ನಿಂತಲ್ಲೇ ನಿಂತ ಪಶು ಆಂಬುಲೆನ್ಸ್

Kalasa
ಕಳಸದಲ್ಲಿರುವ ಸಂಚಾರಿ ಪಶುಚಿಕಿತ್ಸಾ ಆಂಬುಲೆನ್ಸ್.
Published on

ಕಳಸ: ಕೇಂದ್ರ ಸರ್ಕಾರದ ಪಶು ಸಂಜೀವಿನಿ ಯೋಜನೆಯಡಿ ಮಂಜೂರಾದ ಸಂಚಾರಿ ತುರ್ತು ಪಶುಚಿಕಿತ್ಸಾ ವಾಹನ ತಾಲೂಕಿನ ಜನತೆಗೆ ಊಟಕ್ಕೆ ಇಲ್ಲದ ಉಪ್ಪಿನಕಾಯಿಯಂತಾಗಿದೆ.

ಮನೆ ಬಾಗಿಲಿಗೆ ಹೋಗಿ ಜಾನುವಾರುಗಳಿಗೆ ಅಗತ್ಯ ಸಂದರ್ಭದಲ್ಲಿ ತುರ್ತು ಚಿಕಿತ್ಸೆ ನೀಡುವ ಉದ್ದೇಶದಿಂದ ರಾಜ್ಯಾದ್ಯಂತ 290 ಸಂಚಾರಿ ತುರ್ತು ಪಶುಚಿಕಿತ್ಸಾ ವಾಹನವನ್ನು ರಾಜ್ಯದ ಪ್ರತಿ ತಾಲೂಕು ಕೇಂದ್ರಗಳಲ್ಲಿ ನಿಯೋಜಿಸಲಾಗಿದೆ. ಆದರೆ ಈ ತುರ್ತು ಪಶು ಚಿಕಿತ್ಸಾ ವಾಹನದಿಂದ ಜಾನುವಾರುಗಳಿಗೆ ಸಕಾಲದಲ್ಲಿ ಸೇವೆ ದೊರೆಯುತ್ತಿಲ್ಲ.
ಕಳಸದ ಹಳುವಳ್ಳಿ ಎಂಬಲ್ಲಿ ಭಾನುವಾರ ಅಪಘಾತವಾಗಿ ಎತ್ತು ರಸ್ತೆಯಲ್ಲಿ ಬಿದ್ದಿತ್ತು. ಕೂಡಲೇ ಸ್ಥಳೀಯ ಗ್ರಾಮಸ್ಥರು ತುರ್ತು ಚಿಕಿತ್ಸಾ ವಾಹನದ ಸಹಾಯವಾಣಿ ಸಂಖ್ಯೆ 1962 ಕರೆ ಮಾಡಿದರು. ಇಂದು ಭಾನುವಾರ ಇರುವುದರಿಂದ ರಜೆ. ನಿಮಗೆ ಸೇವೆ ನೀಡಲು ಸಾಧ್ಯವಿಲ್ಲ ಎಂದು ವಾಹನದ ಸಿಬ್ಬಂದಿ ಉತ್ತರಿಸಿದರು. ನಂತರ ಗಾಯಗೊಂಡ ಎತ್ತನ್ನು ಸ್ಥಳೀಯರು ವಾಹನದಲ್ಲಿ ಸಾಗಿಸಿ ಕಳಸ ಪಶುಆಸ್ಪತ್ರೆ ಬಳಿ ಇಳಿಸಿದರು. ಸೋಮವಾರ ಬೆಳಗ್ಗೆ ಚಿಕಿತ್ಸೆ ನೀಡಲಾಯಿತು.
ತುರ್ತು ಸಂದರ್ಭದಲ್ಲಿ ಸರಿಯಾಗಿ ತುರ್ತು ಚಿಕಿತ್ಸಾ ವಾಹನ ಬಾರದಿರುವ ಕುರಿತು ಸಿಬ್ಬಂದಿಯನ್ನು ವಿಚಾರಿಸಿದರೆ ಈ ವಾಹನದಲ್ಲಿ ಕರ್ತವ್ಯ ನಿರ್ವಹಿಸಬೇಕಾದ ವೈದ್ಯರಿಲ್ಲ. ವಾಹನ ಓಡಿಸಲು ಡೀಸೆಲ್ ಇಲ್ಲ. ತುರ್ತು ಚಿಕಿತ್ಸೆಗೆ ಬೇಕಾದ ಔಷಧಗಳೂ ಇಲ್ಲ. ಕಳಸದಲ್ಲಿ ಸೆ.1ರಿಂದ ಕರ್ತವ್ಯ ನಿರ್ವಹಿಸುತ್ತಿರುವ ಈ ವಾಹನದಲ್ಲಿ ಒಬ್ಬ ಪಶುವೈದ್ಯ, ಒಬ್ಬ ಇನ್ಸ್‌ಪೆಕ್ಟರ್ ಹಾಗೂ ಡ್ರೈವರ್ ಕಂ ಅಟೆಂಡರ್‌ಗಳನ್ನು ನೇಮಿಸಲಾಗಿದೆ. ಆದರೆ ಎರಡು ದಿನದ ಹಿಂದೆಯೇ ಇದರಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೈದ್ಯ ಕೆಲಸ ಬಿಟ್ಟು ಹೋಗಿದ್ದಾರೆ. 3000 ರೂ. ಡೀಸೆಲ್‌ನಲ್ಲಿ 360 ಕಿ.ಮೀ ವಾಹನ ಚಲಾಯಿಸಬೇಕು ಎಂಬ ನಿಯಮವಿದೆ. 270 ಕಿ.ಮೀಗೆ ಆಂಬುಲೆನ್ಸ್‌ಗೆ ಹಾಕಿದ ಡೀಸೆಲ್ ಖಾಲಿಯಾಗಿದೆ. ಆದ್ದರಿಂದ ಕಳೆದ ಮೂರು ದಿನಗಳಿಂದ ಸೌಲಭ್ಯ ನೀಡದೆ ಈ ವಾಹನ ನಿಂತಲ್ಲೇ ನಿಂತಿದೆ.
ವಾರಕ್ಕೇ ನಿಂತ ವಾಹನ:
ಕಳಸ ತಾಲೂಕಿನಲ್ಲಿ ಆರು ಪಶು ಚಿಕಿತ್ಸಾ ಕೇಂದ್ರಗಳಿದ್ದರೂ ಎಲ್ಲಿಯೂ ವೈದ್ಯರಿಲ್ಲ. ಕಳಸ ತಾಲೂಕಿಗೆ ಸಂಚಾರಿ ತುರ್ತು ಪಶುಚಿಕಿತ್ಸಾ ವಾಹನ ಬಂದಾಗ ತಾಲೂಕಿನ ಜಾನುವಾರುಗಳ ಮಾಲೀಕರು ತಮ್ಮ ಮನೆಯಲ್ಲಿರುವ ಹಸು, ಎತ್ತು, ಎಮ್ಮೆ, ಕುರಿ ಸೇರಿ ಯಾವುದೇ ಜಾನುವಾರುಗಳ ಆರೋಗ್ಯದಲ್ಲಿ ಏರುಪೇರದಾಗ ತುರ್ತು ಚಿಕಿತ್ಸೆ ಸಿಗುತ್ತದೆ ಅಂದುಕೊಂಡಿದ್ದರು. ಆದರೆ ಸಂಚಾರಿ ತುರ್ತು ಪಶು ಚಿಕಿತ್ಸಾ ವಾಹನ ಕಳಸಕ್ಕೆ ಬಂದ ಒಂದೇ ವಾರದಲ್ಲಿ ನಿಂತಲ್ಲೇ ನಿಂತಿದೆ. ಇದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ಸೇವೆ ಅಸಾಧ್ಯ:
ಸರ್ಕಾರದ ನಿಯಮಾವಳಿಯಂತೆ ಈ ತುರ್ತು ಚಿಕಿತ್ಸಾ ವಾಹನ ದಿನದ 24 ಗಂಟೆ ಕರ್ತವ್ಯ ನಿರ್ವಹಿಸಬೇಕು. ಜಾನುವಾರುಗಳ ಮಾಲೀಕರು ಸಹಾಯವಾಣಿ ಸಂಖ್ಯೆ 1962ಕ್ಕೆ ಕರೆ ಮಾಡಿದರೆ ಕೆಲ ಸಮಯದಲ್ಲೇ ಮನೆ ಬಾಗಿಲಿಗೆ ವಾಹನಗಳು ತೆರಳಿ ಚಿಕಿತ್ಸೆ ನೀಡಬೇಕು. ಈ ವಾಹನದಲ್ಲಿ ಒಬ್ಬ ಪಶುವೈದ್ಯ, ಒಬ್ಬ ಇನ್ಸ್‌ಪೆಕ್ಟರ್ ಹಾಗೂ ಡ್ರೈವರ್ ಕಂ ಅಟೆಂಡರ್ ಇರಬೇಕು. ಈ ಆಂಬುಲೆನ್ಸ್‌ನಲ್ಲಿ ಆಧುನಿಕ ಶಸ ಚಿಕಿತ್ಸಾ ಘಟಕ, ಪ್ರಯೋಗ ಶಾಲೆ, ಸ್ಕಾೃನಿಂಗ್ ಉಪಕರಣ ಮತ್ತು ಅವಶ್ಯಕ ಔಷಧಗಳು ಇರಬೇಕು. ಅದರೆ ಕಳಸ ತಾಲೂಕಿನಲ್ಲಿ ಆರಂಭವಾದ ವಾರದಲ್ಲೇ ತನ್ನ ಸೇವೆ ನಿಲ್ಲಿಸಿದೆ.
ಕಳಸದ ಪಶು ಚಿಕಿತ್ಸಾ ಆಂಬುಲೆನ್ಸ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೈದ್ಯರು ಎರಡು ದಿನಗಳ ಹಿಂದೆ ಕೆಲಸ ಬಿಟ್ಟು ಹೋಗಿದ್ದಾರೆ. ವೈದ್ಯರ ಅಭಾವ ಇದೆ. ವಾಹನಕ್ಕೆ ಡೀಸೆಲ್ ಮತ್ತು ಅಗತ್ಯ ಔಷಧಗಳನ್ನು ಒಂದೇ ದಿನದಲ್ಲಿ ವ್ಯವಸ್ಥೆ ಮಾಡಲಾಗುವುದು. ಪ್ರಾರಂಭದಲ್ಲಿ ಕೆಲವೊಂದು ಲೋಪಗಳು ಬರುತ್ತವೆ. ಮುಂದೆ ಎಲ್ಲವೂ ಸರಿಯಾಗುವ ವಿಶ್ವಾಸವಿದೆ ಎನ್ನುತ್ತಾರೆ ಡಿವಿಜನ್ ಕೋ ಆರ್ಡಿನೇಟರ್ ಶಿವಕುಮಾರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net