ಶಿಥಿಲಾವಸ್ಥೆಯಲ್ಲಿ ಅಂಗನವಾಡಿ ಕಟ್ಟಡ

anganavadi
ಕಿಟಕಿ, ಬಾಗಿಲು ಇಲ್ಲದ ರಂಗಮಂದಿರದಲ್ಲಿ ನಡೆಯುತ್ತಿರುವ ಅಂಗನವಾಡಿ ಕೇಂದ್ರ.
Published on

ಆಯನೂರು: ಅಂಗನವಾಡಿ ಕೇಂದ್ರ ಬೀಳುವ ಹಂತ ತಲುಪಿದ್ದರೂ ದುರಸ್ತಿ ಅಥವಾ ಹೊಸ ಕಟ್ಟಡ ನಿರ್ಮಾಣ ಕಾರ್ಯ ಈವರೆಗೂ ಆಗಿಲ್ಲ. ಅಲ್ಲದೆ ಅಂಗನವಾಡಿ ಕೇಂದ್ರಕ್ಕೆ ಬರುವ ಮಕ್ಕಳು ಬೇರೆ ಕಟ್ಟಡದಲ್ಲಿ ಕುಳಿತು ಅಕ್ಷರ ಕಲಿಯುವ ಸ್ಥಿತಿ ನಿರ್ಮಾಣವಾಗಿದೆ.

ಆಯನೂರು ತಮ್ಮಡಿಹಳ್ಳಿ ಗ್ರಾಪಂ ವ್ಯಾಪ್ತಿಯ ಆಡಿನಕೊಟ್ಟಿಗೆ ಗ್ರಾಮದ ಅಂಗನವಾಡಿ ಕೇಂದ್ರ ಸಂಪೂರ್ಣ ಶಿಥಿಲಾವಸ್ಥೆ ತಲುಪಿದೆ. ಕಟ್ಟಡ ಬೀಳುವ ಭೀತಿಯಿಂದ ಕೇಂದ್ರಕ್ಕೆ ಬರುವ ಮಕ್ಕಳನ್ನು ಒಂದು ವರ್ಷದಿಂದ ಸಮೀಪದಲ್ಲೇ ಇರುವ ಗ್ರಾಮದ ರಂಗಮಂದಿರದಲ್ಲಿ ಕೂರಿಸಲಾಗುತ್ತಿದೆ.
ಗ್ರಾಮದ ರಂಗಮಂದಿರದಲ್ಲಿ ಮಕ್ಕಳ ಕಲಿಕೆ ನಡೆಯುತ್ತಿದ್ದರೂ ಅಲ್ಲಿಯೂ ಸೌಲಭ್ಯಗಳಿಲ್ಲ. ಕಿಟಕಿ ಬಾಗಿಲುಗಳಿಲ್ಲ. ಕತ್ತಲೆಯಲ್ಲೇ ಮಕ್ಕಳು ಕೂರುವಂತಾಗಿದೆ. ಪಂಚಾಯಿತಿಯಿಂದ ತಾತ್ಕಾಲಿಕವಾಗಿ ರಂಗಮಂದಿರ ದ್ವಾರಕ್ಕೆ ತಗಡಿನ ಶೀಟ್ ಹೊಡೆದು ವ್ಯವಸ್ಥೆ ಮಾಡಲಾಗಿತ್ತು. ಪ್ರಸ್ತುತ ರಂಗಮಂದಿರ ಕಟ್ಟಡವೂ ಶಿಥಿಲಾವಸ್ಥೆಯಲ್ಲಿದೆ. ಮಕ್ಕಳ ಬಗ್ಗೆ ಯಾರೂ ಕಾಳಜಿ ವಹಿಸುತ್ತಿಲ್ಲ. ಅಂಗನವಾಡಿ ಕೇಂದ್ರದಲ್ಲಿ ಅಡುಗೆ ತಯಾರಾಗುತ್ತದೆ. ಮಧ್ಯಾಹ್ನದ ಊಟಕ್ಕೆ ರಂಗಮಂದಿರದಿಂದ ಅಂಗನವಾಡಿಗೆ ಬರಬೇಕು.
ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿದ್ದ ಅಂದಿನ ಸೂಪರ್‌ವೈಸರ್ ಹಾಗೂ ಗ್ರಾಪಂ ಪಿಡಿಒ ಅಪಾಯದ ಮುನ್ಸೂಚನೆ ಅರಿತು ಬಯಲು ರಂಗಮಂದಿರಕ್ಕೆ ಮಕ್ಕಳನ್ನು ಸ್ಥಳಾಂತರಿಸಿದ್ದರು. ಆದರೆ ಈಗಲೂ ಮಕ್ಕಳು ಅಲ್ಲಿಯೇ ಓದುವಂತಾಗಿದೆ. ಮಳೆಗಾಲ ಆಗಿರುವುದರಿಂದ ರಂಗಮಂದಿರ ಆವರಣದಲ್ಲಿ ಸುತ್ತ ಕೆಸರು ತುಂಬಿ ಮಕ್ಕಳು ಜಾರಿ ಬೀಳುತ್ತಿದ್ದಾರೆ.
ಗ್ರಾಮದಲ್ಲಿ 250 ಕುಟುಂಬಗಳಿದ್ದು, 15 ಮಕ್ಕಳು ಅಂಗನವಾಡಿ ಕೇಂದ್ರಕ್ಕೆ ಬರುತ್ತಾರೆ. ಸಿಡಿಪಿಒ ಹಾಗೂ ಗ್ರಾಪಂ ಪಿಡಿಒಗೆ ಗ್ರಾಮಸ್ಥರು ಅನೇಕ ಬಾರಿ ಮನವಿ ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಮಕ್ಕಳ ಬಗ್ಗೆ ಕಾಳಜಿ ವಹಿಸಬೇಕಾದ ಇಲಾಖೆ ಮೌನವಾಗಿದೆ.
ಗ್ರಾಮದ ಅಂಗನವಾಡಿ ಕೇಂದ್ರದ ಕಟ್ಟಡ ಶಿಥಿಲಾವಸ್ಥೆಯಲ್ಲಿರುವ ಬಗ್ಗೆ ಗ್ರಾಮಸ್ಥರು ಸಮಸ್ಯೆ ಹೇಳಿಕೊಂಡಿದ್ದಾರೆ. ನಮಗೆ ಬಾಡಿಗೆ ತೆಗೆದುಕೊಳ್ಳಲು ಅವಕಾಶವಿದ್ದು, ಬಾಡಿಗೆ ಮನೆಯಲ್ಲಿ ಕೇಂದ್ರ ನಡೆಸಲು ಗ್ರಾಮಸ್ಥರಿಗೆ ತಿಳಿಸಿದ್ದೆ. ನಾನು ಇಲ್ಲಿಗೆ ಬಂದು 2-3 ತಿಂಗಳಷ್ಟೇ ಆಗಿದೆ. ಶೀಘ್ರ ಸ್ಥಳಕ್ಕೆ ಭೇಟಿ ನೀಡಿ ಬಜೆಟ್ ನೋಡಿಕೊಂಡು ಮಕ್ಕಳಿಗೆ ತೊಂದರೆ ಆಗದಂತೆ ಅನುಕೂಲ ಮಾಡಿಕೊಡಲಾಗುವುದು ಎಂದು ಸಿಡಿಪಿಒ ಗಂಗಾಬಾಯಿ ಭರವಸೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net