

ಕಳೆದೊಂದು ತಿಂಗಳ ಅವಧಿಯಲ್ಲೇ ಅಮೆರಿಕದಲ್ಲಿ ಐವರು ಭಾರತೀಯ ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. ವಿಶ್ವವಿದ್ಯಾಲಯಗಳ ಕ್ಯಾಂಪಸ್ ಸುತ್ತಮುತ್ತ ದಾಳಿ/ಹತ್ಯೆಯಂಥ ಘಟನೆಗಳು ನಡೆಯುತ್ತಿದ್ದರೂ, ವಿವಿ ಆಡಳಿತ ಮಂಡಳಿಗಳು ಮೌನವಾಗಿವೆ. ಇತ್ತ, ಭಾರತದಲ್ಲಿ ಪಾಲಕರು ಚಿಂತಾಕ್ರಾಂತರಾಗಿದ್ದಾರೆ. ಉನ್ನತ ಶಿಕ್ಷಣಕ್ಕೆ ತೆರಳಿದ ಮಕ್ಕಳ ಸುರಕ್ಷತೆ ಹೇಗೆ ಎಂದು ಆತಂಕಿತರಾಗಿದ್ದಾರೆ.
ಅಮೆರಿಕದಲ್ಲಿ ಭಾರತೀಯ ವಿದ್ಯಾರ್ಥಿಗಳ ಮೇಲೆ ಹಲ್ಲೆ, ಮಾರಣಾಂತಿಕ ದಾಳಿ ಮತ್ತು ಹತ್ಯೆ ಪ್ರಕರಣಗಳು ಹೆಚ್ಚುತ್ತಿರುವುದು ಕಳವಳಕ್ಕೆ ಕಾರಣವಾಗಿದೆ. ಈ ಸರಣಿ ಘಟನೆಗಳಿಂದ ಭಾರತೀಯ ವಿದ್ಯಾರ್ಥಿಗಳು ಅಸುರಕ್ಷಿತ ಭಾವ ಎದುರಿಸುತ್ತಿದ್ದು, ವಿಶ್ವವಿದ್ಯಾಲಯಗಳು ಯಾವುದೇ ಕ್ರಮಕ್ಕೆ ಮುಂದಾಗದಿರುವುದು ಅಸಮಾಧಾನ, ಆತಂಕ ಹೆಚ್ಚಿಸಿದೆ. ಅಲ್ಲದೆ, ಗನ್ ಕಲ್ಚರ್ ಹೆಚ್ಚಿರುವ ರಾಜ್ಯಗಳಲ್ಲೇ ಈ ಘಟನೆಗಳು ಸಂಭವಿಸಿದ್ದು, ಅಮೆರಿಕದ ಬಂದೂಕು ಸಂಸ್ಕೃತಿ ಈಗ ಭಾರತೀಯರಿಗೂ ಮಾರಕವಾಗಿ ಪರಿಣಮಿಸಿದೆ. ಅಮೆರಿಕದಲ್ಲಿ 2022ರಲ್ಲಿ 12, 2023ರಲ್ಲಿ 30 ಭಾರತೀಯ ವಿದ್ಯಾರ್ಥಿಗಳು ಮೃತಪಟ್ಟಿದ್ದು. 2024ರ ಆರಂಭದಲ್ಲೇ ಐವರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಚಿಕಾಗೋ ವಿಶ್ವವಿದ್ಯಾಲಯದಲ್ಲಿ ಮಾಹಿತಿ-ತಂತ್ರಜ್ಞಾನದಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿರುವ ಸೈಯ್ಯದ್ ಮಜಾಹಿರ್ ಅಲಿ ಎಂಬುವರ ಮೇಲೆ ಫೆಬ್ರವರಿ 4ರಂದು ದುಷ್ಕರ್ವಿುಗಳು ದಾಳಿ ನಡೆಸಿ, ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಹಲ್ಲೆಯಿಂದ ತಮಗಾದ ಸ್ಥಿತಿಯ ಬಗ್ಗೆ ಸೈಯ್ಯದ್ ವಿಡಿಯೋ ಮಾಡಿ ವಿವರಣೆ ನೀಡಿದ್ದು, ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಲ್ಲದೆ, ಸುರಕ್ಷತೆಯ ಕುರಿತಂತೆ ಕಳವಳವನ್ನೂ ಹೆಚ್ಚಿಸಿದೆ.
ಹೆಚ್ಚುತ್ತಿದೆ ಮತ್ಸರ, ದ್ವೇಷ: ಭಾರತೀಯ ಮೂಲದ ವಿದ್ಯಾರ್ಥಿಗಳು ಓದಿನಲ್ಲಿ ಜಾಣರು. ವಿಶ್ವವಿದ್ಯಾಲಯಗಳಲ್ಲಿ ಅಥವಾ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಇವರು ಅಮೆರಿಕನ್ ವಿದ್ಯಾರ್ಥಿಗಳನ್ನೇ ಹಿಂದಿಕ್ಕುತ್ತಿದ್ದಾರೆ. ಉತ್ತಮ ಶ್ರೇಯಾಂಕ ಪಡೆದು ಗಮನ ಸೆಳೆಯುತ್ತಿದ್ದಾರೆ. ಆದರೆ, ಸ್ಪರ್ಧೆಯಲ್ಲಿ ಹಿಂದುಳಿಯುವ ಅಲ್ಲಿನ ವಿದ್ಯಾರ್ಥಿಗಳು ಭಾರತೀಯ ವಿದ್ಯಾರ್ಥಿಗಳ ಬಗೆಗೆ ಮತ್ಸರ, ದ್ವೇಷವನ್ನು ಬೆಳೆಸಿಕೊಳ್ಳುತ್ತಿದ್ದಾರೆ. ಇವರು ತಮ್ಮ ಹಕ್ಕನ್ನು ಕಸಿದುಕೊಳ್ಳುತ್ತಿದ್ದಾರೆ ಎಂಬ ಭಾವನೆ ಅವರಲ್ಲಿ ಬೆಳೆಯುತ್ತಿದ್ದು, ಉದ್ಯೋಗ ಮಾರುಕಟ್ಟೆಯಲ್ಲೂ ಇವರೇ ತಮಗೆ ಪ್ರತಿಸ್ಪರ್ಧಿಯಾಗುತ್ತಾರೆ, ತಮ್ಮ ಉದ್ಯೋಗ ಕಿತ್ತುಕೊಳ್ಳುತ್ತಾರೆ ಎಂಬ ಅಸುರಕ್ಷಾ ಭಾವ ಅಮೆರಿಕನ್ ಯುವ ಸಮುದಾಯದಲ್ಲಿ ಕಾಡುತ್ತಿದೆ.
ಒಬಾಮ ಕೂಡ ಎಚ್ಚರಿಸಿದ್ದರು: ಬರಾಕ್ ಒಬಾಮ ಅಮೆರಿಕ ಅಧ್ಯಕ್ಷರಾಗಿದ್ದ ಸಮಯದಲ್ಲಿ ಹಲವು ವಿಶ್ವವಿದ್ಯಾಲಯಗಳಿಗೆ ಭೇಟಿ ನೀಡಿ ಅಲ್ಲಿನ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ್ದರು. ಆಗೆಲ್ಲ ಅವರು, ‘ಭಾರತೀಯ ವಿದ್ಯಾರ್ಥಿಗಳು ಜಾಣರು. ಗಣಿತ ಮತ್ತು ವಿಜ್ಞಾನದ ಕಲಿಕೆಯಲ್ಲಿ ಅವರು ನಿಮಗಿಂತ ಮುಂದೆ ಇದ್ದಾರೆ. ಜ್ಞಾನ, ಪ್ರತಿಭೆ ಮತ್ತು ಕೌಶಲದ ಬಲದಿಂದ ಉತ್ತಮ ಉದ್ಯೋಗವನ್ನೂ ಪಡೆದುಕೊಳ್ಳುತ್ತಾರೆ. ನೀವೆಲ್ಲ ವಿಡಿಯೋಗೇಮ್ಳನ್ನು ಪಕ್ಕಕ್ಕೆ ಇಡಿ. ಓದಿನತ್ತ ಗಮನ ಹರಿಸಿ, ಅದರಲ್ಲೂ ಗಣಿತ, ವಿಜ್ಞಾನಕ್ಕೆ ಆದ್ಯತೆ ನೀಡಿ’ ಎಂದು ಕರೆ ನೀಡಿದ್ದರು. ಪರಿಸ್ಥಿತಿ ಬದಲಾಗಿಲ್ಲ. ಅಮೆರಿಕನ್ ಯುವಕರು ಮೋಜು, ಮಸ್ತಿಯಲ್ಲಿ ಮುಳುಗಿ ಶೈಕ್ಷಣಿಕ ಕಲಿಕೆಯತ್ತ ಬೆನ್ನು ತಿರುಗಿಸುತ್ತಾರೆ. ಆ ಬಳಿಕ ದುಡ್ಡು ಮಾಡಲು ವಾಮಮಾರ್ಗಗಳನ್ನು ಅನುಸರಿಸುತ್ತಾರೆ. ಅದೇನಿದ್ದರೂ, ಭಾರತೀಯ ವಿದ್ಯಾರ್ಥಿಗಳ ಕುರಿತಾಗಿ ದ್ವೇಷಭಾವನೆ ಆಳವಾಗಿ ಬೇರೂರುತ್ತಿದ್ದು, ಅಹಿತಕರ ಘಟನೆಗಳಿಗೆ ಕಾರಣವಾಗುತ್ತಿದೆ. ಅಮೆರಿಕದಲ್ಲಿರುವ ಗನ್ ಸಂಸ್ಕೃತಿ ಇಂಥ ಘಟನೆಗಳನ್ನು ಉತ್ತೇಜಿಸುತ್ತಿದೆ.
ವಿದ್ಯಾರ್ಥಿಗಳ ಮುಂದಿರುವ ಸವಾಲುಗಳು: ಸಾಂಸ್ಕೃತಿಕ ಭಿನ್ನತೆ, ಓದಿನ ಮೇಲೆ ವ್ಯತಿರಿಕ್ತ ಪರಿಣಾಮ, ಸಾಮಾಜಿಕ ಅಭದ್ರತೆ, ಸಹಾಯ ಕೇಳಲು ಹಿಂಜರಿಕೆ, ವಿವಿಗಳಲ್ಲಿ ನೆರವಿನ ಹಸ್ತ ಇಲ್ಲದಿರುವುದು, ಮಾನಸಿಕ ಒತ್ತಡ ಖಿನ್ನತೆ.
ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಏರಿಕೆ: ಉನ್ನತ ಶಿಕ್ಷಣದ ವಿಚಾರದಲ್ಲಿ ಭಾರತೀಯ ವಿದ್ಯಾರ್ಥಿಗಳಿಗೆ ಅಮೆರಕವೇ ಮೊದಲ ಆಯ್ಕೆಯಾಗಿ ಮುಂದುವರಿದಿದೆ. ಕಳೆದ ಮೂರು ವರ್ಷಗಳಿಂದ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ. 2022-23ರಲ್ಲಿ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ ಶೇಕಡ 35ರಷ್ಟು ಹೆಚ್ಚಾಗಿ 2,68,923ಕ್ಕೆ ತಲುಪಿದೆ. 2021-22ರಲ್ಲಿ ಈ ಸಂಖ್ಯೆ 1,99,182 ಆಗಿತ್ತು. ಅಮೆರಿಕದಲ್ಲಿ ವ್ಯಾಸಂಗ ಮಾಡುತ್ತಿರುವ 10 ಲಕ್ಷ ವಿದೇಶಿ ವಿದ್ಯಾರ್ಥಿಗಳ ಪೈಕಿ ಭಾರತೀಯ ವಿದ್ಯಾರ್ಥಿಗಳ ಪಾಲು ಶೇಕಡ 25ಕ್ಕಿಂತಲೂ ಹೆಚ್ಚು.