ಖಾಕಿಯ ಬೆಂಬಿಡದ ಕೋವಿಡ್: ಮತ್ತಿಬ್ಬರಿಗೆ ಸೋಂಕು ದೃಢ

corona lab test
Published on

ಬೆಂಗಳೂರು: ಆಂತರಿಕ ಭದ್ರತಾ ವಿಭಾಗ (ಐಎಸ್​ಡಿ)ಯ ಒಬ್ಬರು, ತಿಲಕ್​ನಗರ ಮತ್ತು ರಾಜಾಜಿನಗರ ಠಾಣೆಯ ಇಬ್ಬರು ಪೊಲೀಸರಿಗೆ ಸೋಮವಾರ ಕರೊನಾ ಸೋಂಕು ದೃಢಪಟ್ಟಿದೆ. ಜಯನಗರ ಪ್ರಧಾನ ಅಂಚೆ ಕಚೇರಿಯ ಒಬ್ಬ ಸಿಬ್ಬಂದಿಗೆ ಕೋವಿಡ್ ತಗುಲಿದೆ. ನಾಲ್ವರನ್ನೂ ಚಿಕಿತ್ಸೆಗೊಳಪಡಿಸಿದ್ದು, ಇವರೊಂದಿಗೆ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕ ಹೊಂದಿದ್ದವರನ್ನು ಕ್ವಾರಂಟೈನ್ ಮಾಡಲಾಗಿದೆ.

ತಿಲಕ್​ನಗರ ಪೊಲೀಸರು ವಾರದ ಹಿಂದೆ ಬಂಧಿಸಿದ್ದ ಸರಗಳ್ಳನಿಗೆ ಕರೊನಾ ಪಾಸಿಟಿವ್ ವರದಿ ಬಂದಿತ್ತು. ಹೀಗಾಗಿ ಠಾಣಾಧಿಕಾರಿ ಸೇರಿ ಎಲ್ಲ ಸಿಬ್ಬಂದಿಗೂ ಗಂಟಲು ದ್ರವ ಪರೀಕ್ಷೆ ನಡೆಸಿ ಕ್ವಾರಂಟೈನ್ ಮಾಡಲಾಗಿತ್ತು. ಭಾನುವಾರ ವರದಿ ಬಂದಿದ್ದು, ಪೇದೆಯೊಬ್ಬರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.

ರಾಜಾಜಿನಗರ ಠಾಣೆಯ ಪೇದೆಗೆ 3 ದಿನದ ಹಿಂದೆ ಶೀತ, ಜ್ವರ ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಕರೊನಾ ಪರೀಕ್ಷೆ ನಡೆಸಿ, ಕ್ವಾರಂಟೈನ್ ಮಾಡಲಾಗಿತ್ತು. ಇದೀಗ ವರದಿ ಬಂದಿದ್ದು, ಪಾಸಿಟಿವ್ ಇರುವುದು ಗೊತ್ತಾಗಿದೆ. ಸೋಂಕಿತ ಪೇದೆ ಮಾಗಡಿ ರಸ್ತೆಯ ಪೊಲೀಸ್ ಕ್ವಾರ್ಟರ್ಸ್​ನಲ್ಲಿ ನೆಲೆಸಿದ್ದರು. ಕುಟುಂಬಸ್ಥರು ಹಾಗೂ ಸಂಪರ್ಕದಲ್ಲಿದ್ದ ಸಿಬ್ಬಂದಿಗೆ ಗಂಟಲು ದ್ರವ ಪರೀಕ್ಷೆ ನಡೆಸಿ ಕ್ವಾರಂಟೈನ್ ಮಾಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಐಎಸ್​ಡಿ ಸಿಬ್ಬಂದಿಗೂ ಸೋಂಕು: ಆಂತರಿಕ ಭದ್ರತಾ ವಿಭಾಗದ ನಿಯಂತ್ರಣ ಕೊಠಡಿ ಸಿಬ್ಬಂದಿ ಸೊಂಕಿಗೆ ಒಳಗಾದವರು. ಕೊಠಡಿಯಲ್ಲಿ ಸ್ಯಾನಿಟೈಸರ್ ಸಿಂಪಡಿಸಿ, ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ. ನಿಯಂತ್ರಣ ಕೊಠಡಿಯ ಕೆಲಸಗಳನ್ನು ಬೇರೆಡೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಂಚೆ ಕಚೇರಿ ಸೀಲ್​ಡೌನ್: ಜಯನಗರದ 4ನೇ ‘ಟಿ’ ಬ್ಲಾಕ್​ನಲ್ಲಿರುವ ಪ್ರಧಾನ ಅಂಚೆ ಕಚೇರಿಯ ತಾಂತ್ರಿಕ ವಿಭಾಗದ ನೌಕರರೊಬ್ಬರಿಗೆ ಸೋಂಕು ತಗುಲಿದೆ. ಗೊಟ್ಟಿಗೆರೆಯ ಅಪಾರ್ಟ್​ವೆುಂಟ್​ವೊಂದರಲ್ಲಿ ಕುಟುಂಬದ ಜತೆ ವಾಸವಿದ್ದರು. ಜೂ. 24ರಂದು ಶೀತ, ಜ್ವರ ಕಾಣಿಸಿಕೊಂಡಿತ್ತು. ಸ್ವಾ್ಯಬ್ ಪರೀಕ್ಷೆಯ ವರದಿ ಭಾನುವಾರ (ಜೂ. 28) ಬಂದಿದ್ದು, ಪಾಸಿಟಿವ್ ಎಂಬುದು ಗೊತ್ತಾಗಿದೆ. ನಿರ್ದಿಷ್ಟ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಪಡಿಸಲಾಗಿದ್ದು, ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕದಲ್ಲಿದ್ದ 100ಕ್ಕೂ ಹೆಚ್ಚು ಮಂದಿಯನ್ನು ಕ್ವಾರಂಟೈನ್​ಗೆ ಒಳಪಡಿಸಲಾಗಿದೆ. ಕಚೇರಿಯಲ್ಲಿ ಸ್ಯಾನಿಟೈಸರ್ ಸಿಂಪಡಿಸಿ, 3 ದಿನಗಳವರೆಗೆ ಸೀಲ್​ಡೌನ್ ಮಾಡಲಾಗಿದೆ ಎಂದು ಅಂಚೆ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net