

ದಕ್ಷಿಣ ಭಾರತದ ಹೆಸರಾಂತ ನಟಿ ಸಮಂತಾ ರುತ್ ಪ್ರಭು ರಾಜಕೀಯಕ್ಕೆ ಹೋಗುತ್ತಾರಾ? ಸದ್ಯ ಇಂತಹ ಒಂದು ಪ್ರಶ್ನೆ ಉದ್ಭವಿಸಿದ್ದು, ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ. ಕೆಲ ತಿಂಗಳಿನಿಂದ ಮಯೋಸಿಟಿಸ್ ಎಂಬ ಸ್ನಾಯು ಸಂಬಂಧಿ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಸಮಂತಾ ಅಮೆರಿಕದಲ್ಲಿ ಚಿಕಿತ್ಸೆ ಪಡೆಯಲಿದ್ದು ಆರು ತಿಂಗಳಿನಿಂದ ಒಂದು ವರ್ಷದವರೆಗೆ ಚಿತ್ರರಂಗದಿಂದ ಬ್ರೇಕ್ ತೆಗೆದುಕೊಳ್ಳಲಿದ್ದಾರೆ ಎನ್ನಲಾಗಿತ್ತು. ಅದಕ್ಕೆ ಪೂರಕ ಎಂಬಂತೆ ಖುಷಿ ಸಿನಿಮಾ ಹಾಗೂ ದಿ ಸಿಟಡೆಲ್ ವೆಬ್ಸರಣಿ ಚಿತ್ರೀಕರಣ ಪೂರ್ಣಗೊಳಿಸಿದ ಸಮಂತಾ, ಹೊಸ ಪ್ರಾಜೆಕ್ಟ್ಗಳನ್ನು ಒಪ್ಪಿಕೊಂಡಿರಲಿಲ್ಲ. ಸದ್ಯ ಬ್ರೇಕ್ನಲ್ಲಿರುವ ಅವರು, ವಾಪಸ್ ಬರುತ್ತಲೇ ರಾಜಕೀಯದಲ್ಲಿ ಸಕ್ರಿಯರಾಗಲಿದ್ದಾರೆ ಎನ್ನಲಾಗಿದೆ.
ತೆಲಂಗಾಣದ ಕೈಮಗ್ಗ ನೇಕಾರರು ನೇಯ್ದ ಬಟ್ಟೆಗಳ ರಾಯಭಾರಿಯಾಗಿರುವ ಸಮಂತಾ, ಆಗಾಗ ಕೃಷಿಕರ ಸಮಸ್ಯೆಗಳ ಕುರಿತೂ ಮಾತನಾಡಿದ್ದಾರೆ. ಜತೆಗೆ ಭಾರತ ರಾಷ್ಟ್ರ ಸಮಿತಿ (ಬಿಆರ್ಎಸ್) ನೇತೃತ್ವದ ತೆಲಂಗಾಣ ಸರ್ಕಾರದ ಹಲವು ಕಾರ್ಯಕ್ರಮಗಳಲ್ಲೂ ಸಮಂತಾ ಭಾಗಿಯಾಗಿದ್ದು, ಬ್ರೇಕ್ ನಂತರ ಅದೇ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎಂಬ ಸುದ್ದಿ ಸದ್ಯ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಬಗ್ಗೆ ಸಮಂತಾ ಅಧಿಕೃತವಾಗಿ ಏನೂ ಹೇಳಿಲ್ಲವಾದರೂ, ಸದ್ಯ ಅವರ ಅಭಿಮಾನಿಗಳಲ್ಲಿ ಈ ಸುದ್ದಿ ಸಂಚಲನ ಮೂಡಿಸಿದೆ.
ಇದನ್ನೂ ಓದಿ : ಯಾವಾಗ ಮದುವೆ? ಅಭಿಮಾನಿ ಪ್ರಶ್ನೆಗೆ ಕೋಪಗೊಂಡ ತಮನ್ನಾ
ಸಮಂತಾ ರಾಜಕೀಯಕ್ಕೆ ಎಂಟ್ರಿ ಕೊಡುವುದು ನಿಜವೇ? ಹೀಗಾಗಿಯೇ ಚಿತ್ರರಂಗದಿಂದ ಬ್ರೇಕ್ ಪಡೆದಿದ್ದಾರೆಯೇ? ಬ್ರೇಕ್ ನಂತರ ವಾಪಸ್ಸಾಗಿ ಲೋಕಸಭಾ ಚುನಾವಣೆ ಹೊತ್ತಿಗೆ ಪಾಲಿಟಿಕ್ಸ್ಗೆ ಪದಾರ್ಪಣೆ ಮಾಡುತ್ತಾರಾ? ಹೀಗೆ ಹಲವು ಪ್ರಶ್ನೆಗಳಿಗೆ ಖುದ್ದು ಸಮಂತಾ ಉತ್ತರಿಸಬೇಕಿದೆ.