

ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಅನ್ನಭಾಗ್ಯ ಯೋಜನೆಯಡಿ ಐದು ಕೆ.ಜಿ ಅಕ್ಕಿ ಬದಲಿಗೆ ಹಣ ಪಡೆಯಲು ಕಳೆದ ಒಮ್ಮೆಯಾದರೂ ಪಡಿತರ ಮೂರು ತಿಂಗಳಲ್ಲಿ ಆಹಾರ ಧಾನ್ಯಗಳನ್ನು ಪಡೆದಿರಬೇಕು ಎಂದು ಸರ್ಕಾರ ನಿಬಂಧನೆ ಹೇರಿದೆ.
ರಾಜ್ಯದಲ್ಲಿ 1.28 ಕೋಟಿ ಬಿಪಿಎಲ್ ಪಡಿತರದಾರರಿಗೆ ಪ್ರತಿ ಸದಸ್ಯನಿಗೆ 5 ಕೆಜಿ ಅಕ್ಕಿ ಬದಲು 170 ರೂ.ನಂತೆ, ಪಡಿತರ ಚೀಟಿಯಲ್ಲಿರುವ ಸದಸ್ಯರ ಸಂಖ್ಯೆಗೆ ತಕ್ಕಂತೆ ಹಣ ಜಮಾ ಆಗಲಿದೆ. ಆದರೆ ಈ ರೀತಿ ಹಣ ಪಡೆಯಲು ಬಿಪಿಎಲ್ ಕುಟುಂಬಗಳು ಕಳೆದ ಮೂರು ತಿಂಗಳಲ್ಲಿ ಒಮ್ಮೆಯಾದರೂ ಪಡಿತರ ಅಕ್ಕಿ ಪಡೆದಿರಬೇಕು ಎನ್ನುವ ನಿಯಮ ವಿಧಿಸಿದೆ.
ಪ್ರತಿ ತಿಂಗಳಿಗೆ ಬಿಪಿಎಲ್ ಪಡಿತರ ಚೀಟಿದಾರರಿಗೆ ರೇಶನ್ ಅಕ್ಕಿಸಿಗುತ್ತದೆ. ಈವರೆಗೂ ಪ್ರತಿ ಸದಸ್ಯನಿಗೆ 5 ಕೆಜಿಯಂತೆ ಅಕ್ಕಿ ನೀಡಲಾಗುತ್ತಿತ್ತು. ಅದನ್ನು ಹತ್ತು ಕೇಜಿಗೆ ಏರಿಸುತ್ತೇವೆಂದು ಕಾಂಗ್ರೆಸ್ ಚುನಾವಣೆಗೆ ಮೊದಲೇ ಅನ್ನಭಾಗ್ಯ ಯೋಜನೆ ಘೋಷಣೆ ಮಾಡಿತ್ತು. ಅದರಂತೆ, ಅಕ್ಕಿ ವಿತರಣೆಗೆ ಕೇಂದ್ರದಿಂದ ಪೂರೈಕೆ ಆಗದೇ ಇರುವುದರಿಂದ ಅಕ್ಕಿ ಬದಲಿಗೆ ಹಣ ನೀಡಲು ಮುಂದಾಗಿದೆ. ಈಗ ಮೂರು ತಿಂಗಳಲ್ಲಿ ಒಮ್ಮೆಯಾದರೂ ಪಡಿತರ ಧಾನ್ಯಗಳನ್ನು ಪಡೆದಿರಬೇಕು ಎಂದು ಹೊಸ ಷರತ್ತು ವಿಧಿಸಿದ್ದು, ಆಮೂಲಕ ಅಗತ್ಯ ಇರುವ ಕುಟುಂಬಕ್ಕೆ ಮಾತ್ರ ನಗದು ವರ್ಗಾವಣೆ ಮಾಡುತ್ತೇವೆ ಎನ್ನುವ ಸಂದೇಶ ನೀಡಿದೆ.
ಪಡಿತರ ಅಗತ್ಯವಿರುವಂತಹ ಕುಟುಂಬಗಳಿಗೆ ಮಾತ್ರವೇ ನಗದು ವರ್ಗಾವಣೆ ಮಾಡಲು ಯೋಜನೆ ರೂಪಿಸಿರುವ ಸರ್ಕಾರವು ಈ ಕ್ರಮಕ್ಕೆ ಮುಂದಾಗಿದೆ. ಇದರೊಂದಿಗೆ ಪಡಿತರ ಚೀಟಿಯ ಮುಖ್ಯಸ್ಥರ ಆಧಾರ್ ಜೋಡಣೆಗೆ ಹಾಗೂ ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆ ಹೊಂದಿರಬೇಕು. ಜು.10 ರಿಂದ ವರ್ಗಾವಣೆ ಪ್ರಕ್ರಿಯೆ ಶುರುವಾಗಲಿ. ನಗದು ವರ್ಗಾವಣೆ ಪ್ರಕ್ರಿಯೆ ಜುಲೈ ಅಂತ್ಯದ ವೇಳೆಗೆ ಎಲ್ಲ ಜಿಲ್ಲೆಗಳ ಫಲಾನುಭವಿಗಳ ಖಾತೆಗೆ ಐದು ಕೆ.ಜಿ ವ್ಯವಹಾರ ಅಕ್ಕಿಯ ಹಣ ಜಮೆಯಾಗಲಿದೆ.
ಅರ್ಹರಿರುವಂತಹ ಪಡಿತರ ಚೀಟಿಗಳು ಮತ್ತು ಸದಸ್ಯರ ಪಟ್ಟಿಯನ್ನು (ಸೆಟ್ ಆಫ್ ರೇಷನ್ ಕಾರ್ಡ್) ಎನ್ ಐಸಿ ಸಂಖ್ಯೆಯ ತಂತ್ರಾಂಶದಲ್ಲಿ ಸಿದ್ಧಪಡಿಸಿ, ಆಧಾರ್ ಲಿಂಕ್ ಆಗಿರುವಂತಹ ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆಗಳ ಪರಿಶೀಲನೆಗಾಗಿ ಡಿಬಿಟಿ (ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್‌ಫರ್ ) ಕೋಶಕ್ಕೆ ವರ್ಗಾಯಿಸಲಾಗುತ್ತದೆ. ಅದರಂತೆ ನ್ಯಾಷನಲ್ ಪೇಮೆಂಟ್ಸ್ ಕಾರ್ಪೋರೇಷನ್ ಆಫ್ ಇಂಡಿಯಾ (ಎನ್ ಪಿಸಿಐ) ನಿಂದ ಕಾರ್ಡ್ದಾರರ ಬ್ಯಾಂಕ್ ಖಾತೆಗಳ ಮಾಹಿತಿಯನ್ನು ಪಡೆಯಲಾಗುತ್ತದೆ. ಹೀಗಾಗಿ ಪಡಿತರ ಚೀಟಿದಾರರು ಪ್ರತ್ಯೇಕವಾಗಿ ಬ್ಯಾಂಕ್ ಖಾತೆಗಳ ಮಾಹಿತಿಯನ್ನು ಇಲಾಖೆಗೆ ನೀಡಬೇಕಾಗಿಲ್ಲ.
ಕುಟುಂಬದ ಮುಖ್ಯಸ್ಥರಿಲ್ಲದೆ ಹಣವಿಲ್ಲ: ಪಡಿತರ ಚೀಟಿಯಲ್ಲಿ ಕುಟುಂಬದ ಮುಖ್ಯಸ್ಥರನ್ನು ಹೊಂದಿರದ ಅಥವಾ ಒಂದಕ್ಕಿಂತ ಹೆಚ್ಚಿನ ಮುಖ್ಯಸ್ಥರನ್ನು ಹೊಂದಿರುವ ಪಡಿತರ ಚೀಟಿ ಕುಟುಂಬಗಳು ಅಕ್ಕಿ ಬದಲಿಗೆ ಹಣ ಪಡೆಯಲು ಅರ್ಹತೆ ಹೊಂದಿರುವುದಿಲ್ಲ. ಅದರಂತೆ ಕುಟುಂಬದ ಮುಖ್ಯಸ್ಥರನ್ನು ಗುರುತಿಸದ ಹಾಗೂ ಒಂದಕ್ಕಿಂತಲೂ ಹೆಚ್ಚು ಮುಖ್ಯಸ್ಥರನ್ನು ಹೊಂದಿರುವವರು ಆಹಾರ ಇಲಾಖೆ ಅಧಿಕಾರಿಗಳ ಸಹಕಾರ ಪಡೆದು ಸರಿಪಡಿಸಿಕೊಳ್ಳಬೇಕು.