VIDEO| ಕರ್ನಾಟಕ ಮೂಲದ ವ್ಯಕ್ತಿಯಿಂದ ಉಳಿಯಿತು ಮುಂಬೈ ಪ್ರಯಾಣಿಕನ ಪ್ರಾಣ! ಪೊಲೀಸ್ ಪೇದೆ ಸಾಹಸ ಹೇಗಿದೆ ನೋಡಿ

train
Published on

ಮುಂಬೈ: ಪೋಲೀಸರು ಇರೋದು ಜನರನ್ನ ಕಾಪಾಡೋಕೆ ಅಂತ ನಿರೂಪಿಸುವಂಥ ಕೆಲಸವೊಂದನ್ನು ಪೋಲೀಸ್ ಪೇದೆಯೊಬ್ಬರು ಬಹಳ ಸರಾಗವಾಗಿ ಮಾಡಿದ ಘಟನೆ ಇದು. ಅದಕ್ಕಾಗೇ ಮುಂಬಯಿ ಪೋಲೀಸ್ ತಮ್ಮ ಟ್ವಿಟರ್ ಖಾತೆಯಲ್ಲಿ ಈ ಮೈನವಿರೇಳಿಸುವ ಸಿಸಿಟಿವಿ ಕ್ಲಿಪ್ಪಿಂಗ್ಅನ್ನು ಶೇರ್ ಮಾಡಿದೆ!

ಮುಂಬಯಿಯ ದಾಹಿಸಾರ್ ರೈಲು ನಿಲ್ದಾಣದಲ್ಲಿ ಎಂದಿನಂತೆ ಪ್ರಯಾಣಿಕರ ಆಗುಹೋಗುಗಳು ನಡೆಯುತ್ತಿದ್ದವು. ಪೋಲೀಸ್ ಕಾನ್​ಸ್ಟಬಲ್ ಯೋಗೇಶ್ ಹಿರೇಮಠ್ ತಮ್ಮಷ್ಟಕ್ಕೆ ನಡೆದುಕೊಂಡು ಹೋಗುತ್ತಿದ್ದರು. ಆಗ ನಿಲ್ದಾಣ ಬಿಟ್ಟು ಹೊರಟಿದ್ದ ರೈಲನ್ನು ಹತ್ತಲು ವ್ಯಕ್ತಿಯೊಬ್ಬರು ಧಾವಿಸಿಬಂದರು. ಚಲಿಸುತ್ತಿದ್ದ ರೈಲನ್ನು ಪ್ರವೇಶಿಸಲು ಹೋದಾಗ ದಿಢೀರ್ ಆಗಿ ಹಿಡಿತ ತಪ್ಪಿ ಬಿದ್ದರು. ಅವರು ಬಿದ್ದದ್ದು ರೈಲು ಮತ್ತು ಪ್ಲಾಟ್​ಫಾರಂ ನಡುವೆ ಅಡ್ಡಲಾಗಿ!

ದೇವದೂತನಂತೆ ತಕ್ಷಣ ಕಾರ್ಯಪ್ರವೃತ್ತರಾದ ಹಿರೇಮಠ್, ಬಿದ್ದವರ ಕಾಲು ಹಿಡಿದು ಬಲವಾಗಿ ಹಿಂದಕ್ಕೆಳೆದರು. ಕೂದಲೆಳೆಯಲ್ಲಿ ಪ್ರಾಣಾಪಾಯ ತಪ್ಪಿಸಿದರು.

ಚಲಿಸುತ್ತಿದ್ದ ರೈಲು ಹತ್ತಲು ಪ್ರಯತ್ನಿಸಿ ಜಾರಿ ಬಿದ್ದ ಯುವಕನನ್ನು ಉಳಿಸಿದ ಪುಣ್ಯ ಹಿರೇಮಠ್ ಪಾಲಾದರೆ, ಈ ದೃಶ್ಯವನ್ನು ಟ್ವಿಟರ್​ನಲ್ಲಿ "ಯುವರ್ ಸೇಫ್ಟಿ ಇಸ್ ಇನ್ ಗುಡ್ ಹ್ಯಾಂಡ್ಸ್​" ಎಂಬ ಶೀರ್ಷಿಕೆ ಕೊಟ್ಟು ಹೆಮ್ಮೆಯಿಂದ ಹಂಚಿಕೊಂಡಿದ್ದಾರೆ ಮುಂಬಯಿ ಪೋಲೀಸರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net