

ಕೋಲ್ಕತ: ಪಶ್ಚಿಮ ಬಂಗಾಳದಲ್ಲಿ ವಿಧಾನ ಸಭೆ ಚುನಾವಣೆ ನಡೆಯಲು ಇನ್ನು ಕೆಲ ತಿಂಗಳುಗಳು ಬಾಕಿಯಿವೆ. ಆದರೆ ಅಷ್ಟರಲ್ಲಾಗಲೇ, ತೃಣಮೂಲ ಕಾಂಗ್ರೆಸ್ ಪಕ್ಷದ ನಾಯಕರು ಪಕ್ಷಕ್ಕೆ ಕೈ ಕೊಡಲಾರಂಭಿಸಿದ್ದು, ಮಮತಾ ಬ್ಯಾನರ್ಜಿಗೆ ದೊಡ್ಡ ಆಘಾತವಾಗಿದೆ. ಸುವೆಂದು ಅಧಿಕಾರಿ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿ, ಬಿಜೆಪಿ ಸೇರಿದ ಬೆನ್ನಲ್ಲೇ ಇದೀಗ ಮತ್ತೊಬ್ಬ ಸಚಿವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಮಾಜಿ ಕ್ರಿಕೆಟಿಗ ಹಾಗೂ ಪಶ್ಚಿಮ ಬಂಗಾಳದ ಕ್ರೀಡಾ ಸಚಿವ ಲಕ್ಷ್ಮಿ ರತನ್ ಶುಕ್ಲಾ ಅವರು ಮಂಗಳವಾರದಂದು ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಅದರ ಜತೆ ಹೌರಾ ಜಿಲ್ಲೆಯ ಅಧ್ಯಕ್ಷ ಸ್ಥಾನಕ್ಕೂ ರಾಜೀನಾಮೆ ಸಲ್ಲಿಸಿದ್ದಾರೆ. ಸದ್ಯದ ಮಟ್ಟಿಗೆ ಕೇವಲ ಶಾಸಕ ಸ್ಥಾನದಲ್ಲಿ ಮಾತ್ರವೇ ಮುಂದುವರಿಯಲು ಅವರು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಶುಕ್ಲಾ ಅವರು ಸಚಿವ ಸ್ಥಾನವನ್ನು ತ್ಯಜಿಸಿರುವ ಹಿಂದಿರುವ ಉದ್ದೇಶ ಇನ್ನೂ ತಿಳಿದುಬಂದಿಲ್ಲ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದು, ಅವರು ಅದನ್ನು ಅಂಗೀಕರಿಸಿದ್ದಾರೆ ಎನ್ನಲಾಗಿದೆ. ಶುಕ್ಲಾ ಅವರು ರಾಜಕೀಯದಿಂದ ಹೊರಬರುವ ಚಿಂತನೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಆದರೆ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡುತ್ತಾರಾ, ಪಕ್ಷ ಬಿಟ್ಟು ಹೊರಬಂದು ಬೇರೆ ಪಕ್ಷ ಸೇರುವ ಚಿಂತನೆಗಳಿವೆಯೇ ಎನ್ನುವುದರ ಬಗ್ಗೆ ಯಾವುದೇ ಮಾಹಿತಿ ಇಲ್ಲ.
ಶುಕ್ಲಾ ಅವರು ಮೂರು ಬಾರಿ ಭಾರತದಿಂದ ಒಡಿಐ ಪಂದ್ಯವನ್ನಾಡಿದ್ದರು. ಐಪಿಎಲ್ನಲ್ಲಿ ಕೋಲ್ಕತ ನೈಟ್ ರೈಡರ್ಸ್, ದೆಲ್ಲಿ ಡೇರ್ಡೆವಿಲ್ಸ್ ಮತ್ತು ಸನ್ರೈಸರ್ಸ್ ಹೈದರಾಬಾದ್ ತಂಡಗಳಿಗೆ ಆಡಿದ್ದರು. (ಏಜೆನ್ಸೀಸ್)