

ಪುರಿ: ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾಗಿರುವ ಮರಳು ಶಿಲ್ಪಿ ಮಾನಸ್ ಕುಮಾರ್ ಸಾಹೂ ಅವರು ಮಹಿಳಾ ದಿನಾಚರಣೆಯಂದು ಸ್ತ್ರೀಯರಿಗೆ ಮರಳಿನ ಮೂಲಕವೇ ಗೌರವ ಸಲ್ಲಿಸಿದ್ದು, ಅಮೂಲ್ಯ ಸಂದೇಶವನ್ನು ನೀಡಿದ್ದಾರೆ.
ಒಡಿಶಾದ ಪುರಿಯಲ್ಲಿರುವ ಗೋಲ್ಡನ್ ಬೀಚ್ನಲ್ಲಿ ಒಟ್ಟು ಏಳು ಮಹಿಳೆಯರನ್ನು ಮರಳಿನಲ್ಲಿ ಚಿತ್ರಿಸುವ ಮೂಲಕ ಮಹಿಳಾ ದಿನವನ್ನು ಆಚರಿಸಿದ್ದಾರೆ.
ಒಟ್ಟು 15 ಅಡಿ ವಿಸ್ತಾರದಲ್ಲಿ, 15 ಟನ್ ಮರಳು ಬಳಸಿಕೊಂಡು ಮರಳು ಶಿಲ್ಪವನ್ನು ಮಾನಸ್ ಸಾಹೂ ನಿರ್ಮಿಸಿದ್ದಾರೆ. ಅದರ ವಿಶೇಷತೆ ಏನೆಂದರೆ, ಅವರು ಚಿತ್ರಿಸಿದ ಏಳು ಮಹಿಳೆಯರು ವಿವಿಧ ಧರ್ಮ, ಸಮುದಾಯಕ್ಕೆ ಸೇರಿದವರು. ಜತೆಗೆ ಎಲ್ಲ ಮಹಿಳೆಯರಿಗೂ ಸಮಾನವಾಗಿ ಪ್ರೀತಿ, ಗೌರವ ಸಲ್ಲಿಸೋಣ ಎಂದು ಉತ್ತಮವಾಗಿ ಸಂದೇಶವನ್ನು ಬರೆದಿದ್ದಾರೆ.
ಮಹಿಳೆ ಎಂದಮೇಲೆ ಅವರು ಯಾವುದೇ ಧರ್ಮ, ಜಾತಿ, ಸಮುದಾಯಕ್ಕೆ ಸೇರಿರಲಿ, ಅವರಿಗೆ ಸಮಾಜ ನೀಡುವ ಗೌರವ, ಪ್ರೀತಿ ಒಂದೇ ತೆರನಾಗಿರಲಿ ಎಂಬುದು ಮಾನಸ್ ಕುಮಾರ್ ಸಾಹೂ ಅವರ ಆಶಯ. ಹಾಗೇ ಅವರು ಲಿಂಗ ಸಮಾನತೆಯನ್ನೂ ಎತ್ತಿ ಹಿಡಿದ್ದಾರೆ.
ಸಮಾಜದಲ್ಲಿ ಪುರುಷರಿಗೆ ಸಮಾನವಾದ ಹಕ್ಕುಗಳು, ಅವಕಾಶಗಳು, ಗೌರವ, ಪ್ರೀತಿ ಎಲ್ಲವೂ ಮಹಿಳೆಯರಿಗೂ ಸಿಗಬೇಕು. ಈ ನನ್ನ ಮರಳು ಕಲೆಯ ಮೂಲಕ ಅದೇ ಸಂದೇಶ ಸಾರಿದ್ದೇನೆ ಎಂದು ಹೇಳಿದ್ದಾರೆ. (ಏಜೆನ್ಸೀಸ್)