ಪ್ರಾಚೀನ ಜ್ಞಾನ: ವೈಷ್ಣವ ಧನುವಿನ ಹಿನ್ನೆಲೆ

123
Published on
ದಶರಥನು ತನ್ನ ನಾಲ್ಕು ಮಕ್ಕಳನ್ನು, ಸೊಸೆಯರನ್ನು ಸೇರಿಕೊಂಡು ವಸಿಷ್ಠರ ಜೊತೆಗೆ ಅಯೋಧ್ಯಾಮುಖವಾಗಿ ಹೊರಟನು. ದಾರಿಯಲ್ಲಿ ಪಕ್ಷಿಗಳು ಅಪಸ್ವರದಿಂದ ಚೀರುತ್ತಿದ್ದವು. ಭೂಮಿಯಲ್ಲಿ ಓಡಾಡುತ್ತಿದ್ದ ಮೃಗಗಳು ದಶರಥನನ್ನು ಬಲಭಾಗದಲ್ಲಿ ಬಿಟ್ಟುಕೊಂಡು ಪ್ರದಕ್ಷಿಣೆ ಮಾಡಿ ಹೋಗುತ್ತಿದ್ದವು. ಇವೆಲ್ಲವೂ ಅಪಶಕನದ ದ್ಯೋತಕವಾಗಿ ಅವನಿಗೆ ಕಂಡವು. ಅದನ್ನು ವಸಿಷ್ಠರಲ್ಲಿ ತೋಡಿಕೊಂಡಾಗ ಅವರೂ ಇದು ಪ್ರಾಪ್ತವಾಗಲಿರುವ ವಿಪತ್ತಿನ ದರ್ಶನವೇ! ಆದರೆ ಅವು ಪ್ರದಕ್ಷಿಣೆಯಾಗಿ ಹೋಗುತ್ತಿರುವುದರಿಂದ ವಿಪತ್ತು ತಕ್ಷಣವೇ ಪರಿಹಾರವಾಗುವುದು ಎಂದರು. ಸುಂಟರ ಗಾಳಿ ಬೀಸತೊಡಗಿತು. ಅನೇಕ ಮಹಾವೃಕ್ಷಗಳು ಬುಡಮೇಲಾದವು. ಧೂಳಿನಿಂದ ಸೂರ್ಯನು ಮುಚ್ಚಿ ಹೋದನು. ದಶರಥನ ಪರಿವಾರಕ್ಕೆ ದಿಕ್ಕುಗಳೇ ಕಾಣದಾದವು. ವಿದ್ಯುತ್ತಿನಂತೆ ಪ್ರಕಾಶಿಸುತ್ತಿರುವ ಧನಸ್ಸನ್ನೂ ಮತ್ತು ಉಗ್ರವಾದ ಬಾಣವನ್ನೂ ಹಿಡಿದು ತ್ರಿಪುರಹಂತಕ ಶಿವನೋಪಾದಿಯಲ್ಲಿ ಪರಶುರಾಮನು ಎದುರಾದನು. ನನ್ನ ಕೈಯಲ್ಲಿರುವುದು ವೈಷ್ಣವಧನುಸ್ಸು. ಇದನ್ನು ಹೆದೆ ಏರಿಸಲು ನೀನು ಶಕ್ತನೇ ಆದರೆ ನಾನು ದ್ವಂದ್ವ ಯುದ್ಧವನ್ನು ಕೊಡುತ್ತೇನೆ! ಎಂದು ಪರಶುರಾಮನು ಶ್ರೀರಾಮನಿಗೆ ಹೇಳಿದನು.

ದಶರಥನ ಗೋಳು: ಭಾರ್ಗವರಾಮ! ನಿನ್ನ ತಂದೆಯನ್ನು ಕ್ಷತ್ರಿಯನು ವಧಿಸಿದ್ದಕ್ಕೆ ಇಪ್ಪತ್ತೊಂದು ಬಾರಿ ಕ್ಷತ್ರಿಯರನ್ನು ನಿಗ್ರಹಿಸಿ ಪ್ರಶಾಂತನಾಗಿರುವೆ. ಮಹಾತಪಸ್ವಿಯಾದ ನೀನು ನನ್ನ ಮಕ್ಕಳಿಗೆ ಅಭಯಪ್ರಧಾನ ಮಾಡುವುದು ಉಚಿತವಾಗಿದೆ. ಅಧ್ಯಯನ ಮತ್ತು ವ್ರತಗಳಿಂದ ಪ್ರಕಾಶಿತರಾದ, ಮಹಾಮಹಿಮರಾದ ಭಾರ್ಗವರ ವಂಶದಲ್ಲಿ ಹುಟ್ಟಿರುವ ನೀನು ಇನ್ನು ಮುಂದೆ ಶಸ್ತ್ರಧಾರಣೆ ಮಾಡುವುದಿಲ್ಲ ಎಂದು ಇಂದ್ರನ ಮುಂದೆ ಪ್ರತಿಜ್ಞೆಯನ್ನು ಮಾಡಿ ಶಸ್ತ್ರಾಸ್ತ್ರಗಳನ್ನು ಅವನಲ್ಲಿಯೇ ಬಿಟ್ಟು ಬಂದಿರುವೆ. ನಂತರ ಬಹುದೂರ ಪ್ರಯಾಣ ಮಾಡಿ ಮಹೇಂದ್ರ ಪರ್ವತದಲ್ಲಿ ವಾಸಿಸಿದೆ. ಶಾಂತಮನಸ್ಕನಾಗಿ ತಪಶ್ಚರಣೆಯಲ್ಲಿಯೇ ಆಸಕ್ತನಾದ ನೀನು ಇಂದ್ರನ ಸಮ್ಮುಖದಲ್ಲಿ ಮಾಡಿದ ಪ್ರತಿಜ್ಞೆಯನ್ನೂ ಕಡೆಗಾಣಿಸಿ, ನನ್ನ ಸರ್ವವಿನಾಶಕ್ಕೆಂದೇ ಇಲ್ಲಿಗೆ ಆಗಮಿಸಿರುವೆ. ಏಕೆಂದರೆ ನೀನು ದ್ವಂದ್ವಯುದ್ಧಕ್ಕೆ ಕರೆದಿರುವ ರಾಮನು ಹತನಾದರೆ ನಾವುಗಳಾರೂ ಬದುಕಿರುವುದಿಲ್ಲ. ಇದು ಸತ್ಯ ಎಂದು ದಶರಥನು ಗೋಗರೆದನು.

ಪರಶುರಾಮನ ತಿರಸ್ಕಾರ: ನಾನು ನಿನ್ನೊಡನೆ ಯುದ್ಧಕ್ಕೆ ಬಂದಾಗೆಲ್ಲವೂ ನೀನು ವರನಾಗಿ ಮೆರೆದು ನಾರೀ ಕವಚನಾಗಿ ಬದುಕುಳಿದೆ! ನೀನು ಹೇಡಿ! ನಿನ್ನ ಕಣ್ಣೀರಿಗೂ ಬೆಲೆಯಿಲ್ಲ! ನಿನ್ನ ಗೋಳಿಗೂ ಬೆಲೆ ಇಲ್ಲ. ಪುತ್ರ ವ್ಯಾಮೋಹಕ್ಕಂತೂ ಬೆಲೆಯೇ ಇಲ್ಲ!! ಆದರೆ ಸಮುದ್ರದ ಚಿಪ್ಪು! ಚಿಪ್ಪಿನಲ್ಲಿ ಪ್ರವೇಶಿಸಿದ ಸ್ವಾತಿ ಮಳೆಯ ಹನಿಯನ್ನು ನೀನೇನು ಬಲ್ಲೆ? ಎಂದು ಪರಶುರಾಮನು ದಶರಥನನ್ನು ಜರಿದನು.

ರಾಮನಕಡೆಗೆ ತಿರುಗಿ ರಾಮ! ನೀನು ಮುರಿದ ಶಿವಧನುಸ್ಸು ಮತ್ತು ನನ್ನಲ್ಲಿರುವ ವೈಷ್ಣವಧನುಸ್ಸು ಇವೆರಡೂ ದೇವಲೋಕದಲ್ಲಿ ಪ್ರಾಪ್ತವಾದವು! ಮೂರುಲೋಕದ ಜನರಿಂದ ಪೂಜಿಸಲ್ಪಡುವವು. ಬಹುಬಲಶಾಲಿಗಳಿಂದ ಮಾತ್ರ ಶರಸಂಧಾನ ಮಾಡಲು ಸಾಧ್ಯವಾದವುಗಳು. ವಿಶ್ವಕರ್ಮನು ಜಾಣ್ಮೆಯಿಂದ ನಿರ್ವಿುಸಿದವು. ಶಿವನಿಗೆ ಇದರಲ್ಲಿ ಒಂದು ಧನುವನ್ನು ಕೊಡಲಾಯಿತು. ತ್ರಿಪುರಾಸುರರನ್ನು ಕೊಂದುದೇ ಶಿವಧನುವಿನ ಮಹಾಕಾರ್ಯ. ಎರಡನೆಯ ಧನುವನ್ನು ವಿಷ್ಣುವಿಗೆ ಕೊಡಲಾಯಿತು. ನನ್ನ ಕೈಲ್ಲಿರುವ ತೇಜೋ ವಿಶಿಷ್ಟವಾದ ಧನುಸ್ಸೇ ದೇವತೆಗಳಿಂದ ಕೊಟ್ಟ ವೈಷ್ಣವಧನುಸ್ಸಾಗಿದೆ. ರಾಘವ! ಈ ವೈಷ್ಣವ ಧನುಸ್ಸು ಶಿವಧನುಸ್ಸಿಗೆ ಸರಿಸಮವಾಗಿದೆ. ಆದರೆ ತ್ರಿಪುರಸಂಹಾರಕಾಲದಲ್ಲಿ ವಿಷ್ಣುವು ಈಶ್ವರನಿಗೆ ಬಾಣರೂಪನಾಗಿ ನೆರವಾದನು. ಶಿತಿಕಂಠ ಮತ್ತು ವಿಷ್ಣು ಈ ಇಬ್ಬರಲ್ಲಿ ಬಲಶಾಲಿಗಳು ಯಾರೆಂಬುವುದನ್ನು ತಿಳಿಯುವ ಕುತೂಹಲದಿಂದ ಸರ್ವದೇವತೆಗಳೂ ಪಿತಾಮಹನಲ್ಲಿಗೆ ಹೋಗಿ ತಮ್ಮ ಇಂಗಿತವನ್ನು ಮುಂದಿಟ್ಟರು!

ಬ್ರಹ್ಮನು ಹರಿ-ಹರರಲ್ಲಿ ಪರಸ್ಪರವಿರೋಧ ಉಂಟಾಗುವಂತೆ ಮಾಡಿದನು. ಹರಿ-ಹರರಿಗೆ ಘೊರಯುದ್ಧವು ಉಂಟಾಯಿತು! ವಿಷ್ಣುವು ಕೋಪೋದ್ರೇಕದಿಂದ ಹುಂಕರಿಸಿದನು! ಅದರಿಂದ ಶಿವನ ಕೈಯಲ್ಲಿರುವ ಭಯಂಕರ ಧನುವು ಶಿಥಿಲಗೊಂಡಿತು! ಸರ್ವ ದೇವತೆಗಳೂ ವಿಷ್ಣುವೇ ಶ್ರೇಷ್ಠ ಎಂಬುವುದನ್ನು ಗ್ರಹಿಸಿ ಯುದ್ಧವನ್ನು ನಿಲ್ಲಿಸಲು ಇಬ್ಬರಲ್ಲಿಯೂ ಪ್ರಾರ್ಥಿಸಿದರು. ಶಿವಧನುವನ್ನು ದೇವರಾತನಲ್ಲಿ ನಿಕ್ಷೇಪವಾಗಿರಿಸಿದರು. ನನ್ನ ಕೈಯಲ್ಲಿರುವ ವೈಷ್ಣವಧನುಸ್ಸನ್ನು ಭೃಗುವಂಶೋತ್ಪನ್ನನಾದ ಋಚೀಕನಿಗೆ ನ್ಯಾಸರೂಪವಾಗಿ ಕೊಟ್ಟರು. ಮಹಾತೇಜಸ್ವಿಯಾದ ಋಚೀಕನು ಈ ಧನೂರತ್ನವನ್ನು ತನ್ನ ಮಗನಾದ, ಜಮದಗ್ನಿಗೆ ಕೊಟ್ಟನು. ಕಾರ್ತಿವೀರ್ಯಾರ್ಜುನನೆಂಬ ಕ್ಷತ್ರಿಯನು ನನ್ನ ತಂದೆಯನ್ನು ಯಾವ ಕಾರಣವೂ ಇಲ್ಲದೇ ಅಮಾನುಷವಾಗಿ ಕೊಂದುದಕ್ಕಾಗಿ ಕ್ಷಾತ್ರವಂಶವನ್ನು ಇಪ್ಪತ್ತೊಂದು ಬಾರಿ ಸಂಹರಿಸಿ ಅದರಿಂದ ಪ್ರಾಪ್ತವಾದ ಅಖಂಡಪೃಥ್ವಿಯನ್ನು ಕಶ್ಯಪನಿಗೆ ದಾನ ಮಾಡಿ ತಪಸ್ಸಿಗೆ ಹೋದೆ. ಈಗ ನಮ್ಮಿಬ್ಬರಲ್ಲಿ ಆ ಸ್ಪರ್ಧೆ ನಡೆಯಲಿ’ ಎಂದರು.

ಸೂಕ್ಷ್ಮಸಂವೇದನೆ: ಶಿವಧನುವು ಕ್ಷತ್ರಿಯರಿಂದ ಮತ್ತು ವೈಷ್ಣವಧನುವು ಋಷಿಗಳಿಂದ ರಕ್ಷಿಸಲ್ಪಟ್ಟಿತು. ಶಿವಧನುವು ಮೊದಲೇ ಶಿಥಿಲಗೊಂಡಿತ್ತು. ಅದಕ್ಕಾಗಿ ರಾಮನು ಧನುವನ್ನು ಹೆದೆ ಏರಿಸಿದಾಗ ಮುರಿದು ಹೋಯಿತು ಎಂಬ ವಾದವಿದೆ.
(ಲೇಖಕರು ಕನ್ನಡ, ಸಂಸ್ಕೃತ ವಿದ್ವಾಂಸರು; ಯಕ್ಷಗಾನ ಅರ್ಥಧಾರಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net