

ಯಮುನಾನಗರ: ದಿನ ಬೆಳಗಾಗುವಷ್ಟರಲ್ಲಿ ಮಾಧ್ಯಮಗಳಲ್ಲಿ ಅಪ್ರಾಪ್ತರ ಮೇಲೆ ಅತ್ಯಾಚಾರ ನಡೆದ ದಾರುಣ ಘಟನೆಗಳೇ ಬಿತ್ತರಗೊಳ್ಳುತ್ತಿವೆ. ಹಲವಾರು ಕಾಯ್ದೆ ಕಾನೂನುಗಳ ಅಸ್ತಿತ್ವದ ಮಧ್ಯೆಯೂ ಎಗ್ಗಿಲ್ಲದೆ ನಡೆಯುತ್ತಿರುವ ಇಂಥ ಆತಂಕಕಾರಿ ಘಟನೆಗಳು ಕಾಯ್ದೆ ಕಾನೂನುಗಳತ್ತ ಪ್ರಶ್ನಾರ್ಥಕವಾಗಿ ನೋಡುವಂತೆ ಮಾಡುತ್ತಿವೆ.
ಈಗ ಅಂಥದ್ದೇ ಮತ್ತೊಂದು ಆತಂಕಕಾರಿ ಘಟನೆ ನಡೆದಿದೆ. ಹದಿನಾಲ್ಕು ವರ್ಷದ ಬಾಲಕಿಯನ್ನು ಆಕೆಯ ಮನೆ ಮಾಲೀಕ ಹಾಗೂ ಆತನ ಗೆಳೆಯ ಇಬ್ಬರೂ ಸೇರಿ ಅತ್ಯಾಚಾರ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಸೋಮವಾರ ಮಧ್ಯಾಹ್ನ ಈ ಘಟನೆ ಬೆಳಕಿಗೆ ಬಂದಿದ್ದು, ಬುಧವಾರ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಬಾಲಕಿಯ ಕುಟುಂಬ ಯಮುನಾನಗರದ ಸಾದರ ಪ್ರದೇಶದ ಕಾಲೋನಿಯಲ್ಲಿರುವ ಆರೋಪಿ ಮನೆಯಲ್ಲಿ ಬಾಡಿಗೆದಾರರಾಗಿ ವಾಸಿಸುತ್ತಿದ್ದಾರೆ. ಮನೆ ಮಾಲೀಕ ಆರೋಪಿ ರಿಜ್ವಾನ್ ಹಾಗೂ ಮತ್ತೊಬ್ಬ ಆರೋಪಿಯನ್ನು ಶಾರುಖ್ ಎಂದು ಗುರುತಿಸಲಾಗಿದೆ.
ಬಾಲಕಿಯ ಪೋಷಕರು ಪ್ಲೈವುಡ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಾರೆ. ಸೋಮವಾರ ಮಧ್ಯಾಹ್ನ, ರಿಜ್ವಾನ್ ಮತ್ತು ಶಾರುಖ್ ಆಕೆಯ ಮನೆಗೆ ಹೋದಾಗ ಆಕೆಯ ಪೋಷಕರು ಕೆಲಸಕ್ಕೆ ಹೋಗಿದ್ದರು. ಆಗ ಆರೋಪಿಗಳು ಬಾಲಕಿ ಮೇಲೆ ಅತ್ಯಾಚಾರ ಎಸಗಿ ಅಲ್ಲಿಂದ ಪರಾರಿಯಾಗಿದ್ದಾರೆ.
ರಾತ್ರಿ 8 ಗಂಟೆಗೆ ಮನೆಗೆ ಮರಳಿದ ಬಾಲಕಿಯ ಪೋಷಕರು ಆಕೆ ದುಃಖಿತಳಾಗಿರುವುದನ್ನು ಕಂಡು ಕಾರಣ ಕೇಳಿದ್ದಾರೆ. ಬಾಲಕಿ ತನ್ನ ತಂದೆಗೆ ನಡೆದ ದಾರುಣ ಘಟನೆ ವಿವರಿಸಿದ್ದಾಳೆ.
ಈ ವಿಷಯವನ್ನು ಪೊಲೀಸರಿಗೆ ತಿಳಿಸಿದಾಗ ಪೊಲೀಸರು ಆರೋಪಿಗಳನ್ನು ಬಂಧಿಸಿ ಅವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಆರೋಪಿಯನ್ನು ಬುಧವಾರ ಬಂಧಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ. ಗುರುವಾರ ಜಿಲ್ಲಾ ನ್ಯಾಯಾಲಯದಲ್ಲಿ ಹಾಜರುಪಡಿಸಲಾಗುವುದು ಎಂದು ಯಮುನಾನಗರ್ ಮಹಿಳಾ ಪೊಲೀಸ್ ಠಾಣಾಧಿಕಾರಿ ಕುಸುಮ್ ಬಾಲಾ ತಿಳಿಸಿದ್ದಾರೆ.