ತಮ್ಮ ಸಾಮಾಜಿಕ ಜಾಲತಾಣವನ್ನು ಮಹಿಳಾ ಸಾಧಕಿಯರಿಗೆ ಬಿಟ್ಟು ಹೊರಬಂದ ಪ್ರಧಾನಿ ಮೋದಿ: ಹೋಗುವ ಮುನ್ನ ಒಂದು ಸಂದೇಶ

PM Modi
Published on

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದ ಭಾನುವಾರ ಬಂದೇ ಬಿಟ್ಟಿದೆ. ತಾವು ಹೇಳಿದಂತೆಯೇ ತಮ್ಮ ಸಾಮಾಜಿಕ ಜಾಲತಾಣ ಖಾತೆಗಳಿಂದ ಪ್ರಧಾನಿ ಲಾಗ್​ ಔಟ್​ ಆಗಿದ್ದು, ಅದಕ್ಕೂ ಮುನ್ನಾ ಜನತೆಗೆ ಪ್ರಧಾನಿ ಸಂದೇಶವನ್ನು ಹೇಳಿದ್ದಾರೆ.

ನನ್ನ ಜಾಲತಾಣ ಖಾತೆಗಳನ್ನು ಏಳು ಮಹಿಳಾ ಸಾಧಕಿಯರಿಗೆ ನೀಡಿದ್ದೇನೆ. ಅಂತಾರಾಷ್ಟ್ರೀಯ ಮಹಿಳಾ ದಿನ ಹಿನ್ನೆಲೆಯಲ್ಲಿ ಸಾಧಕಿಯರಿಂದು ತಮ್ಮ ಜೀವನ ಪಯಣದ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ ಎಂದು ಪ್ರಧಾನಿ ಹೇಳಿದ್ದಾರೆ.

ಪ್ರಧಾನಿ ಮೋದಿ ಮಾಡಿದ ಟ್ವೀಟ್​ ಸಾರ ಹೀಗಿದೆ... ಅಂತಾರಾಷ್ಟ್ರೀಯ ಮಹಿಳಾ ದಿನಕ್ಕೆ ಶುಭಕೋರುತ್ತೇನೆ. ನಾರಿ ಶಕ್ತಿಯ ಸಾಧನೆ ಮತ್ತು ಉತ್ಸಾಹಕ್ಕೆ ನಾವು ಸಲ್ಯೂಟ್​ ಹೊಡೆಯೋಣ. ಕೆಲ ದಿನಗಳ ಹಿಂದೆ ಹೇಳಿದಂತೆ ನಾನು ಸಾಮಾಜಿಕ ಜಾಲತಾಣದಿಂದ ಹೊರ ಹೋಗುತ್ತಿದ್ದೇನೆ. ಇಂದು ಇಡೀ ದಿನ ಏಳು ಮಹಿಳಾ ಸಾಧಕಿಯರು ತಮ್ಮ ಜೀವನ ಪಯಣದ ಅನುಭವಗಳನ್ನು ನನ್ನ ಜಾಲತಾಣ ಖಾತೆಗಳ ಮೂಲಕ ನಿಮ್ಮೊಂದಿಗೆ ಹಂಚಿಕೊಳ್ಳಲಿದ್ದಾರೆ ಎಂದು ಬರೆದಿದ್ದಾರೆ.

ದೇಶದ ಎಲ್ಲ ಭಾಗಗಳಿಂದಲೂ ಭಾರತ ಅಸಾಧಾರಣ ಮಹಿಳಾ ಸಾಧಕಿಯರನ್ನು ಹೊಂದಿದೆ. ವಿಶಾಲವಾದ ಕ್ಷೇತ್ರಗಳಲ್ಲಿ ಈ ಮಹಿಳೆಯರು ಶ್ರೇಷ್ಠವಾದ ಕೆಲಸಗಳನ್ನು ಮಾಡಿದ್ದಾರೆ. ಅವರ ಹೋರಾಟ ಮತ್ತು ಮಹತ್ವಾಕಾಂಕ್ಷೆ ಲಕ್ಷಾಂತರ ಮಂದಿ ಸ್ಫೂರ್ತಿಯನ್ನು ತುಂಬುತ್ತದೆ. ಮಹಿಳಾ ಸಾಧನೆಯನ್ನು ಆಚರಿಸುತ್ತಾ ಅವರಿಂದ ನಿರಂತರವಾಗಿ ಕಲಿಯೋಣ ಎಂದು ಟ್ವಿಟ್ಟಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net