

ನವದೆಹಲಿ: ಭಾರತ ಸರ್ಕಾರಕ್ಕೆ ಬೇಕಾಗಿದ್ದ ಮೋಸ್ಟ್ ವಾಂಟೆಡ್ ಉಗ್ರ ಶೇಖ್ ಜಮೀಲ್ ಉರ್ ರೆಹಮಾನ್ ನಿಗೂಢ ರೀತಿಯಲ್ಲಿ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ. ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಭಾಗದ ಅಬೋಟಾಬಾದ್‌ನಲ್ಲಿ ಈತನ ಮೃತದೇಹ ಪತ್ತೆಯಾಗಿದೆ.
ಜಮ್ಮು-ಕಾಶ್ಮಿರದ ಪುಲ್ವಾಮಾ ಮೂಲದವನಾದ ಶೇಖ್ ಜಮೀಲ್ ಉರ್ ರೆಹಮಾನ್ ಯುನೈಟೆಡ್ ಜಿಹಾದ್ ಕೌನ್ಸಿಲ್ನ (UJC) ಸ್ವಯಂ-ಘೋಷಿತ ಪ್ರಧಾನ ಕಾರ್ಯದರ್ಶಿ ಆಗಿ ಕಾರ್ಯ ನಿರ್ವಹಿಸುತ್ತಿದ್ದ.
ಭಾರತ ಮೂಲದವನಾದ ಶೇಖ್ ಜಮೀಲ್ ಉರ್ ರೆಹಮಾನ್, ದೇಶದಲ್ಲಿ ಅನೇಕ ವಿದ್ವಂಸಕ ಕೃತ್ಯಗಳನ್ನು ಸಂಘಟಿಸಿ ಪಾಕಿಸ್ತಾನಕ್ಕೆ ಪಲಾಯನ ಮಾಡಿದ್ದ. ಪಾಕಿಸ್ತಾನದ ಗುಪ್ತಚರ ಸಂಸ್ಥೆ ISIನೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಶೇಖ್ ಜಮೀಲ್ ಉರ್ ರೆಹಮಾನ್ನನ್ನು ಭಾರತ ಸರ್ಕಾರ 2022ರ ಅಕ್ಟೋಬರ್ ತಿಂಗಳಲ್ಲಿ ಭಯೋತ್ಪಾದಕ ಎಂದು ಘೋಷಿಸಿತ್ತು.
ಕಳೆದ ಕೆಲ ದಿನಗಳಿಂದ ಭಾರತ ಸರ್ಕಾರಕ್ಕೆ ಬೇಕಾಗಿರುವ ಮೋಸ್ಟ್ ವಾಂಟೆಡ್ ಉಗ್ರರು ನಿಗೂಢ ರೀತಿಯಲ್ಲಿ ಮೃತಪಡುತ್ತಿದ್ದು, ಡಿಸೆಂಬರ್ 17, 2023 ರಂದು ಖೈಬರ್ ಪಖ್ತುಂಖ್ವಾದಲ್ಲಿ ಲಷ್ಕರ್-ಎ-ತೋಯ್ಬಾದೊಂದಿಗೆ ಸಂಬಂಧ ಹೊಂದಿರುವ ಭಯೋತ್ಪಾದಕ ಹಬೀಬುಲ್ಲಾ ಮೇಲೆ ಅಪರಿಚಿತ ಬಂದೂಕುಧಾರಿಗಳಿಂದ ಗುಂಡಿನ ದಾಳಿ ನಡೆದಿತ್ತು.
ಉಗ್ರಗಾಮಿ ಅಜಂ ಚೀಮಾ ಫೆಬ್ರವರಿಯಲ್ಲಿಯೇ ಮೃತಪಟ್ಟಿದ್ದಾನೆ. ಚೀಮಾ ಹೃದಯಾಘಾತದಿಂದ ಫೈಸಲಾಬಾದ್‌ನಲ್ಲಿ ಮೃತಪಟ್ಟಿದ್ದ. 2006ರ ರೈಲು ಬಾಂಬ್ ಸ್ಫೋಟ ಮತ್ತು 26/11 ದಾಳಿಯ ಸಂಚಿನಲ್ಲಿ ಈತ ಭಾಗಿಯಾಗಿದ್ದ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಲಷ್ಕರ್ ಕಮಾಂಡರ್ ಅದ್ನಾನ್ ಅಹ್ಮದ್ ಅಲಿಯಾಸ್ ಅಬು ಹಂಝಾಲಾನನ್ನು ಕರಾಚಿಯಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಅದಕ್ಕೂ ಮುನ್ನ ನವೆಂಬರ್‌ನಲ್ಲಿ ಲಷ್ಕರ್ ಕಮಾಂಡರ್ ಅಕ್ರಮ್ ಗಾಜಿ ಮೇಲೆ ಗುಂಡು ಹಾರಿಸಲಾಗಿತ್ತು. ಇದಲ್ಲದೆ, ಖ್ವಾಜಾ ಶಾಹಿದ್ 2018 ರಲ್ಲಿ ಕೊಲ್ಲಲ್ಪಟ್ಟಿದ್ದ.