

ಮುಂಬೈ: ಟಾಲಿವುಡ್ನ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ನಿರ್ದೇಶಿಸಿದ 'ಅನಿಮಲ್' ಚಿತ್ರ ಇತ್ತೀಚೆಗೆ ತೆರೆಕಂಡು, ಬಾಕ್ಸ್ ಆಫೀಸ್ನಲ್ಲಿ ಉತ್ತಮ ಗಳಿಕೆ ಕಂಡಿತು. 18ನೇ ದಿನಕ್ಕೆ ಚಿತ್ರವು 835 ಕೋಟಿ ರೂ. ಕಲೆಕ್ಷನ್ ಮಾಡಿದೆ. ಪ್ರಾರಂಭದಲ್ಲಿ ಪ್ರೇಕ್ಷಕರಿಂದ ತುಂಬಿದ್ದ ಚಿತ್ರಮಂದಿರಗಳಲ್ಲಿ ಇದೀಗ ಕೊಂಚ ಇಳಿಕೆಯಾಗಿದೆ. ಗಲ್ಲಾಪೆಟ್ಟಿಗೆಯಲ್ಲಿ ಉತ್ತಮವಾಗಿ ಸಾಗಿದರೂ, ಸಿನಿಪ್ರೇಕ್ಷಕರಿಂದ ಪಾಸಿಟಿವ್ ಪ್ರತಿಕ್ರಿಯೆ ಪಡೆಯುವಲ್ಲಿ ಚಿತ್ರ ವಿಫಲಗೊಂಡಿದೆ. ಈ ಮಧ್ಯೆ ಅನಿಮಲ್ ಪಾರ್ಟ್ 3 ಬಗ್ಗೆ ಹೊಸ ವದಂತಿಯೊಂದು ಹರಿದಾಡಿದೆ.
ಬಾಲಿವುಡ್ ಅಂಗಳದಲ್ಲಿ ತೆರೆಕಂಡ 'ಅನಿಮಲ್' ಚಿತ್ರದ ಗಳಿಕೆ ಸದ್ಯ ನಿರ್ದೇಶಕ ಸಂದೀಪ್ಗೆ ಸಂತಸ ಮೂಡಿಸಿದೆ. ಈ ಚಿತ್ರದ ನಂತರ ಬಾಲಿವುಡ್ನ ಇತರೆ ಸ್ಟಾರ್ ನಟರೊಂದಿಗೆ ಸಿನಿಮಾ ಮಾಡಲು ಕೂಡ ಚಿಂತಿಸಿದ್ದಾರೆ ಎನ್ನಲಾಗಿದೆ. ಈ ಮಧ್ಯೆ ವಂಗಾ ತಮ್ಮ ಮುಂದಿನ 'ಅನಿಮಲ್ ಪಾರ್ಕ್' ಚಿತ್ರವನ್ನು ತೆರೆಯ ಮೇಲೆ ತರುವ ಕುರಿತಂತೆ ಇತ್ತೀಚಿನ ಒಂದು ಸಂದರ್ಶನದಲ್ಲಿ ತಿಳಿಸಿದ್ದರು. ಆದ್ರೆ, ಈಗ ಅದನ್ನು ಮೀರಿ ಅನಿಮಲ್ 3 ವದಂತಿ ಹೆಚ್ಚು ಸದ್ದು ಮಾಡುತ್ತಿದೆ.
'ಅನಿಮಲ್' ಸಿನಿಮಾದ ಪ್ರಾರಂಭದಲ್ಲಿ ರಣಬೀರ್ ಕಪೂರ್ ಅವರನ್ನು 60 ವರ್ಷದವರಂತೆ ತೋರಿಸಿದ ನಿರ್ದೇಶಕ, ಇದರ ಮುಂದಿನ ಭಾಗಗಳ ಖಚಿತಪಡಿಸಿದ್ದಾರೆ ಎನ್ನಲಾಗಿದೆ. ಅನಿಮಲ್ ಪಾರ್ಟ್ 2 ಮತ್ತು 3 ಚಿತ್ರಕ್ಕಾಗಿ ಸಂದೀಪ್ ಈಗಾಗಲೇ ಯೋಜನೆ ಹಾಕಿಕೊಂಡಿದ್ದು, 'ಅನಿಮಲ್ ಪಾರ್ಕ್' ಬಗ್ಗೆ ಸುಳಿವು ನೀಡಿದ್ದಾರೆ. ಇದೆಲ್ಲದರ ಮಧ್ಯೆ ಪಾರ್ಟ್ 3 ಚಿತ್ರೀಕರಣ ಸಾಧ್ಯವೇ ಎಂಬ ಪ್ರಶ್ನೆ ಉದ್ಭವಗೊಂಡಿದೆ.
ಸ್ವತಃ ನಿರ್ದೇಶಕರೇ ಹೇಳಿರುವಂತೆ 'ಅನಿಮಲ್ ಪಾರ್ಕ್' ಚಿತ್ರೀಕರಣ 2026ಕ್ಕೆ ನಿಗದಿಯಾಗಿದೆ. ಅಲ್ಲಿಯವರೆಗೆ ಉಳಿದ ಕೆಲಸಗಳಲ್ಲಿ ಸಂದೀಪ್ ಬ್ಯುಸಿಯಿರಲಿದ್ದಾರೆ. ಹೀಗಿರುವಾಗ ಅನಿಮಲ್ 3 ಸೆಟ್ಟೇರುವುದು ಡೌಟ್!(ಏಜೆನ್ಸೀಸ್).