ಪಂಜಾಬ್​ ಸಿಎಂ ಅಮರಿಂದರ್​ ಸಿಂಗ್​ಗೆ ಮತ್ತೊಂದು ಶಾಕ್! ಪ್ರಶಾಂತ್​ ಕಿಶೋರ್​ ರಾಜೀನಾಮೆ

prashantkishor1
Published on

ನವದೆಹಲಿ : ರಾಜಕೀಯ ಚಾಣಕ್ಯನೆಂದೇ ಕರೆಯಲ್ಪಡುವ ಚುನಾವಣಾ ತಂತ್ರಗಾರ ಪ್ರಶಾಂತ್​ ಕಿಶೋರ್​ ಅವರು ಪಂಜಾಬ್ ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರ ಮುಖ್ಯ ಸಲಹೆಗಾರರ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಇದರಿಂದಾಗಿ ಮುಂದಿನ ವರ್ಷದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಅವರ ನೈಪುಣ್ಯದ ಬೆಂಬಲ ಮಿಸ್​ ಆಗಲಿದೆ.

ಬಂಗಾಳ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಅವರಿಗೆ ಬಿಜೆಪಿ ವಿರುದ್ಧ ಗೆಲುವು ಸಾಧಿಸುವಲ್ಲಿ ಸಹಾಯ ಮಾಡುತ್ತಿದ್ದ ಕಿಶೋರ್​ ಅವರನ್ನು, ಮಾರ್ಚ್​ನಲ್ಲಿ​ ತಮ್ಮ ಮುಖ್ಯ ಸಲಹೆಗಾರರಾಗಿ ನೇಮಿಸಿಕೊಂಡಿರುವುದಾಗಿ ಸಿಂಗ್ ಘೋಷಿಸಿದ್ದರು. ಆದರೆ ಇದೀಗ, ಕಿಶೋರ್​ ಅವರು 2022 ರ ರಾಜ್ಯ ಚುನಾವಣೆಗಳಲ್ಲಿ ತಾವು ತೊಡಗಿಸಿಕೊಳ್ಳುವುದಿಲ್ಲ ಎಂದೂ, ಸಾರ್ವಜನಿಕ ಜೀವನದಲ್ಲಿ ಸಕ್ರಿಯ ಪಾತ್ರ ವಹಿಸುವುದರಿಂದ ತಾತ್ಕಾಲಿಕ ಬ್ರೇಕ್ ತೆಗೆದುಕೊಳ್ಳುತ್ತಿರುವೆ ಎಂದೂ ಕ್ಯಾಪ್ಟನ್ ಸಿಂಗ್​ಗೆ ಪತ್ರ ಬರೆದಿದ್ದಾರೆ ಎನ್ನಲಾಗಿದೆ.

ಮುಂದಿನ ವರ್ಷದ ಚುನಾವಣೆಗಳಲ್ಲಿ ತಾವು ಪಾತ್ರ ವಹಿಸುವುದಿಲ್ಲ. ತಮ್ಮ ಗಮನವೇನಿದ್ದರೂ 2024 ರ ಲೋಕಸಭಾ ಚುನಾವಣೆಗಳ ಮೇಲಿರಲಿದೆ ಎಂದು ಕಿಶೋರ್​  ಹೇಳಿರುವುದಾಗಿ ಎನ್​ಡಿಟಿವಿ ವರದಿ ಮಾಡಿದೆ. ಕಿಶೋರ್​ ಅವರ ಈ ನಿರ್ಧಾರದಿಂದ, ಈಗಷ್ಟೇ ಪಕ್ಷದ ಆಂತರಿಕ ಕಲಹಗಳನ್ನು ಇತ್ಯರ್ಥಪಡಿಸಿಕೊಂಡಿದ್ದ ಪಂಜಾಬ್​ ಕಾಂಗ್ರೆಸ್ಸಿನ ಚುನಾವಣಾ ಸಿದ್ಧತೆಗೆ ಏಟು ಬೀಳುವುದೇ ಎಂದು ಕಾದುನೋಡಬೇಕಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net