

ಹನಗೋಡು: ಹನಗೋಡು ಹೋಬಳಿಯ ಇತಿಹಾಸ ಪ್ರಸಿದ್ಧ ದೊಡ್ಡ ಹೆಜ್ಜೂರಿನ ಶ್ರೀ ಆಂಜನೇಯಸ್ವಾಮಿ ರಥೋತ್ಸವ ಮಂಗಳವಾರ ಸಾವಿರಾರು ಮಂದಿ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.
ರಥೋತ್ಸವಕ್ಕೂ ಮುನ್ನ ದೇವಸ್ಥಾನದಿಂದ ಶ್ರೀ ಆಂಜನೇಯ ಉತ್ಸವ ಮೂರ್ತಿಯನ್ನು ಮಂಗಳವಾದ್ಯದೊಂದಿಗೆ ಹೊತ್ತು ತಂದು ದೇವಾಲಯದ ಸುತ್ತ ಪ್ರದಕ್ಷಣೆ ಹಾಕಿ ನಂತರ ಮಧ್ಯಾಹ್ನ 1.30 ಗಂಟೆಗೆ ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ನಂತರ ಸಾವಿರಾರು ಭಕ್ತರು ಸ್ವಾಮಿಗೆ ಜೈಕಾರ ಹಾಕುತ್ತಾ ರಥವನ್ನು ದೇವಾಲಯದ ಸುತ್ತ ಒಂದು ಸುತ್ತು ಎಳೆದು ತಂದು ಸ್ವಸ್ಥಾನಕ್ಕೆ ತಂದು ನಿಲ್ಲಿಸಿದರು. ರಥೋತ್ಸವದ ವೇಳೆ ನವ ದಂಪತಿ ಸೇರಿದಂತೆ ಭಕ್ತರು ಹಣ್ಣು, ದವನ ಎಸೆದು ಸ್ವಾಮಿ ಕೃಪೆಗೆ ಪಾತ್ರರಾದರು.
ಭಾರಿ ಜನಸ್ತೋಮ: ಕಳೆದ ನಾಲ್ಕು ವರ್ಷಗಳಿಂದ ದೇವಾಲಯ ಮರು ನಿರ್ಮಾಣದಿಂದ ಹಾಗೂ ಕೋವಿಡ್‌ನಿಂದ ತಾಲೂಕು ಆಡಳಿತ ಸರಳ ಪೂಜಾ ಕೈಂಕರ್ಯಕ್ಕೆ ಸೀಮಿತಗೊಳಿಸಿ ಜಾತ್ರೆಗೆ ನಿರ್ಬಂಧ ಹೇರಿತ್ತು. ಆದರೆ, ಈ ಬಾರಿ ಯಾವುದೇ ನಿರ್ಬಂಧವಿಲ್ಲದ ಕಾರಣ ಜಾತ್ರೆಗೆ ಬೆಳೆಗ್ಗೆಯಿಂದಲೇ ಸಾವಿರಾರು ಜನರು ಆಗಮಿಸಿದ್ದರು. ರಥೋತ್ಸವದ ವೇಳೆಗೆ ಇಡೀ ಜಾತ್ರಾಮಾಳ ಭರ್ತಿಯಾಗಿತ್ತು. ಮುಂಜಾನೆಯಿಂದಲೇ ದೇವಾಲಯದ ಅರ್ಚಕರು ಸ್ವಾಮಿಗೆ ವಿಶೇಷ ಪೂಜಾ ಕೈಂಕರ್ಯ, ಅಭಿಷೇಕ ನಡೆಸಿದರು. ನಂತರ ದೇವಾಲಯದ ಸುತ್ತ ಉತ್ಸವ ಮೂರ್ತಿ ಹೊತ್ತು ಪ್ರದಕ್ಷಿಣೆ ಹಾಕಿದರು.
ಭಕ್ತರು ಹರಕೆ ಸಲ್ಲಿಸಿದರು:
ದೇವರಿಗೆ ಹರಕೆ ಹೊತ್ತವರು ಹಿಂದಿನ ದಿನವೇ ಜಾತ್ರಾ ಮಾಳದಲ್ಲಿ ತಂಗಿದ್ದರು. ಲಕ್ಷ್ಮಣತೀರ್ಥ ನದಿ ದಂಡೆಯಲ್ಲಿ ತಲೆ ಮುಡಿಕೊಟ್ಟು ಬಂದವರು, ಬಾಯಿಬೀಗ ಹಾಕಿಕೊಂಡು ಬಂದು ದೇವಾಲಯ ಸುತ್ತ ಉರುಳು ಸೇವೆ ಸಲ್ಲಿಸಿದರು. ನದಿ ದಂಡೆಯಲ್ಲೇ ಅಡುಗೆ ತಯಾರಿಸಿ ಊಟ ಮಾಡಿದರು. ಕೆಲ ಭಕ್ತರು ಮನೆಯಿಂದ ತಂದಿದ್ದ ಊಟವನ್ನು ಸವಿದರು.
ಶಾಸಕ ಜಿ.ಡಿ.ಹರೀಶ್‌ಗೌಡ, ಗ್ರಾಪಂ ಅಧ್ಯಕ್ಷೆ ಅಂಬಿಕಾ, ಉಪಾಧ್ಯಕ್ಷ ವೆಂಕಟೇಶ್, ಎಪಿಎಂಸಿ ಮಾಜಿ ಅಧ್ಯಕ್ಷರಾದ ಕಿರಂಗೂರು ಬಸವರಾಜ್, ಮುದಗನೂರು ಸುಭಾಷ್, ಟಿಎಪಿಎಂಎಸ್ ಮಾಜಿ ಅಧ್ಯಕ್ಷ ಕೆಂಪೇಗೌಡ, ಜೆಡಿಎಸ್ ಮುಖಂಡರಾದ ರಂಜಿತಾ ಚಿಕ್ಕಮಾಧು, ತಾಪಂ ಮಾಜಿ ಸದಸ್ಯರಾದ ಎಚ್.ಆರ್.ರಮೇಶ್, ಕೆ.ಗಣಪತಿ, ಮಾಜಿ ಅಧ್ಯಕ್ಷರಾದ ದಾ.ರಾ.ಮಹೇಶ್, ಶಿವಶಂಕರ್, ದೇವರಾಜ್, ಹನಗೋಡು ಸಹಕಾರ ಬ್ಯಾಂಕ್ ಆಧ್ಯಕ್ಷ ರವಿಕುಮಾರ್, ಕಿರಂಗೂರು ಗ್ರಾಪಂ ಆದ್ಯಕ್ಷ ಮಧು, ದೇವಾಲಯ ಸಮಿತಿ ಅಧ್ಯಕ್ಷ ಶೇಖರೇಗೌಡ, ಕಾರ್ಯದರ್ಶಿ ನಟರಾಜ್, ಹನಗೋಡು ನಟರಾಜ್, ನಾಗೇಶ್, ಬೀರಪ್ಪ ಭಾಗವಹಿಸಿದ್ದರು.
ಸುಗಮ ಸಂಚಾರ:
ಜಾತ್ರೆ ಮಾಳವು ಮುಖ್ಯ ರಸ್ತೆ ಸಮೀಪದಲ್ಲೇ ಇರುವುದರಿಂದ ಜಾತ್ರೆಗೆ ಬರುವ ವಾಹನಗಳು ಹೆಚ್ಚಾಗುವುದನ್ನು ಅರಿತು ಪೊಲೀಸ್ ಇಲಾಖೆ ಕೆರೆ ಕೋಡಿ ಭಾಗದ ಜಮೀನು ಸೇರಿದಂತೆ ಗ್ರಾಮದ 4 ಕಡೆ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಿದ್ದರು. ಇದರಿಂದ ಜನರ ಓಡಾಟಕ್ಕೆ ತೊಂದರೆಯಾಗಲಿಲ್ಲ. ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಮುನಿಯಪ್ಪ ನೇತೃತ್ವದಲ್ಲಿ ಸಿಬ್ಬಂದಿ ಸಂಚಾರ ದಟ್ಟಣೆಯನ್ನು ಯಶಸ್ವಿಯಾಗಿ ನಿರ್ವಹಿಸಿದರು. ಜಾತ್ರಾ ಸಮಿತಿ ಸದಸ್ಯರು ಸೇರಿದಂತೆ 16 ಹಳ್ಳಿಯ ಗ್ರಾಮಸ್ಥರು ಜಾತ್ರಾ ಯಶಸ್ಸಿಗೆ ಶ್ರಮಿಸಿದರು.
ಬಗೆಬಗೆಯ ಹತ್ತಾರು ಸಿಹಿ ತಿಂಡಿ ಅಂಗಡಿಗಳು, ಮಹಿಳೆಯರ ಅಲಂಕಾರಿಕ ವಸ್ತುಗಳು, ಮಕ್ಕಳ ಆಟಿಕೆ ಅಂಗಡಿಗಳು ತೆರೆದಿದ್ದವು. ಹೆಚ್ಚಾಗಿ ಹಾಡಿಯ ಗಿರಿಜನರು ಆಗಮಿಸಿದ್ದರು. ಸಾರಿಗೆ ಸಂಸ್ಥೆಯಿಂದ ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿತ್ತು. ಹುಣಸೂರಿನ ವೆಂಕಟೇಶ್ವರ ಆಸ್ಪತ್ರೆ ವತಿಯಿಂದ ತಾತ್ಕಾಲಿಕ ಸೇವಾಕೇಂದ್ರ ತೆರೆದು ಆರೋಗ್ಯ ತಪಾಸಣೆ ಮಾಡಲಾಯಿತು.