ನಿರಂತರ ಮಳೆಗೆ ತತ್ತರಿಸಿದ ತಮಿಳುನಾಡು! ಕೇಂದ್ರಕ್ಕೆ 12,000 ಕೋಟಿ ರೂ. ನೆರವು ಕೋರಿದ ಸಿಎಂ ಸ್ಟಾಲಿನ್

ವಿಜಯವಾಣಿ - 2023-12-20T065900.954
Published on

ತಮಿಳುನಾಡು: ನಿರಂತರ ಮಳೆಗೆ ತಮಿಳುನಾಡಿನ ಹಲವಾರು ಪ್ರದೇಶಗಳು ಸಂಪೂರ್ಣ ಜಲಾವೃತಗೊಂಡಿದ್ದು, ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ 12,000 ಕೋಟಿ ರೂ. ಕೇಂದ್ರದ ನೆರವು ಮತ್ತು 7,300 ಕೋಟಿ ರೂ. ತಕ್ಷಣದ ಪರಿಹಾರ ಹಣವನ್ನು ಕೋರಿದ್ದಾರೆ. ಈ ಕುರಿತಂತೆ ಮಂಗಳವಾರ ಸಂಜೆ ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ರಾಜ್ಯದ ಪ್ರವಾಹ ಪರಿಸ್ಥಿತಿ ಕುರಿತು ಚರ್ಚಿಸಿದ್ದಾರೆ.

"ತಕ್ಷಣದ ಪರಿಹಾರಕ್ಕಾಗಿ 7,300 ಕೋಟಿ ಮತ್ತು ಶಾಶ್ವತ ಪರಿಹಾರ ಎಂದು 12,000 ಕೋಟಿ ರೂ. ಹಣ ಕೇಳಿದ್ದೇನೆ. ಈಗಾಗಲೇ ಪ್ರವಾಹದಿಂದ ತೊಂದರೆ ಅನುಭವಿಸಿದ ಸಂತ್ರಸ್ತರಿಗೆ 6000 ರೂಪಾಯಿ ಪರಿಹಾರ ಘೋಷಿಸಿದ್ದೇವೆ. ಅದನ್ನು ವಿತರಿಸಲಾಗುತ್ತಿದೆ. ನಾವು ಪ್ರಧಾನಿ ಅವರಿಂದ ಪರಿಹಾರ ನಿಧಿಯನ್ನು ಪಡೆದಾಗ ಮಾತ್ರ ಪರಿಹಾರ ಕಾರ್ಯವನ್ನು ಸಂಪೂರ್ಣವಾಗಿ ಪೂರ್ಣಗೊಳಿಸಲು ಸಾಧ್ಯ" ಎಂದು ಸ್ಟಾಲಿನ್ ಹೇಳಿದರು.

ಪ್ರಧಾನಿಯನ್ನು ಭೇಟಿಯಾಗುವ ಮುನ್ನ ಮಾತನಾಡಿದ ಸಿಎಂ, “ತಕ್ಷಣದ ಪರಿಹಾರವಾಗಿ, ನಾನು ರಾಷ್ಟ್ರೀಯ ವಿಪತ್ತು ನಿಧಿಯಿಂದ ಹಣವನ್ನು ಕೇಳುತ್ತೇನೆ. ತಮಿಳುನಾಡು ನಿರಂತರವಾಗಿ ಎರಡು ವಿಪತ್ತುಗಳನ್ನು ಎದುರಿಸುತ್ತಿದ್ದು, ಶೀಘ್ರವೇ ಹಣ ಬಿಡುಗಡೆ ಮಾಡುವಂತೆ ನಾನು ಪ್ರಧಾನಿಯವರನ್ನು ಒತ್ತಾಯಿಸುತ್ತೇನೆ" ಎಂದು ಹೇಳಿದ್ದರು.

ತಿರುನಲ್ವೇಲಿ ಮತ್ತು ತೂತುಕುಡಿ ಜಿಲ್ಲೆಗಳು ಸೇರಿದಂತೆ ದಕ್ಷಿಣ ತಮಿಳುನಾಡಿನ ಹಲವಾರು ಪ್ರದೇಶಗಳು ಈಗ ನದಿಗಳಂತೆ ಆಗಿದ್ದು, ಹಳ್ಳಿಗಳು, ಪಟ್ಟಣಗಳು, ರಸ್ತೆಗಳು, ಹೆದ್ದಾರಿಗಳು ಸೇರಿದಂತೆ ಮನೆಗಳು ಸಂಪೂರ್ಣವಾಗಿ ಜಲಾವೃತಗೊಂಡಿವೆ. ಈ ಪರಿಸ್ಥಿತಿಯಿಂದ ಜನಸಾಮಾನ್ಯರು ದಿಗ್ಭ್ರಮೆಗೊಂಡಿದ್ದಾರೆ. ಪರಿಸ್ಥಿತಿಯನ್ನು ನಿಭಾಯಿಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿದ ಸಿಎಂ ಸ್ಟಾಲಿನ್, ಹವಾಮಾನ ಇಲಾಖೆಯು ತಡವಾಗಿ ಎಚ್ಚರಿಕೆಯನ್ನು ನೀಡಿದೆ ಎಂದು ಒತ್ತಿ ಹೇಳಿದರು.

“ಇಲ್ಲಿಯವರೆಗೆ 12,553 ಜನರನ್ನು ರಕ್ಷಿಸಲಾಗಿದ್ದು, 143 ಆಶ್ರಯಗಳನ್ನು ಕಲ್ಪಿಸಲಾಗಿದೆ. ಪ್ರವಾಹದಿಂದ ಆವೃತವಾಗಿರುವ ಸ್ಥಳಗಳಲ್ಲಿ ಹೆಲಿಕಾಪ್ಟರ್ ಬಳಸಿ ಆಹಾರ ವಿತರಿಸಲಾಗುತ್ತಿದೆ. ನನ್ನೊಂದಿಗೆ ಮುಖ್ಯ ಕಾರ್ಯದರ್ಶಿ ಕೂಡ ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದಾರೆ ಮತ್ತು ಸಂಬಂಧಪಟ್ಟ ಜಿಲ್ಲಾ ಅಧಿಕಾರಿಗಳೊಂದಿಗೆ ಮಾತನಾಡುತ್ತಿದ್ದಾರೆ ಎಂದು ಸಿಎಂ ಹೇಳಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net