ರಾಜಸ್ಥಾನ| ನೀಟ್​ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ವಿದ್ಯಾರ್ಥಿ ಆತ್ಮಹತ್ಯೆ

NEET Suicide
Published on

ಜೈಪುರ: ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (NEET)ಗೆ ತಯಾರಿ ನಡೆಸುತ್ತಿದ್ದ ವಿದ್ಯಾರ್ಥಿಯೋರ್ವ ಃಆಸ್ಟೆಲ್​ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಜಸ್ಥಾನದ ಸಿಕಾರ್​ ಜಿಲ್ಲೆಯಲ್ಲಿ ನಡೆದಿದೆ.

ಮೃತರನ್ನು ನಿತಿನ್​ ಫೌಜ್ದಾರ್​ (18) ಎಂದು ಗುರುತಿಸಲಾಗಿದೆ. ಇವರು ರಾಜಸ್ಥಾನದ ಭರತ್‌ಪುರ ಜಿಲ್ಲೆಯ ನಾಡಬಾಯಿ ಪಟ್ಟಣದ ನಿವಾಸಿ ಎಂದು ತಿಳಿದು ಬಂದಿದೆ. ನೀಟ್​ ಪರೀಕ್ಷೆಗಾಗಿ ಕೋಚಿಂಗ್ ಸೆಂಟರ್‌ನಲ್ಲಿ ತಯಾರಿ ನಡೆಸುತ್ತಿದ್ದರು ಎಂದು ವರದಿಯಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಉದ್ಯೋಗ ನಗರ ಪೊಲೀಸ್​ ಠಾಣಾಧಿಕಾರಿ ಸುರೇಂದ್ರ ಡೆಗ್ರಾ, ನೀಟ್​ ಪರೀಕ್ಷೆಗೆ ತಯಾರಿ ನಡೆಸಲೆಂದು ನಿತಿನ್​ ಜೂನ್​ ತಿಂಗಳಲ್ಲಿ ಸಿಕಾರ್​ಗೆ ಆಗಮಿಸಿದ್ದರು. ಖಾಸಗಿ ಕೋಚಿಂಗ್​ ಸೆಂಟರ್​ ಒಂದರಲ್ಲಿ ತರಬೇತಿ ಪಡೆಯುತ್ತಿದ್ದರು. ಶನಿವಾರ ತರಗತಿಗೆ ಹಾಜರಾಗದೇ ಇರುವುದನ್ನು ಗಮಿಸಿದ ಆತನ ಸ್ನೇಹಿತರು ಕರೆ ಮಾಡಿದಾಗ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ.

ಅನುಮಾನಗೊಂಡು ಆತನ ಹಾಸ್ಟೆಲ್​ ರೂಮಿಗೆ ತೆರಳಿ ಪರಿಶೀಲನೆ ನಡೆಸಿದಾಗ ಆತ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಕಳೆದ ಮೂರು ದಿನದ ಅವಧಿಯಲ್ಲಿ ಇದು ಎರಡನೇ ಪ್ರಕರಣವಾಗಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಉದ್ಯೋಗ ನಗರ ಪೊಲೀಸ್​ ಠಾಣಾಧಿಕಾರಿ ಸುರೇಂದ್ರ ಡೆಗ್ರಾ ತಿಳಿಸಿದ್ದಾರೆ.

ರಾಜಸ್ಥಾನದ ಕೋಟಾ ಒಂದರಲ್ಲೇ ಬರೋಬ್ಬರಿ 23 ವಿದ್ಯಾರ್ಥಿಗಳು ಈ ವರ್ಷ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2023ರಲ್ಲೇ ಇದು ಅತಿ ಹೆಚ್ಚು ಎಂದು ಹೇಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net