

| ಮೃತ್ಯುಂಜಯ ಕಪಗಲ್ ಬೆಳಗಾವಿ
ರಾಜಕೀಯ ವಲಯವೂ ಸೇರಿದಂತೆ ವಿವಿಧ ಸಮುದಾಯಗಳ ಮಧ್ಯೆ ಮತಾಂತರ ನಿಷೇಧ ಕಾಯ್ದೆ ಬಗ್ಗೆ ಬಿಸಿ ಬಿಸಿ ಚರ್ಚೆ ನಡೆದಿರುವಂತೆಯೇ ಬೆಳಗಾವಿಯ ವಿಧಾನ ಮಂಡಲದ ಚಳಿಗಾಲದ ಅಧಿವೇಶನದ ಹೊಸ್ತಿಲಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಒಗಟಿನ ಮಾತು ಕುತೂಹಲ ಹೆಚ್ಚಿಸಿದೆ.
ಮತಾಂತರ ನಿಷೇಧ ಮಸೂದೆ ವಿಚಾರ ಮತ್ತೆ ಚರ್ಚೆಯ ಮುನ್ನೆಲೆಗೆ ಬಂದಂದಿನಿಂದ ಬೊಮ್ಮಾಯಿ ‘ರಕ್ಷಣಾತ್ಮಕ’ ತಂತ್ರವನ್ನೇ ಅನುಸರಿಸಿದ್ದಾರೆ. ಆದರೆ ಸಚಿವ ಸಂಪುಟದ ಕೆಲವು ಸಹೋದ್ಯೋಗಿಗಳು ಬಲವಂತದ ಮತಾಂತರ ನಿಷೇಧಿಸಿದರೆ ತಪ್ಪೇನಿಲ್ಲ ಎನ್ನುವ ಮೂಲಕ ಮಸೂದೆ ಪರವಾಗಿ ಬ್ಯಾಟ್ ಬೀಸಿದ್ದಾರೆ. ಪಕ್ಷದ ತತ್ವ-ಸಿದ್ಧಾಂತ, ನೀತಿ ಅನ್ವಯ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರಬೇಕು ಎಂದು ಸ್ವಪಕ್ಷದ ಶಾಸಕರು ಆಂತರಿಕ ಒತ್ತಡ ಹೇರಲಾರಂಭಿಸಿದ್ದಾರೆ. ರಾಜ್ಯದ ಅಲ್ಲಲ್ಲಿ ಆಸೆ-ಆಮಿಷ ತೋರಿಸಿ ಮತಾಂತರ ಪ್ರಯತ್ನ, ಪ್ರತಿರೋಧದ ಪ್ರಕರಣಗಳು ಈ ಒತ್ತಾಸೆಗೆ ಪುಷ್ಟಿ ನೀಡಿವೆ.
ಸ್ವಪಕ್ಷದವರ ಒತ್ತಡ: ಬಿ.ಎಸ್.ಯಡಿಯೂರಪ್ಪ ಆಡಳಿತಾವಧಿ ಯಲ್ಲಿ ನಡೆದಿದ್ದ ಪಕ್ಷದ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲೂ ಈ ಕುರಿತು 2 ಸಲ ಚರ್ಚೆಯಾಗಿದೆ. ಉತ್ತರಪ್ರದೇಶ ಮಾದರಿಯಲ್ಲಿ ಬಹುಸಂಖ್ಯಾತ ಹಿಂದು ಸಮುದಾಯದ ಹಿತರಕ್ಷಣೆಗೆ ಸರ್ಕಾರ ಬದ್ಧವಾಗಬೇಕಾದ ಅಗತ್ಯವಿದೆ ಎಂದು ತಮ್ಮ ನಿಲುವು ಸಮರ್ಥಿಸಿಕೊಂಡಿದ್ದಾರೆಂದು ಮೂಲಗಳು ತಿಳಿಸಿವೆ. ಮುಂಬರುವ ವಿಧಾನಸಭೆ ಸಾರ್ವತ್ರಿಕ ಚುನಾವಣೆ ನೆಲೆಯಲ್ಲಿ ಜಾತಿ ಸಮೀಕರಣ ಹಾಗೂ ರಾಜಕೀಯ ಭಾಷ್ಯಕ್ಕೆ ಹೊಸ ಆಯಾಮ ನೀಡಬೇಕಾಗಿದೆ. ಕಾಂಗ್ರೆಸ್ ಕೂಡ ರಾಜಕೀಯ ಲಾಭಕ್ಕಾಗಿ ವಿರೋಧದ ಧ್ವನಿ ಎತ್ತಿದೆ. ಈ ವಿಷಯದಲ್ಲಿ ಬಿಜೆಪಿ ಒಂದು ಹೆಜ್ಜೆ ಮುಂದೆ ಮುಂದಿಡಬೇಕಾದ ಅನಿವಾರ್ಯತೆಯಿದೆ ಎಂಬ ಅಭಿಪ್ರಾಯ ಮಂಡಿಸಿದ್ದಾರೆ. ವಿಧಾನ ಪರಿಷತ್ ಸದಸ್ಯ ತುಳಸಿ ಮುನಿರಾಜುಗೌಡ ಮತಾಂತರ ನಿಷೇಧಿಸುವ ಖಾಸಗಿ ಮಸೂದೆ ಪ್ರಸ್ತಾಪಿಸಿದ್ದು, ಪಕ್ಷದ ಕೆಲವು ವರಿಷ್ಠರ ಸೂಚನೆಯಂತೆ ಈ ಪ್ರಯತ್ನಕ್ಕೆ ಕೈಹಾಕಿದ್ದಾರೆ ಎಂದು ಹೇಳಲಾಗುತ್ತಿದೆ.
ಬೊಮ್ಮಾಯಿ ಸ್ವರ ಬದಲು: ಹಲವು ಸಚಿವ-ಶಾಸಕರ ಒತ್ತಡ, ಕರಡು ಮಸೂದೆ ಸಿದ್ಧವಾಗಿದೆ ಎಂಬ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ, ಮೇಲ್ಮನೆಯಲ್ಲಿ ಖಾಸಗಿ ಮಸೂದೆ ಮಂಡನೆಗೆ ಅವಕಾಶ ಕೋರಿಕೆ ಇತ್ಯಾದಿ ಬೆಳವಣಿಗೆಗಳನ್ನು ಅರಿತ ಬೊಮ್ಮಾಯಿ ಈ ವಿಷಯದಲ್ಲಿ ಸ್ವರ ಬದಲಾಯಿಸಿದ್ದಾರೆ. ಹಿಂದು, ಸಿಖ್, ಕ್ರೖೆಸ್ತ, ಮುಸ್ಲಿಂ ಸೇರಿದಂತೆ ಸಂವಿಧಾನ ಎಲ್ಲ ಧರ್ವಿುಯರಿಗೆ ಸಮಾನ ಅವಕಾಶ ಕಲ್ಪಿಸಿದ್ದು, ಯಾವುದೇ ಸಮುದಾಯ ಆತಂಕಗೊಳ್ಳುವುದು ಬೇಡ. ಆದರೆ ಬಡತನ, ಪರಿಸ್ಥಿತಿ ದುರ್ಲಾಭ ಪಡೆದು ಬಲವಂತದ ಮತಾಂತರ, ಆಸೆ-ಆಮಿಷವೊಡ್ಡಿ ಸಾಮಾಜಿಕ ವ್ಯವಸ್ಥೆಯನ್ನೇ ಹದಗೆಡಿಸುವ ಕೃತ್ಯ ಸಹಿಸಲಾಗುವುದಿಲ್ಲ ಎಂಬ ಎಚ್ಚರಿಕೆ ನೀಡಿದ್ದಾರೆ. ಅಧಿವೇಶನ ಆರಂಭಕ್ಕೆ ಒಂದು ದಿನ ಬಾಕಿಯಿರುವಾಗ ಸಿಎಂ ತಳೆದ ನಿಲುವು ಕೌತುಕ ಹೆಚ್ಚಿಸಿದೆ. ಮಸೂದೆ ಕರಡು ಸಿದ್ಧವಾಗಿ ಕಾನೂನು ಇಲಾಖೆ ಪರಿಶೀಲನಾ ಸಮಿತಿ ಅಂಗಳದಲ್ಲಿದೆ ಎಂಬ ಪರೋಕ್ಷ ಸುಳಿವು ನೀಡಿದ್ದು, ಮತಾಂತರ ನಿಷೇಧ ಕಾಯ್ದೆ ಜಾರಿಗೆ ಉನ್ನತಮಟ್ಟದಲ್ಲಿ ನಡೆದಿರುವ ಸಿದ್ಧತೆಗಳನ್ನು ಸರ್ಕಾರ ಮುಚ್ಚಿಡಲು ಪ್ರಯತ್ನಿಸುತ್ತಿದೆ ಎನ್ನುವ ಅನುಮಾನ ಮೂಡಿಸಿದೆ.
ಮಂಡನೆ ಗುಸುಗುಸು: ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿ ಚರ್ಚೆಯೇ ಬೆಳಗಾವಿ ಅಧಿವೇಶನದ ಪ್ರಮುಖ ಅಜೆಂಡಾ ಎಂದು ಸರ್ಕಾರ ಮೇಲ್ನೋಟಕ್ಕೆ ಬಿಂಬಿಸಿದೆ. ಇದರೊಂದಿಗೆ ಪಕ್ಷದ ಕಾರ್ಯಸೂಚಿ ಭಾಗವಾದ ಮತಾಂತರ ನಿಷೇಧ ಮಸೂದೆಯನ್ನು ಅಧಿವೇಶನದ ಕೊನೇ ದಿನ ಮಂಡಿಸುವ ಸನ್ನಾಹದಲ್ಲಿದೆ ಎಂದು ತಿಳಿದಿದೆ. ವಿಸõತ ಚರ್ಚೆಗೆ ಸರ್ಕಾರ ನೀಡಿದ ಉತ್ತರ ತೃಪ್ತಿಯಾಗದೇ ಪ್ರತಿಪಕ್ಷಗಳು ಗದ್ದಲವೆಬ್ಬಿಸಿದ ಮಧ್ಯೆ ಈ ವಿಧೇಯಕ ಮಂಡಿಸಿ, ಅನುಮೋದನೆ ಪಡೆಯಲಿದೆ ಎಂಬ ಗುಸುಗುಸು ಹರಡಿದೆ.
ಗುರುವಾರ ನಿರ್ಧಾರ?: ಮತಾಂತರ ನಿಷೇಧ ಕಾಯ್ದೆ ಜಾರಿಗೆ ಮುನ್ನ ನಿಯಮದ ಪ್ರಕಾರ ಸಚಿವ ಸಂಪುಟದಿಂದ ಅನುಮೋದನೆಯಾಗಬೇಕು. ಪ್ರಸ್ತುತ ಅಧಿವೇಶನ ನಡೆಯುವ ಹೊತ್ತಿನಲ್ಲೇ ಸಂಪುಟ ಸಭೆ ನಡೆಸುವುದೂ ನಿಶ್ಚಯವಾಗಿದೆ. ಸೋಮವಾರ ಸಿಎಂ ಕಾಶಿಗೆ ತೆರಳುತ್ತಿದ್ದು, ಡಿ.14ರಂದು ಸಿಎಂಗಳ ಸಭೆಯಲ್ಲಿ ಪಾಲ್ಗೊಳ್ಳುವರು. ಬುಧವಾರ ಸಂಜೆ ಈ ವಿಚಾರದಲ್ಲಿ ಇನ್ನೊಂದಿಷ್ಟು ಸ್ಪಷ್ಟತೆ ಪಡೆದುಕೊಂಡು ಗುರುವಾರ ಸಂಪುಟ ಸಭೆ ನಡೆಸಬಹುದೆಂದು ಅಂದಾಜಿದೆ. ಆದರೆ, ಈ ವಾರ ಸಂಪುಟ ಸಭೆ ನಡೆಯುವುದು ಅನುಮಾನ, ಮುಂದಿನ ವಾರ ನಡೆಯುವ ಸಾಧ್ಯತೆ ಇದೆ ಎಂದೂ ಆಡಳಿತ ಪಕ್ಷದ ಶಾಸಕರು ಅಭಿಪ್ರಾಯಪಟ್ಟಿದ್ದಾರೆ.
ಕಾನೂನು ಇಲಾಖೆಯಲ್ಲಿರುವ ಪರಿಶೀಲನಾ ಸಮಿತಿ ಮತಾಂತರ ನಿಷೇಧ ವಿಧೇಯಕ ಕರಡು ಪರಾಮಶಿಸುತ್ತಿದೆ. ನಂತರ ಸಚಿವ ಸಂಪುಟ ಸಭೆಯಲ್ಲಿಟ್ಟು ರ್ಚಚಿಸಿ ಒಪ್ಪಿಗೆ ಪಡೆದ ಬಳಿಕವೇ ಅಧಿವೇಶನದಲ್ಲಿ ಮಂಡಿಸಬೇಕಾಗುತ್ತದೆ. ಬೆಳಗಾವಿಯಲ್ಲಿ ಸಚಿವ ಸಂಪುಟದ ಸಭೆ ನಡೆಯಲಿದ್ದು, ಮುಂದೇನಾಗುತ್ತದೋ ನೋಡೋಣ.
| ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ
ಮತಾಂತರ ಬೆಂಬಲಿಸುವ ಕಾಂಗ್ರೆಸ್ ನಾಯಕರು ಮೊದಲು ಅವರವರ ಮನೆಗಳಲ್ಲಿ ಮತಾಂತರಕ್ಕೆ ಅವಕಾಶ ಮಾಡಿಕೊಡಲಿ ನೋಡೋಣ? ಮತಾಂತರದ ಹತೋಟಿಗೆ ವಿಶೇಷ ಕಾಯ್ದೆ ಅಗತ್ಯವಿದೆ. ಸ್ವಾಭಾವಿಕ-ಬಲವಂತದ ಮತಾಂತರ ನಡುವೆ ವ್ಯತ್ಯಾಸವಿದೆ. ಆಸೆ, ಆಮಿಷದೊಂದಿಗೆ ನಡೆಯುವ ಈ ಪ್ರಕ್ರಿಯೆ ಧರ್ಮ-ಧರ್ಮಗಳ ನಡುವೆ ಕಂದಕ ಸೃಷ್ಟಿಸುತ್ತದೆ.
| ಎ.ನಾರಾಯಣ ಸ್ವಾಮಿ ಕೇಂದ್ರ ಸಚಿವ
ಬಲವಂತದ ಮತಾಂತರವನ್ನು ನಾನೂ ಒಪ್ಪುವುದಿಲ್ಲ, ಬಿಜೆಪಿಯವರು ಒಂದು ಧರ್ಮವನ್ನು ಗುರಿಯಾಗಿಟ್ಟುಕೊಂಡು ನಿಷೇಧಕ್ಕೆ ಪ್ರಯತ್ನಿಸುತ್ತಿರುವುದನ್ನು ಸಹಿಸುವುದಿಲ್ಲ, ಸರ್ಕಾರ ಕಾಯ್ದೆ ಮಂಡಿಸಿದಲ್ಲಿ ಕಾಂಗ್ರೆಸ್ ತೀವ್ರವಾಗಿ ವಿರೋಧಿಸುತ್ತದೆ .
| ಸಿದ್ದರಾಮಯ್ಯ, ಮಾಜಿ ಸಿಎಂ
ಚಿಕ್ಕನಾಯಕನಹಳ್ಳಿ (ತುಮಕೂರು): ಮತಾಂತರ ನಿಷೇಧ ಕಾಯ್ದೆ ತರಲು ತೀರ್ವನವಾಗಿದ್ದು, ಮುಂದಿನವಾರ ಅಧಿವೇಶನದಲ್ಲಿ ಚರ್ಚೆಗೆ ಇಡುವುದಾಗಿ ಕಾನೂನು ಸಚಿವ ಮಾಧುಸ್ವಾಮಿ ಹೇಳಿದ್ದಾರೆ. ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತಾಂತರ ನಿಷೇಧ ಕಾಯ್ದೆ ಈಗಾಗಲೇ ದೇಶದಲ್ಲಿ ಜಾರಿ ಇದೆ. ಕಾಯ್ದೆ ರೂಪುರೇಷೆ ಬಗ್ಗೆ ತಿಳಿದುಕೊಳ್ಳಲು ನಾನು ಸಮಯ ಕೇಳಿದ್ದೇನೆ. ಯಾರಿಗೂ ನೋವು, ಅಡ್ಡಿಯಾಗದ ರೀತಿ ಕಾಯ್ದೆ ಜಾರಿಗೆ ಯೋಚಿಸಿದ್ದೇನೆ. ಬಲವಂತ ಹಾಗೂ ಆಮಿಷ ಒಡ್ಡಿ ಮತಾಂತರ ಮಾಡುವುದು ನಿಷೇಧ. ಈಗಿರುವ ಕಾನೂನಿನಲ್ಲಿ ಬಲವಂತದ ಮತಾಂತರ ಶಿಕ್ಷಾರ್ಹ ಅಪರಾಧ ಅಂತಿದೆ. ಯಾವ ರೀತಿಯ ಶಿಕ್ಷೆ ಅನ್ನೋದು ಚರ್ಚೆ ಆಗಬೇಕಿದೆ ಎಂದರು. ವಿವಾಹ ನೋಂದಣಿ ಮಾಡುವಂತೆ ಮತಾಂತರವನ್ನೂ ನೋಂದಣಿ ಮಾಡುವಂತಹ ಪದ್ಧತಿಯನ್ನು ಮತಾಂತರ ನಿಷೇಧ ಕಾಯ್ದೆಯಲ್ಲಿ ತರುವ ಚಿಂತನೆ ಇದೆ ಎಂದು ಸಚಿವರು ತಿಳಿಸಿದರು. ಮದುವೆ ನೋಂದಣಿ ಪ್ರಕ್ರಿಯೆಯಲ್ಲಿ ಹೇಗೆ ನೋಟಿಸ್ ಬೋರ್ಡ್ನಲ್ಲಿ ವಿವಾಹಿತರ ವಿವರ ಹಾಕುತ್ತೇವೆಯೋ ಹಾಗೆಯೇ ಮತಾಂತರಗೊಂಡವರ ವಿವರವನ್ನೂ ನೋಟಿಸ್ ಬೋರ್ಡ್ಗೆ ಹಾಕಿ ಆಕ್ಷೇಪಣೆಗೆ ಕಾಲಾವಕಾಶ ಕೊಡಲಾಗುತ್ತದೆ. ಯಾವುದೇ ಆಕ್ಷೇಪಣೆ ಇಲ್ಲದಿದ್ದರೆ ಅಂತಹವರ ಅರ್ಜಿ ಪುರಸ್ಕರಿಸಲಾಗುತ್ತದೆ ಎಂದರು.
ಅರ್ಜಿ ಸಲ್ಲಿಸಬೇಕು: ಸ್ವಯಂಪ್ರೇರಿತ ಮತಾಂತರಕ್ಕೂ ರೂಪುರೇಷೆ ಸಿದ್ಧಗೊಳ್ಳುತ್ತಿದ್ದು ಮತಾಂತರ ಆಗುವವನೂ ಅರ್ಜಿ ಸಲ್ಲಿಸುವ ವ್ಯವಸ್ಥೆ ಜಾರಿಯಾಗಲಿದೆ. ಬಲವಂತದ ಮತಾಂತರ ಅಲ್ಲವೆಂದು ತಿಳಿದ ಮೇಲೆ ಜಿಲ್ಲಾಧಿಕಾರಿಗಳು ಮತಾಂತರದ ಅರ್ಜಿ ಪುರಸ್ಕರಿಸಬಹುದಾಗಿದೆ. ಜತೆಗೆ, ಒಮ್ಮೆ ಮತಾಂತರಗೊಂಡ ವ್ಯಕ್ತಿ ಮೂಲ ಜಾತಿ, ಧರ್ಮ ಕಳೆದುಕೊಳ್ಳುತ್ತಾನೆ. ಪರಿಶಿಷ್ಟ ಜಾತಿ ವ್ಯಕ್ತಿ ಕ್ರೖೆಸ್ತ ಧರ್ಮಕ್ಕೆ ಮತಾಂತರಗೊಂಡರೆ ಆತ ಅಲ್ಪಸಂಖ್ಯಾತ ಆಗಲಿದ್ದಾನೆ. ಆತನ ಮೂಲ ಜಾತಿ ಪ್ರಮಾಣಪತ್ರ ಬದಲಾಗುತ್ತದೆ ಎಂದು ಸಚಿವರು ಹೇಳಿದರು.