

ನವದೆಹಲಿ: ಕೋವಿಡ್ 19 ಸೋಂಕು ತಗುಲಿ ಉಸಿರಾಟದ ತೊಂದರೆ ಅನುಭವಿಸುವವರ ಅನುಕೂಲಕ್ಕಾಗಿ ಆಮ್ಲಜನಕ ಪುಷ್ಟೀಕರಣ ಘಟಕ (ಆಕ್ಸಿಜನ್ ಎನ್ರಿಚ್ಮೆಂಟ್ ಯುನಿಟ್)ವನ್ನು ಕೌನ್ಸಿಲ್ ಆಫ್ ಸೈಂಟಿಫಿಕ್ ಆ್ಯಂಡ್ ಇಂಡಸ್ಟ್ರಿಯಲ್ ರಿಸರ್ಚ್ (ಸಿಆರ್ಐಆರ್) ವಿನ್ಯಾಸಗೊಳಿಸಿದೆ. ಇದನ್ನು ಮನೆಗಳಲ್ಲಿ, ಆಸ್ಪತ್ರೆಗಳಲ್ಲಿ ಮತ್ತು ಹಿಂದುಳಿದ ಗ್ರಾಮೀಣ ಭಾಗಗಳಲ್ಲಿ ಬಳಸಬಹುದಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ತಿಳಿಸಿದ್ದಾರೆ.
ಈ ಘಟಕಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಪೂರೈಸಿದರೆ ಆಕ್ಸಿಜನ್ ಸಿಲಿಂಡರ್ ಮತ್ತು ವೆಂಟಿಲೇಟರ್ಗಳ ಬೇಡಿಕೆ ಕಡಿಮೆಯಾಗಲಿದೆ. ಈ ಸಂಬಂಧ ಟ್ವೀಟ್ ಮಾಡಿರುವ ಸಚಿವ ಹರ್ಷವರ್ಧನ್, ಸಿಎಸ್ಐಆರ್ ಸೈಂಟಿಸ್ಟ್ಗಳು ಮತ್ತು ಪುಣೆಯ ನ್ಯಾಷನಲ್ ಕೆಮಿಕಲ್ ಲ್ಯಾಬೊರೇಟರಿ ಪರಿಣತರು ಈ ಘಟಕವನ್ನು ಅಭಿವೃದ್ಧಿ ಪಡಿಸಿದ್ದಾರೆ. ಕೋವಿಡ್ ಸಂಕಷ್ಟ ಸಮಯದಲ್ಲಿ ಇದು ನೆರವಿಗೆ ಬರಲಿದೆ ಎಂದಿದ್ದಾರೆ.
ಅದೇ ರೀತಿ, ಈ ಘಟಕಕ್ಕೆ ಆಕ್ಸಿಜನ್ ಸಿಲಿಂಡರ್ನ ಅವಶ್ಯಕತೆ ಇಲ್ಲ. ಕೋವಿಡ್ ರೋಗಿಗಳು ಉಸಿರಾಟದ ತೊಂದರೆ ಅನುಭವಿಸುವಾಗ ಅವರಿಗೆ ಆರಂಭಿಕ ಆಕ್ಸಿಜನ್ ಅನ್ನು ಈ ಘಟಕ ಪೂರೈಸುತ್ತದೆ. ಅವರಿಗೆ ವೆಂಟಿಲೇಟರ್ಗಳ ಅವಶ್ಯಕತೆಯೂ ಬರದು. ಆ ಮೂಲಕ ಆಕ್ಸಿಜನ್ ಸಿಲಿಂಡರ್ ಮತ್ತು ವೆಂಟಿಲೇಟರ್ ಬೇಡಿಕೆಯ ಪ್ರಮಾಣವನ್ನು ಇದು ತಗ್ಗಿಸಲಿದೆ ಎಂದು ಸಚಿವ ಹರ್ಷವರ್ಧನ್ ಅಭಿಪ್ರಾಯ ಪಟ್ಟಿದ್ದಾರೆ. (ಏಜೆನ್ಸೀಸ್)