಸಕ್ತವಾಗಿದೆ. ಧರ್ಮ ಮುಚ್ಚಿಟ್ಟು ಒತ್ತಾಯ ಪೂರ್ವಕ ಮತಾಂತರ ತಡೆಯುವುದು ಸರ್ಕಾರದ ಉದ್ದೇಶವಾಗಿದೆ.
ಬೆಳಗಾವಿ ಅಧಿವೇಶನದಲ್ಲಿ ಈ ಕಾಯ್ದೆ ಮಂಡನೆ ಬಗ್ಗೆ ಗೃಹ ಇಲಾಖೆಗೆ ಅನುಮಾನಗಳಿವೆ. ಎಲ್ಲ ಅಧ್ಯಯನಗಳು ಪೂರ್ಣವಾದರೆ ಮಂಡನೆ ಯಾಗುತ್ತದೆ, ಇಲ್ಲದಿದ್ದರೆ ಮುಂದೆ ಅಧಿವೇಶನದಲ್ಲಿ ಒಪ್ಪಿಗೆ ಪಡೆಯಲಾಗುತ್ತದೆ ಎಂದು ಗೃಹ ಇಲಾಖೆಯ ಮೂಲಗಳು ಹೇಳುತ್ತವೆ. ಅಧಿವೇಶನ ಸಂದರ್ಭ ಬೆಳಗಾವಿಯಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಒಂದು ವೇಳೆ ಮತಾಂತರ ನಿಷೇಧ ಕಾಯ್ದೆಗೆ ಒಪ್ಪಿಗೆ ಸಿಕ್ಕರೆ ಮಾತ್ರ ಅಧಿವೇಶನದ ಕೊನೆಯಲ್ಲಿ ಸದನದ ಮುಂದೆ ಮಂಡಿಸಿ ಒಪ್ಪಿಗೆ ಪಡೆಯುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆಯಾಗಿದೆ.
ತಡವೇಕೆ?: ಗೃಹ ಇಲಾಖೆಯಲ್ಲಿ ಕಾನೂನಿನ ಬಗ್ಗೆ ಅಧ್ಯಯನ ಇನ್ನೂ ಪೂರ್ಣವಾಗಿಲ್ಲ. ಧಾರ್ವಿುಕ ಸ್ವಾತಂತ್ರ್ಯ ಎಂಬುದನ್ನು ಸಂವಿಧಾನದಲ್ಲಿಯೇ ನೀಡಲಾಗಿದೆ. ಅದನ್ನು ಹೇಗೆ ವ್ಯಾಖ್ಯಾನಿಸಬೇಕೆಂಬ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿವೆ. ಗೃಹ ಮತ್ತು ಕಾನೂನು ಇಲಾಖೆಗಳ ನಡುವೆ ಎರಡು ಸಭೆಗಳು ಆಗಿವೆ. ಆದರೆ ಅಂತಿಮ ತೀರ್ವನಕ್ಕೆ ಬರಲಾಗಿಲ್ಲ. ಇನ್ನಷ್ಟು ಅಧ್ಯಯನದ ನಂತರವೇ ಅಂತಿಮವಾಗಿ ವಿಧೆಯಕ ಸಿದ್ಧಪಡಿಸಬೇಕು ಎಂಬುದು ಗೃಹ ಇಲಾಖೆಯ ನಿಲುವು ಎಂದು ಉನ್ನತ ಮೂಲಗಳು ಖಚಿತಪಡಿಸಿವೆ.
ಒತ್ತಾಯ ಮೊದಲಿನಿಂದಲೂ ಇದೆ: ರಾಜ್ಯದಲ್ಲಿ 2009ರಿಂದಲೂ ಲವ್ ಜಿಹಾದ್ ಕಾಯ್ದೆ ನಿಷೇಧಕ್ಕೆ ಒತ್ತಾಯ ಇದೆ. ಪೊಲೀಸ್ ಇಲಾಖೆ ವರದಿ ಪ್ರಕಾರ, 229 ಅಂತರ ಧರ್ವಿುಯ ವಿವಾಹಗಳಾಗಿವೆ. ಅದರಲ್ಲಿ 63 ಮಾತ್ರ ಮತಾಂತರವಾಗಿವೆ ಎಂದು ವರದಿಯಲ್ಲಿ ಹೇಳಲಾಗಿತ್ತೆಂದು ಸರ್ಕಾರದ ಮೂಲಗಳು ಹೇಳುತ್ತವೆ. ಇತ್ತೀಚಿನ ವರದಿಗಳನ್ನು ಗೃಹ ಇಲಾಖೆ ನಿರೀಕ್ಷೆ ಮಾಡುತ್ತಿದೆ.
ಏನೇನು ಅಧ್ಯಯನ?: ಈಗಾಗಲೆ ಕಾಯ್ದೆ ಜಾರಿಗೆ ತಂದಿರುವ ರಾಜ್ಯಗಳಲ್ಲಿ ಆಗಿರುವ ಪರಿಣಾಮಗಳೇನು? ಕ್ರಿಶ್ಚಿಯನ್ ಹಾಗೂ ಇತರ ಧರ್ಮದವರಿಂದ ಬರುತ್ತಿರುವ ವಿರೋಧ ಹೇಗೆ ನಿಯಂತ್ರಿಸುವುದು? ಬಲವಂತದ ಮತಾಂತರಕ್ಕೆ ಹೇಗೆ ವ್ಯಾಖ್ಯಾನ ನೀಡುವುದು? ಮದುವೆ ಹಾಗೂ ಇತರ ಕಾರಣಕ್ಕೆ ಮತಾಂತರವಾಗುವುದನ್ನು ತಡೆಯವುದು? ಮತಾಂತರದಿಂದ ಭಯೋತ್ಪಾದನೆ ಚಟುವಟಿಕೆಗಳಿಗೆ ಏನಾದರೂ ಸಂಬಂಧವಿದೆಯೇ ಎಂಬುದರ ಪರಿಶೀಲನೆ ಹೀಗೆ ಅನೇಕ ಆಯಾಮಗಳಿಂದ ಅಧ್ಯಯನ ನಡೆದಿದೆ.
ಯಾವ ಯಾವ ರಾಜ್ಯದಲ್ಲಿದೆ?: ಅರುಣಾಚಲ ಪ್ರದೇಶ, ಮಧ್ಯಪ್ರದೇಶ, ಓಡಿಶಾ, ಛತ್ತೀಸ್ಘಡ, ಹಿಮಾಚಲಪ್ರದೇಶ, ಜಾರ್ಖಾಂಡ್, ಉತ್ತರಖಂಡ, ಗುಜರಾತ್, ಉತ್ತರಪ್ರದೇಶ.
ಬೆಳಗಾವಿ ಅಧಿವೇಶನದಲ್ಲಿಯೇ ವಿಧೆಯಕ ಮಂಡನೆಗೆ ಪ್ರಯತ್ನ ನಡೆದಿದೆ. ಒಂದು ವೇಳೆ ಸಾಧ್ಯವಾಗದಿದ್ದರೆ ಮುಂದಿನ ಅಧಿವೇಶನದಲ್ಲಿ ಮಂಡಿಸುತ್ತೇವೆ. ಎಲ್ಲ ರಾಜ್ಯಗಳ ಕಾಯ್ದೆ ಅಧ್ಯಯನ ಮಾಡಲಾಗಿದೆ. ಮದುವೆಗಾಗಿ ಮತಾಂತರ ನಡೆಯುತ್ತಿದೆಯೇ, ಯಾವುದನ್ನು ತಡೆಯಬೇಕು ಎಂಬುದು ವಿಧೇಯಕದಲ್ಲಿ ಸ್ಪಷ್ಟವಾಗಿರುತ್ತದೆ. ಇತ್ತೀಚಿಗೆ ಮುರುಘ ಶರಣರು ಹೇಳಿದ್ದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ.
| ಆರಗ ಜ್ಞಾನೇಂದ್ರ ಗೃಹ ಸಚಿವ
ಮಧ್ಯಪ್ರದೇಶದ ಒಲವು ಏಕೆ: ಉತ್ತರ ಪ್ರದೇಶ ಸೇರಿದಂತೆ ಇತರ ರಾಜ್ಯಗಳ ಕಾಯ್ದೆಗಿಂತ ಮಧ್ಯಪ್ರದೇಶದ ಕಾಯ್ದೆಯಲ್ಲಿ ಕೆಲವು ಕಠಿಣ ಅಂಶಗಳಿವೆ. ಆದ್ದರಿಂದಲೇ ಆ ಬಗ್ಗೆ ಹೆಚ್ಚಿನ ಒಲವು ವ್ಯಕ್ತವಾಗಿದೆ. ಅಲ್ಲಿ ಸಾಮೂಹಿಕ ಮತಾಂತರಕ್ಕೆ 5ರಿಂದ 10 ವರ್ಷ ಜೈಲು, ಒಂದು ಲಕ್ಷ ರೂ. ತನಕ ದಂಡ ವಿಧಿಸಲಾಗುತ್ತದೆ. ಮದುವೆಗಾಗಿ ಮತಾಂತರಕ್ಕೆ 3ರಿಂದ 10 ವರ್ಷ ಜೈಲು ಹಾಗೂ 50 ಸಾವಿರ ರೂ. ದಂಡ. ಚಿಕ್ಕ ವಯಸ್ಸಿನವರು, ಮಹಿಳೆ ಹಾಗೂ ಎಸ್ಸಿ-ಎಸ್ಟಿ ಮತಾಂತರವಾದರೆ 2ರಿಂದ 10 ವರ್ಷ ಜೈಲು 50 ಸಾವಿರ ರೂ. ದಂಡ. ಇತರ ಮತಾಂತರಕ್ಕೆ 1ರಿಂದ 5 ವರ್ಷ ಜೈಲು ಹಾಗೂ 25 ಸಾವಿರ ರೂ. ದಂಡ. ಯಾವುದೇ ಸಂಘಟನೆ ಮತಾಂತರ ಮಾಡಿದರೆ ಸಂಘಟನೆ ನಿಷೇಧ. 2 ತಿಂಗಳ ಮುನ್ನ ಡಿಸಿಗೆ ದಾಖಲೆಗಳ ಸಹಿತ ಮನವಿ ನೀಡಿ ನಿಖರ ಕಾರಣ ನೀಡಿ ಮತಾಂತರವಾಗಬಹುದು. ಪೋಷಕರಿಂದ ದೂರು ಬಂದಾಗ ಮಾತ್ರ ಮೊಕದ್ದಮೆ ದಾಖಲಿಸಬೇಕು, ಪೊಲೀಸರು ಸ್ವಯಂ ದೂರು ದಾಖಲಿಸುವಂತಿಲ್ಲ. ದೂರು ಬಂದಲ್ಲಿ ಎಸ್ಐ ಮೇಲ್ಪಟ್ಟ ಅಧಿಕಾರಿ ಮಾತ್ರ ತನಿಖೆ ಮಾಡಬೇಕು. ಕಾಯ್ದೆ ಜಾರಿಯಾದ ನಂತರ ಮಧ್ಯಪ್ರದೇಶದಲ್ಲಿ 22 ಮೊಕದ್ದಮೆ ದಾಖಲಾಗಿವೆ.