

ಪೇಶಾವರ : ವಾಯವ್ಯ ಪಾಕಿಸ್ತಾನದ ಸ್ವಾತ್ ಜಿಲ್ಲೆಯ ಬೆಟ್ಟ ಪ್ರದೇಶದಲ್ಲಿ 1,300 ವರ್ಷಗಳಷ್ಟು ಪುರಾತನವಾದ ದೇವಾಲಯವೊಂದು ಪತ್ತೆಯಾಗಿದೆ. ಇದು ಹಿಂದು ದೇಗುಲ ಎಂದು ನಂಬಲಾಗಿದ್ದು, ಪಾಕಿಸ್ತಾನ ಮತ್ತು ಇಟೆಲಿಯ ಪುರಾತತ್ತ್ವಗವೇಕ್ಷರು ನಡೆಸಿದ ಉತ್ಖನನದ ವೇಳೆ ಬರಿಕೋಟ್ ಘುಂಡಾಯ್ ಎಂಬಲ್ಲಿ ಪತ್ತೆಯಾಗಿದೆ.
ಖೈಬರ್ ಪಖ್ತುಂಖ್ವಾದ ಪುರಾತತ್ತ್ವ ಇಲಾಖೆಯ ಅಧಿಕಾರಿ ಫಜಲ್ ಖಾಲಿಕ್ ಗುರುವಾರ ಈ ವಿಷಯ ಬಹಿರಂಗ ಪಡಿಸಿದ್ದು, ಪತ್ತೆಯಾಗಿರುವುದು ವಿಷ್ಣು ದೇವಾಲಯ. ಹಿಂದು ಶಾಹಿ ಅಥವಾ ಕಾಬೂಲ್ ಶಾಹಿ ಅವಧಿಯಲ್ಲಿ ಇದನ್ನು ನಿರ್ಮಿಸಿರಬಹುದು. ಅಂದಾಜು 850-1026 ಸಿಇ ಅವಧಿಯಲ್ಲಿ ಹಿಂದು ಸಾಮ್ರಾಜ್ಯ ಕಾಬೂಲ್ ಕಣಿವೆ (ಪೂರ್ವ ಅಫ್ಘಾನಿಸ್ತಾನ), ಗಾಂಧಾರ (ಆಧುನಿಕ ಪಾಕಿಸ್ತಾನ), ಆಧುನಿಕ ಭಾರತದ ವಾಯವ್ಯ ಭಾಗ ಇದರ ವ್ಯಾಪ್ತಿಯಲ್ಲಿತ್ತು ಎಂದಿದ್ದಾರೆ.
ಇದನ್ನೂ ಓದಿ: 26/11 ಮುಂಬೈ ದಾಳಿ ದಿನವೇ ಮತ್ತೊಂದು ದಾಳಿಗೆ ಯೋಜನೆ !
ದೇವಸ್ಥಾನದ ರಚನೆಯ ಸಮೀಪವೇ ಕಲ್ಯಾಣಿಯ ಗುರುತೂ ಇದೆ. ಸ್ವಾತ್ ಜಿಲ್ಲೆಯಲ್ಲಿ 20 ಕಡೆ ಉತ್ಖನನ ನಡೆಯುತ್ತಿದ್ದು, ಪುರಾತನ ಇತಿಹಾಸವನ್ನು ಮರುರೂಪಿಸುವಲ್ಲಿ ಈ ಫಲಿತಾಂಶಗಳು ನೆರವಾಗಲಿವೆ ಎಂದು ಪುರಾತತ್ತ್ವ ಇಲಾಖೆ ತಿಳಿಸಿದೆ. (ಏಜೆನ್ಸೀಸ್)