

ಬೆಂಗಳೂರು: ಕೆಪಿಎಸ್‌ಸಿ ಮೂಲಕ ಪಿಡಬ್ಲುೃಡಿ ಇಲಾಖೆಯಲ್ಲಿ ನೌಕರಿ ಕೊಡಿಸುವುದಾಗಿ ವಂಚಿಸಿ ಬಂಧನಕ್ಕೆ ಒಳಗಾಗಿದ್ದ ಸಿಐಡಿ ಮಹಿಳಾ ಸೂಪರಿಂಟೆಂಡೆಂಟ್ ವಿರುದ್ಧ ಹೈಗ್ರೌಂಡ್ಸ್ ಠಾಣೆಯಲ್ಲಿ ಮತ್ತೊಂದು ವಂಚನೆ ಪ್ರಕರಣ ದಾಖಲಾಗಿದೆ.
ಧಾರವಾಡದ ನ್ಯೂ ಎಪಿಎಂಸಿ ನಿವಾಸಿ ಸರೋಜಾ ಎಂಬುವರು ನೀಡಿದ ದೂರಿನ ಮೇರೆಗೆ ಸಿಐಡಿ ಘಟಕದಲ್ಲಿ ಸೆಕ್ಷನ್ ಸೂಪರಿಂಟೆಂಡೆಂಟ್ ಬಿ.ಎನ್. ಅನಿತಾ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಕುರಿತು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
2023ನೇ ಸಾಲಿನಲ್ಲಿ ಆದಾಯ ತೆರಿಗೆ ಇನ್‌ಸ್ಪೆಕ್ಟರ್ ಹುದ್ದೆ ನೇಮಕಾತಿಗೆ ಸರೋಜಾ ಅವರ ಪುತ್ರ ಅರ್ಜಿ ಸಲ್ಲಿಸಿ ಪರೀಕ್ಷೆ ಬರೆದಿದ್ದರು. ಏಪ್ರಿಲ್‌ನಲ್ಲಿ ಸತ್ಯನಾರಾಯಣ ಹೊನ್ನಿಹಳ್ಳಿ ಮೂಲಕ ಸಿಐಡಿ ಕಚೇರಿಯ ಅನಿತಾ ಪರಿಚಯವಾಗಿತ್ತು. ದೂರುದಾರರಿಗೆ ಕರೆ ಮಾಡಿದ ಅನಿತಾ, ನಿಮ್ಮ ಮಗನಿಗೆ ನೌಕರಿ ಕೊಡಿಸುತ್ತೇನೆ. ನನಗೆ ಗಣ್ಯವ್ಯಕ್ತಿಗಳು ಪರಿಚಯ ಇದ್ದಾರೆ ಎಂದು ಭರವಸೆ ನೀಡಿದ್ದರು. ಈ ಮಾತು ನಂಬಿದ ಸರೋಜಾ, ಸಿಐಡಿ ಕಚೇರಿಗೆ ಹೋಗಿ ಅನಿತಾ ಭೇಟಿ ಮಾಡಿ ಕೆಲಸದ ವಿಚಾರವಾಗಿ ಚರ್ಚೆ ನಡೆಸಿದಾಗ 50 ಲಕ್ಷ ರೂ. ಕೊಡಬೇಕೆಂದು ಭೇಡಿಕೆ ಇಟ್ಟಿದ್ದರು.
ಸರೋಜಾ ಪುತ್ರ ಮತ್ತು ಸತ್ಯನಾರಾಯಣ್ 2023ರ ಜುಲೈ 23ರಂದು ಸಿಐಡಿ ಕಚೇರಿಗೆ ಹೋಗಿ ಅನಿತಾರನ್ನು ಭೇಟಿ ಮಾಡಿ 5 ಲಕ್ಷ ರೂ. ಕೊಟ್ಟಿದ್ದರು. ನಂತರ ಹಂತ ಹಂತವಾಗಿ 30.50 ಲಕ್ಷ ರೂ. ಕೊಟ್ಟಿದ್ದರು. ಈ ನಡುವೆ ಸರೋಜಾ, ಹಣ ನೀಡಿರುವುದಕ್ಕೆ ಪ್ರತಿಯಾಗಿ ನಮಗೆ ಅಗ್ರಿಮೆಂಟ್‌ಗೆ ಸಹಿ ಮಾಡಿಕೊಡುವಂತೆ ಕೇಳಿದಾಗ ‘ನಾನು ಸಿಐಡಿಯಲ್ಲಿ ಹಿರಿಯ ಅಧಿಕಾರಿ ಆಗಿದ್ದೇನೆ. ಬೇಕಿದ್ದರೆ ನಿಮಗೆ ನನ್ನ ಚೆಕ್ ಕೊಡುತ್ತೇನೆ ಎಂದು ಹೇಳಿ ಓರಿಯಂಟಲ್ ಬ್ಯಾಂಕ್ ಆ್ ಕಾಮರ್ಸ್ ಬ್ಯಾಂಕಿನ ಚೆಕ್ ಕೊಟ್ಟಿದ್ದರು. ಹಣ ಕೊಟ್ಟ ಮೇಲೆ ನೇಮಕಾತಿ ಆದೇಶ ಪ್ರತಿಯನ್ನು ಕೊಡುವಂತೆ ಕೇಳಿದಾಗ, ‘ಸರ್ಕಾರದ ಹಂತದಲ್ಲಿ ಯಾವುದೇ ಕೆಲಸ ಆಗುತ್ತಿಲ್ಲ. ಸ್ವಲ್ಪ ದಿನ ಕಾಯಬೇಕು’ ಎಂದು ಅನಿತಾ ಸಬೂಬು ಹೇಳಿಕೊಂಡು ಕಾಲ ಮುಂದೂಡಿದ್ದರು.
ಕೊನೆಗೆ ಸಿಐಡಿ ಕಚೇರಿಗೆ ಹೋಗಿ ಅನಿತಾ ಬಳಿ ಹಣ ವಾಪಸ್ ಕೊಡುವಂತೆ ಒತ್ತಾಯ ಮಾಡಿದಾಗ ಏರುಧ್ವನಿಯಲ್ಲಿ ಅನಿತಾ, ‘ನೀನು ಏನು ಬೇಕಾದರೂ ಮಾಡು. ನಾನು ಹಣ ವಾಸಪ್ ಕೊಡುವುದಿಲ್ಲ’ ಎಂದು ಬೆದರಿಸಿ ವಾಪಸ್ ಕಳುಹಿಸಿದ್ದರು ಎಂದು ದೂರಿನಲ್ಲಿ ಸರೋಜಾ ಉಲ್ಲೇಖಿಸಿದ್ದಾರೆ. ಇದರ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.