ಕೋವಾಕ್ಸಿನ್​​ಗೆ ಸಿಕ್ತು ಡಿಸಿಜಿಐ ಅನುಮತಿ: ಹ್ಯೂಮನ್ ಕ್ಲಿನಿಕಲ್ ಟ್ರಯಲ್​ ಶುರು

COVAXIN
Published on

ಹೈದರಾಬಾದ್​: ದೇಶದ ಮೊದಲ ಕೋವಿಡ್​ 19 ಔಷಧ ಎಂದು ಹೇಳಲಾಗುತ್ತಿರುವ ಕೋವ್ಯಾಕ್ಸಿನ್​​ನ ಹ್ಯೂಮನ್ ಕ್ಲಿನಿಕಲ್ ಟ್ರಯಲ್​ಗೆ ಡ್ರಗ್​ ಕಂಟ್ರೋಲರ್​ ಜನರಲ್ ಆಫ್​ ಇಂಡಿಯಾ (ಡಿಸಿಜಿಐ) ಅನುಮತಿ ನೀಡಿದ್ದಾಗಿ ವರದಿಯಾಗಿದೆ.

ಹೈದರಾಬಾದ್ ಮೂಲದ ಭಾರತ್ ಬಯೋಟೆಕ್​ ಎಂಬ ಲಸಿಕೆ ಉತ್ಪಾದಕ ಕಂಪನಿ ಕೋವಾಕ್ಸಿನ್​ ಅನ್ನು ಅಭಿವೃದ್ಧಿಪಡಿಸಿದೆ. ಹೈದರಾಬಾದ್​ನ ಜಿನೋಮ್​ ವ್ಯಾಲಿಯಲ್ಲಿ ಇರುವ ಬಯೋ ಸೇಫ್ಟಿ ಲೆವೆಲ್ ಮೂರರ ಹೈ ಕಂಟೇನ್ಮೆಂಟ್​ ಫೆಸಿಲಿಟಿಯಲ್ಲಿ ಈ ಲಸಿಕೆಯನ್ನು ಅಭಿವೃದ್ಧಿಪಡಿಸಲಾಗಿದೆ. ದೇಶೀಯವಾಗಿಯೇ ಅಭಿವೃದ್ಧಿಪಡಿಸಿರುವ ಲಸಿಕೆಗೆ ಕೋವಾಕ್ಸಿನ್​ ಎಂದು ಹೆಸರಿಡಲಾಗಿದ್ದು, ಸದ್ಯ ಇನ್​ಆ್ಯಕ್ಟಿವೇಟೆಡ್ ವಾಕ್ಸಿನ್ ಆಗಿದೆ. ಪುಣೆಯ ನ್ಯಾಷನಲ್ ಇನ್​ಸ್ಟಿಟ್ಯೂಟ್ ಆಫ್​ ವೈರಾಲಜಿಯಲ್ಲಿ ಇದನ್ನು ಅಭಿವೃದ್ಧಿಪಡಿಸಿ ಅದರಿಂದ ಸಾರ್ಸ್​-ಕೋವ್​-2 ಒತ್ತಡವನ್ನು ಪ್ರತ್ಯೇಕಿಸಿ ನಂತರ ಭಾರತ್​ ಬಯೋಟೆಕ್​ಗೆ ಹಸ್ತಾಂತರಿಸಲಾಗಿದೆ. ಇದರ ಫಲಿತಾಂಶವನ್ನು ಕಂಪನಿಯು ಡಿಸಿಜಿಐಗೆ ಸಲ್ಲಿಸಿದ್ದು, ಹ್ಯೂಮನ್ ಕ್ಲಿನಿಕಲ್ ಟ್ರಯಲ್​ಗೆ ಅನುಮತಿ ಸಿಕ್ಕಿದೆ. ಇದರೊಂದಿಗೆ ಮುಂದಿನ ತಿಂಗಳು ದೇಶಾದ್ಯಂತ ಈ ಲಸಿಕೆಯ ಕ್ಲಿನಿಕಲ್ ಟ್ರಯಲ್ ಆರಂಭವಾಗಲಿದೆ.

ಕೋವಿಡ್​-19 ತಡೆಗೆ ಭಾರತದ ಮೊದಲ ಸ್ವದೇಶಿ ಲಸಿಕೆ ಕೋವಾಕ್ಸಿನ್ ಎಂದು ಘೋಷಿಸುವುದಕ್ಕೆ ನಾವು ಹೆಮ್ಮೆ ಪಡುತ್ತಿದ್ದೇವೆ. ಐಸಿಎಂಆರ್ ಮತ್ತು ಎನ್​ಐವಿ ಪಾಲುದಾರಿಕೆ ಈ ಲಸಿಕೆಯ ಅಭಿವೃದ್ಧಿಯಲ್ಲಿ ಮಹತ್ವದ್ದಾಗಿತ್ತು. ಸಿಡಿಎಸ್​ಸಿಒದ ಮಾರ್ಗಸೂಚಿ ಮತ್ತು ಪೂರಕ ಬೆಂಬಲದ ಕಾರಣ ಇದು ಬಹಳ ಬೇಗನೆ ಕಾರ್ಯಸಾಧುವಾಯಿತು. ನಮ್ಮ ಆರ್​ಆ್ಯಂಡ್ ಡಿ ಮತ್ತು ಉತ್ಪಾದನಾ ತಂಡಗಳ ಸದಸ್ಯರು ಈ ಲಸಿಕೆಯ ಅಭಿವೃದ್ಧಿಗೆ ನಮ್ಮಲ್ಲಿರುವ ಟೆಕ್ನಾಲಜಿ ಮತ್ತು ಇತರೆ ಮೂಲಸೌಕರ್ಯವನ್ನು ಬಳಸಿಕೊಂಡು ಅವಿರತವಾಗಿ ಶ್ರಮವಹಿಸಿದ್ದಾರೆ ಎಂದು ಭಾರತ್ ಬಯೋಟೆಕ್​ನ ಸಿಎಂಡಿ ಡಾ.ಕೃಷ್ಣ ಎಲ್ಲಾ ತಿಳಿಸಿದ್ದಾರೆ.

ಕಂಪನಿಯ ಜೆಎಂಡಿ ಸುಚಿತ್ರಾ, ನಮ್ಮಲ್ಲಿ ಸದ್ಯ ಚಾಲ್ತಿಯಲ್ಲಿರುವ ಸಂಶೋಧನೆ ಮತ್ತು ಸಾಂಕ್ರಾಮಿಕ ರೋಗಗಳನ್ನು ಕುರಿತ ಪರಿಣತೆಯು ಎಚ್​1ಎನ್​1 ಲಸಿಕೆ ಅಭಿವೃದ್ಧಿ ಪಡಿಸುವಲ್ಲಿಯೂ ನೆರವಾಗಿತ್ತು ಎಂದು ಹೇಳಿದ್ದಾರೆ. ಈ ಕಂಪನಿ ಇದುವರೆಗೆ ಪೊಲಿಯೋ, ರೇಬಿಸ್​, ರೊಟಾವೈರಸ್​, ಜಪಾನೀಸ್ ಎನ್​ಸೆಫಾಲಿಟಿಸ್​, ಚಿಕೂನ್​ಗುನ್ಯಾ, ಝಿಕಾ ವೈರಸ್​ಗೆ ಲಸಿಕೆ ಅಭಿವೃದ್ಧಿಪಡಿಸಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net