

ವಿಜಯವಾಡ: ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ತೆಲುಗು ದೇಶಂ ಪಕ್ಷ (ಟಿಡಿಪಿ)ದ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರನ್ನು ಆಂಧ್ರ ಸಿಐಡಿ ಪೊಲೀಸರು ಬಂಧಿಸಿದ್ದಾರೆ.
ಸ್ಕಿಲ್ ಹಗರಣ ಸಂಬಂಧ ಸೂಕ್ತ ಉತ್ತರ ನೀಡದ ಹಿನ್ನೆಲೆಯಲ್ಲಿ ಆಂಧ್ರದ ಹೈಕೋರ್ಟ್ ಸೂಚನೆ ಮೇರೆಗೆ ಚಂದ್ರಬಾಬು ನಾಯ್ಡು ಅವರನ್ನು ಸಿಐಡಿ ಪೊಲೀಸರು, ಆಂಧ್ರದ ನಂದ್ಯಾಲದಲ್ಲಿ ಶನಿವಾರ ಮುಂಜಾನೆ ಬಂಧನ ಮಾಡಿದ್ದಾರೆ.
ಸ್ಕಿಲ್ ಡೆವಲಪ್ಮೆಂಟ್ ಕಾರ್ಪೊರೇಷನ್ ಹಗರಣದಲ್ಲಿ ಚಂದ್ರಬಾಬು ನಾಯ್ಡು ಅವರು ಎ1 ಆರೋಪಿಯಾಗಿದ್ದಾರೆ. ಅವರ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಸ್ಕಿಲ್ ಡೆವಲಪ್ಮೆಂಟ್ ಯೋಜನೆಯಲ್ಲಿ ಭಾರೀ ಅವ್ಯವಹಾರ ನಡೆದಿರುವ ಆರೋಪ ಕೇಳಿಬಂದಿದೆ. 58 ಕೋಟಿ ರೂ. ಯೋಜನಾ ವೆಚ್ಚವನ್ನು ದಿಢೀರನೇ 370 ಕೋಟಿ ರೂ.ಗೆ ಏರಿಸಿರುವ ಆರೋಪ ಕೇಳಿಬಂದಿದೆ.
ಇಂದು ಬೆಳಗ್ಗೆ ನಂದ್ಯಾಲ ವಲಯದ ಡಿಐಜಿ ರಘುರಾಮಿ ರೆಡ್ಡಿ ನೇತೃತ್ವದ ಪೊಲೀಸ್ ತಂಡ ಬೆಳಗ್ಗೆ 3 ಗಂಟೆ ಸುಮಾರಿಗೆ ಚಂದ್ರಬಾಬು ನಾಯ್ಡು ಅವರನ್ನು ಬಂಧನ ಮಾಡಿದೆ. ಆರಂಭದಲ್ಲಿ ಭಾರೀ ವಿರೋಧ ವ್ಯಕ್ತಪಡಿಸಿದ ಚಂದ್ರಬಾಬು ನಾಯ್ಡು ಅವರನ್ನು ಬಲವಂತವಾಗಿ ಕಾರಿನಲ್ಲಿ ಕೂರಿಸಿಕೊಂಡ ಪೊಲೀಸರು ವಿಜಯವಾಡಗೆ ತೆರಳಿದರು. (ಏಜೆನ್ಸೀಸ್)