ರೆಡ್ ಕಾರ್ನರ್ ನೋಟಿಸ್ ಬೆನ್ನಲ್ಲೇ ಗ್ಯಾಂಗ್​ಸ್ಟರ್​ ಲಾರೆನ್ಸ್ ಬಿಷ್ಣೋಯಿ ಸಹೋದರ ಅನ್ಮೋಲ್ ಬಂಧನ!

ವಿಜಯವಾಣಿ - 2024-11-18T204024.499
Published on

ಅಮೆರಿಕ: ಕುಖ್ಯಾತ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯಿ ಅವರ ಕಿರಿಯ ಸಹೋದರ ಅನ್ಮೋಲ್ ಬಿಷ್ಣೋಯಿನನ್ನು ಇಂದು ಅಮೆರಿಕಾದಲ್ಲಿ ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. 2022ರಲ್ಲಿ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹತ್ಯೆ, ಕಳೆದ ತಿಂಗಳು ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದಿಕ್ ಬರ್ಬರ ಕೊಲೆ ಮತ್ತು ಜೂನ್‌ನಲ್ಲಿ ನಟ ಸಲ್ಮಾನ್ ಖಾನ್ ಮುಂಬೈ ನಿವಾಸದ ಹೊರಗೆ ನಡೆದ ಗುಂಡಿನ ದಾಳಿ ಸೇರಿದಂತೆ ಹಲವಾರು ದೊಡ್ಡ ಮಟ್ಟದ ಅಪರಾಧಗಳಲ್ಲಿ ಅನ್ಮೋಲ್ ಕೈವಾಡವಿದೆ ಎಂದು ವಾರೆಂಟ್​ ಜಾರಿಗೊಳಿಸಿದ್ದ ಮುಂಬೈ ಪೊಲೀಸರು, ಇದೀಗ ಆತನನ್ನು ಅಮೆರಿಕಾದಲ್ಲಿ ಬಂಧಿಸಿದ್ದಾರೆ.

ಈ ತಿಂಗಳ ಆರಂಭದಲ್ಲಿ, ಮಹಾರಾಷ್ಟ್ರದ ವಿಶೇಷ ನ್ಯಾಯಾಲಯವು ಹೊರಡಿಸಿದ ಜಾಮೀನು ರಹಿತ ವಾರಂಟ್ ಬೆನ್ನಲ್ಲೇ ವಿದೇಶದಲ್ಲಿ ತಲೆಮರಿಸಿಕೊಂಡಿದ್ದ ಅನ್ಮೋಲ್​ನನ್ನು ಭಾರತಕ್ಕೆ ಮರಳಿ ಕರೆತರಲು ಮುಂಬೈ ಪೊಲೀಸರ ಅಪರಾಧ ವಿಭಾಗವು ಬಂಧನದ ಪ್ರಕ್ರಿಯೆ ಆರಂಭಿಸಿತ್ತು. ಆತನ ಬಂಧನಕ್ಕೆ ಇಂಟರ್‌ಪೋಲ್ ರೆಡ್ ಕಾರ್ನರ್ ನೋಟಿಸ್ ಕೂಡ ಜಾರಿ ಮಾಡಿತ್ತು. ಮೂಲತಃ ಪಂಜಾಬ್‌ನ ಫಾಜಿಲ್ಕಾದವರಾದ ಅನ್ಮೋಲ್ ಬಿಷ್ಣೋಯಿ, ನಕಲಿ ಪಾಸ್‌ಪೋರ್ಟ್ ಮೂಲಕ ಭಾರತದಿಂದ ಪಲಾಯನ ಮಾಡಿ, ನಂತರ ಕೆನಡಾದಲ್ಲಿರುವ ಮಾಹಿತಿ ಲಭ್ಯವಾಗಿತ್ತು.

ಭಾರತದ ಭಯೋತ್ಪಾದನಾ ನಿಗ್ರಹ ಘಟಕವು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ದಾಖಲಿಸಿದ ಎರಡು ಪ್ರಕರಣಗಳಲ್ಲಿ ಅನ್ಮೋಲ್​ ದೊಡ್ಡ ಆರೋಪಗಳನ್ನು ಎದುರಿಸುತ್ತಿದ್ದಾನೆ, ಈತನ ಪತ್ತೆಗೆ 10 ಲಕ್ಷ ರೂ. ಬಹುಮಾನ ಘೋಷಿಸುವ ಮುಖೇನ ಪೊಲೀಸರು ಮೋಸ್ಟ್-ವಾಂಟೆಡ್ ಕ್ರಿಮಿನಲ್​ ಪಟ್ಟಿಗೆ ಆತನನ್ನು ಸೇರಿಸಿದ್ದರು,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net