

ಕರ್ನೂಲ್: ಅತ್ಯಂತ ಅಮಾನವೀಯ ನಡವಳಿಕೆಯೊಂದನ್ನು ಗ್ರಾಮಸ್ಥರು ತೋರಿದ ಪರಿಣಾಮ ಗರ್ಭಿಣಿಯ ಶವ ಸಂಸ್ಕಾರಕ್ಕೆ ಪೊಲೀಸರೇ ಬರಬೇಕಾಗಿ ಬಂತು. ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ರುದ್ರಾವರಂ ವಲಯದ ಬಿ.ನಾಗಿರೆಡ್ಡಿಪಲ್ಲೆಂ ಎಂಬಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ಮೂಢನಂಬಿಕೆಗೆ ಬಲಿಯಾಗಿರುವ ಗ್ರಾಮದಲ್ಲಿ ಗ್ರಾಮಸ್ಥರ ಒತ್ತಡಕ್ಕೆ ಬಿದ್ದು ಕುಟುಂಬದವರೂ ಮನೆ ಮಗಳ ಶವ ಸಂಸ್ಕಾರಕ್ಕೆ ಹಿಂದೇಟು ಹಾಕಿದ್ದರು. ಜೂನ್ 27ರಂದು ಈ ಘಟನೆ ನಡೆದಿತ್ತು. ಅಂತ್ಯ ಸಂಸ್ಕಾರ ನಡೆಸುವ ಬದಲು ಶವವನ್ನು ಮರಕ್ಕೆ ಕಟ್ಟಿಹಾಕಿ ಅಮಾನವೀಯತೆ ತೋರಿದ್ದರು.
ವರದಿಗಳ ಪ್ರಕಾರ, ಮೃತ ಮಹಿಳೆಯ ಹೆಸರು ಲಾವಣ್ಯ. ವಯಸ್ಸು 20. ಒಂದೂವರೆ ವರ್ಷದ ಹಿಂದೆ ಧರ್ಮೇಂಧ್ರ ಎಂಬಾತನೊಂದಿಗೆ ಈಕೆಯ ವಿವಾಹವಾಗಿತ್ತು. ಶುಕ್ರವಾರ ರಾತ್ರಿ ಆಕೆಯನ್ನು ಪ್ರಸವಕ್ಕಾಗಿ ನಾಂದಲ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ, ವೈದ್ಯರ ನಿರ್ಲಕ್ಷ್ಯದ ಪರಿಣಾಮ ಪ್ರಸವ ನೀಡದೆಯೇ ಆಕೆ ಮೃತಪಟ್ಟಿದ್ದಳು. ಈ ದುರಂತದಿಂದ ಆಘಾತಕ್ಕೆ ಒಳಗಾದ ಲಾವಣ್ಯ ಅವರ ಕುಯಟುಂಬ ಸದಸ್ಯರು ಶವವನ್ನು ತವರಿಗೆ ಕರೆತಂದಿದ್ದರು. ಶನಿವಾರ ಶವ ಸಂಸ್ಕಾರ ನಡೆಸುವುದಕ್ಕೆ ಸಿದ್ಧತೆ ಮಾಡಲು ಚಿಂತನೆ ನಡೆಸಿದ್ದರು.
ಗ್ರಾಮಕ್ಕೆ ಶವ ತರುವ ತನಕ ಎಲ್ಲವೂ ಸರಿಯಾಗೇ ಇತ್ತು. ಗ್ರಾಮಕ್ಕೆ ಬಂದ ನಂತರ ಚಿತ್ರಣವೇ ಬದಲಾಯಿತು. ಆ ಕುಟುಂಬದ ದುಃಖದಲ್ಲಿ ಭಾಗಿಯಾಗಬೇಕಾಗಿದ್ದ ಗ್ರಾಮಸ್ಥರು ಇನ್ನಷ್ಟು ದುಃಖಕ್ಕೆ, ಸಂಕಷ್ಟಕ್ಕೆ ಆ ಕುಟುಂಬವನ್ನು ತಳ್ಳಿದರು. ಆ ಮಹಿಳೆಯ ಶವಸಂಸ್ಕಾರಕ್ಕೆ ಗ್ರಾಮಸ್ಥರು ಅಡ್ಡಿ ಉಂಟುಮಾಡಿದರು. ಮಗುವನ್ನು ಹೆರದೆ ಮೃತಪಟ್ಟ ಕಾರಣ ಶವ ಸಂಸ್ಕಾರ ಮಾಡಬಾರದು ಎಂದು ಆಗ್ರಹಿಸಿದರು. ಅಲ್ಲದೆ, ಕುಟುಂಬದವರಿಗೆ ಗ್ರಾಮದಲ್ಲಾಗಲೀ ಹೊರಗಾಗಲೀ ಆಕೆಯ ಶವ ಸಂಸ್ಕಾರ ಮಾಡಕೂಡದು ಎಂದು ತಾಕೀತು ಮಾಡಿದರು. ಕೊನೆಗೆ ಆ ಕುಟುಂಬಕ್ಕೆ ಉಳಿದುದು ಒಂದೇ ದಾರಿಯಾಗಿತ್ತು. ಆಕೆಯ ಶವವನ್ನು ನಲ್ಲಮಲ ಅರಣ್ಯ ಪ್ರದೇಶಕ್ಕೆ ಕೊಂಡೊಯ್ದರು. ಅಪ್ಪನಪಲ್ಲಿ ಸಮೀಪ ಮರಕ್ಕೆ ಶವವನ್ನು ಬಿಗಿದು ಗ್ರಾಮಕ್ಕೆ ಹಿಂದಿರುಗಿದರು.
ರುದ್ರಾವರಂ, ಗೋನಪಲ್ಲೆ ಮತ್ತು ಅಪ್ಪನಪಲ್ಲಿಯ ಕೆಲವು ಕೃಷಿಕರು ಭಾನುವಾರ ಈ ದೃಶ್ಯ ನೋಡಿ ದಂಗಾದರು. ಅಲ್ಲಿಂದ ಓಡಿ ಹೋಗಿ ಪೊಲೀಸರಿಗೆ ಸುದ್ದಿ ತಲುಪಿಸಿದರು. ಎಸ್ಐ ರಾಮಮೋಹನ್ ರೆಡ್ಡಿ ಮತ್ತು ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಶವ ಮಹಜರು ನಡೆಸಿ, ಶವಸಂಸ್ಕಾರಕ್ಕೆ ಕ್ರಮ ತೆಗೆದುಕೊಂಡರು. ಇದೇ ವೇಳೆ, ಘಟನೆಯ ಹಿಂದಿನ ಗ್ರಾಮಸ್ಥರ ಮೌಢ್ಯದಿಂದ ಕೂಡಿದ ಕ್ರೌರ್ಯದ ಮನಸ್ಥಿತಿಯ ಅನಾವರಣವೂ ಆಯಿತು!. (ಏಜೆನ್ಸೀಸ್)