ಪ್ರಾಚೀನ ಶಿಕ್ಷಣ ಪದ್ಧತಿ

Ancient education system
Published on

ಕೃಷ್ಣರಾಜ ಕುತ್ಪಾಡಿ
ಶಿಕ್ಷಣ, ಆಸಕ್ತಿ, ಕಲೆ, ಉದ್ಯೋಗ, ಆಹಾರ, ವಸತಿವಿನ್ಯಾಸ, ವಸ್ತ್ರಸಂಹಿತೆ, ಆದರ್ಶ, ಉಪಾಸನೆ, ಸಂಸ್ಕೃತಿ, ಅಧ್ಯಯನ, ಭಾಷೆ ಹೀಗೆ ಪ್ರತಿಯೊಂದರಲ್ಲೂ ಕಾಣುವ ವೈವಿಧ್ಯ ಈ ಮಣ್ಣಿನ ಸೊಗಡು. ಬದುಕಿನ ಲವಲವಿಕೆಯ ಗುಟ್ಟು ಕೂಡ. ಇವುಗಳ ನಡುವೆಯೂ ಪರದೆಡೆಗೆ ಸೆಳೆಯುವ ಆಧ್ಯಾತ್ಮಿಕತೆಯ ಒಂದೆಳೆ ಏಕತೆಯನ್ನು ಸಾಧಿಸುತ್ತದೆ.

ಎಲ್ಲವನ್ನು ಒಂದೇ ಅಧಿಕಾರದ ಅಡಿಗೆ ತರಬೇಕೆನ್ನುವುದು ವಿದೇಶಗಳ ಆರ್ಥಿಕತೆಯ ಕೇಂದ್ರೀಕರಣದ ಹುನ್ನಾರ. ಇಲ್ಲಿ ದುಡ್ಡಿಲ್ಲದವನು ನೆಮ್ಮದಿಯ ನಿದ್ದೆ ಹೊಡೆಯಬಲ್ಲ. ಇದು ಹೇಗೆ ಎಂಬುದೇ ವಿದೇಶೀಯರಿಗೆ ಅರ್ಥವಾಗುವುದಿಲ್ಲ. ಶಿಕ್ಷಣ ಎಂದಿಗೂ ಮುಂದಿನ ಬೆಳವಣಿಗೆಯ ತಳಪಾಯ. ಇಂದಿನ ಶಿಕ್ಷಣದ ಕೊನೆಯ ಗುರಿ ಉಚಠಢ ಞಟ್ಞಛಿಢ, ಊಚಠಠಿ ಞಟ್ಞಛಿಢ, ಆಜಿಜ ಞಟ್ಞಛಿಢ. ಅಧಿಕಾರದ ದಾಳಕ್ಕೆ ತಕ್ಕಂತೆ ಕುಣಿವ ಮಾನವಯಂತ್ರಗಳನ್ನು ಉತ್ಪಾದಿಸುವುದೇ ಇಂದಿನ ಶಿಕ್ಷಣಕ್ರಮದ ಗುರಿ.

ಟೊಪ್ಪಿಗೆಗಳನ್ನು ಹೊಲಿದಾಗಿದೆ. ಬಳಿಕ ತಲೆ ತೂರಿಸುವ ಹವಣಿಕೆ. ತೂರದ ದೊಡ್ಡ ತಲೆಗಳನ್ನು ಕೆತ್ತುತ್ತಿದ್ದಾರೆ. ತೂರಿದ ಚಿಕ್ಕತಲೆಗಳು ಮುಖವೇ ಮುಚ್ಚಿ ಕಣ್ಣುಕಾಣದೆ ಗಾವಿಲಗೊಂಡಿವೆ. ಚಿಕ್ಕದಾದ ಟೊಪ್ಪಿಗೆಯ ಹೊಲಿಗೆ ಬಿಡಿಸುವ ಅಥವಾ ದೊಡ್ಡದಕ್ಕೆ ಹೊಲಿಗೆ ಹಾಕಿ ತಲೆಗೆ ಸಮಗೊಳಿಸುವ ಯೋಚನೆಯನ್ನು ಯಾರೂ ಮಾಡುತ್ತಿಲ್ಲ. ರಾಮಾಯಣದ ಬಾಲಕಾಂಡದಲ್ಲಿ ಬರುವ ವಿಶ್ವಾಮಿತ್ರರ ಜತೆ ರಾಮಲಕ್ಷ್ಮಣರ ಒಡನಾಟ, ಸಹಜಶಿಕ್ಷಣದ ಸುಂದರ ಕಥನ. ಕಾಡಿನ ದಾರಿ ಸಾಗುತ್ತಾ ರಾಮ ಲಕ್ಷ್ಮಣರು ಗುರುಗಳೊಡನೆ ಹರಟೆ ಹೊಡೆಯುತ್ತಿದ್ದರು. ತಿಳಿದವರೊಡನೆ ಹರಟೆಯೂ ತಿಳಿವಿನ ಮೂಟೆ. ನೇಸರ ಕಂತಿದಾಗ ದಾರಿಗೆ ತಡೆ. ನದಿಯ ದಡ, ಮರದ ಬುಡಗಳೇ ಆಸರೆ. ತರಗೆಲೆಗಳ ಹಾಸು ಹಾಸಿಗೆ. ತೋಳೆ ತಲೆಗಿಂಬು (ತಲೆಗೆ ಇಂಬು). ಗುರುಗಳೆಂತೋ ಅಂತೆಯೆ ಬದುಕು. ಶಿಕ್ಷಣದ ಪಯಣದಲ್ಲಿ ರಾಜವೈಭೋಗದ ವಾಸನೆ ಒಂದಿನಿತೂ ಹೊಡೆಯಲಿಲ್ಲ. ಬೆಳಗ್ಗೆ ಗುರುಗಳೇ ಬೇಗ ಎಬ್ಬಿಸುತ್ತಿದ್ದರು.

ಕೌಸಲ್ಯಾಸುಪ್ರಜಾರಾಮ ಪೂರ್ವಾ ಸಂಧ್ಯಾ ಪ್ರವರ್ತತೇ|
ಉತ್ತಿಷ್ಠ ನರಶಾರ್ದೂಲ ಕರ್ತವ್ಯಂ ದೈವಮಾಹ್ನಿಕಂ||
‘ಕೌಸಲ್ಯೆಯ ಒಳ್ಳೆಯ ಮಗನೇ! ಮೂಡಣದಲ್ಲಿ ಕೆಂಪಡರಿದೆ. ಎದ್ದೇಳು ರಾಜಕುಮಾರನೇ!ನಡೆಸಬೇಕಿದೆ ನಿತ್ಯದ ಜಪಾನುಷ್ಠಾನ.’

ಹೊತ್ತಿನ ಕ್ರಿಯೆಗಳ ಮುಗಿಸಿ ಪಯಣವನ್ನು ಮುಂದುವರಿಸುತ್ತಿದ್ದರು. ಸಾಗುವಾಗ ಕಂಡ ಸಂಗತಿಗಳ ಕುತೂಹಲ ಮೂಡಿದರೆ ಪ್ರಶ್ನಿಸುತ್ತಿದ್ದರು. ಪ್ರಶ್ನೆ ಮೂಡುವಂತೆ ಮಾಡಿ ಉತ್ತರವನ್ನೊದಗಿಸುವ ಗುರು-ಶಿಷ್ಯರ ಆತ್ಮೀಯ ಸಂವಾದವೇ ಶಿಕ್ಷಣ.

ಆಶ್ರಮ, ನದಿ, ಕಾಡು, ಬೆಟ್ಟ, ಪಟ್ಟಣ, ಊರುಗಳ ಬಗೆಗಿನ ಕೇಳುವಿಕೆಗೆ ವಿಶ್ವಾಮಿತ್ರರು ಅಷ್ಟೇ ಆಸ್ಥೆಯಿಂದ ಉತ್ತರಿಸುತ್ತಿದ್ದರು.

ಕಸ್ಯಾಶ್ರಮಮಿದಂ ಪುಣ್ಯಂ ಕೋನ್ವಸ್ಮಿನ್ ವಸತೇ ಪುಮಾನ್|
ಭಗವನ್ ಶ್ರೋತುಮಿಚ್ಛಾಮಿ ಪರಂ ಕೌತೂಹಲಂ ಹಿ ಮೇ||

‘ಇದಾರ ಪುಣ್ಯಾಶ್ರಮ? ಯಾವ ಹಿರಿಯರು ಇಲ್ಲಿ ನೆಲೆಸಿದ್ದಾರೆ. ಪೂಜ್ಯರೇ! ಇದನ್ನು ಕೇಳಬಯಸುತ್ತೇವೆ. ಇಬ್ಬರಲ್ಲೂ ಕುತೂಹಲ ಮೂಡುಗಟ್ಟಿದೆ.’ ವಿಶ್ವಾಮಿತ್ರರು ‘ಮುಕ್ಕಣ್ಣನಿಂದ ಮೈಸುಟ್ಟುಕೊಂಡು ಅನಂಗನಾದ ಕಾಮನು ತಪ್ಪಗೈದ ಜಾಗ. ಇಲ್ಲೇ ಅನೇಕ ಮನಿಗಳು ಮುಂದೆ ತಪಗೈದು ಸಾಧಿಸಿದ್ದಾರೆ’ ಎನ್ನುತ್ತಾ ಅದೇ ಆಶ್ರಮವನ್ನು ಹೊಕ್ಕರು. ಶಿಷ್ಯರು ಅನುಸರಿಸಿದರು. ಸತ್ಕಾರಗಳ ಸುರಿಮಳೆಗೆ ಹಿಗ್ಗಲಿಲ್ಲ. ಯಾರೂ ಇಲ್ಲದ ರಾತ್ರಿ ಕಳೆಯುವಾಗ ಕುಗ್ಗಲಿಲ್ಲ. ಮುಂದೆ ಸರಯೂ-ಗಂಗಾ ಸಂಗಮಕ್ಕೆ ಬಂದರು. ಸಿದ್ಧಾಶ್ರಮದಲ್ಲಿ ಉಳಿದುಕೊಂಡರು. ಗುರುಗಳಿಂದ ಅಸ್ತ್ರಗಳನ್ನು ಪಡೆದರು. ರಕ್ಕಸರ ತರಿದರು. ಶೋಣಭದ್ರದಿಂದ ಮಿಥಿಲೆಯ ಕಡೆ ನಡೆದರು. ಅನೇಕ ರಾಜರ ಇತಿಹಾಸಗಳನ್ನು ಕೇಳಿದರು. ಹಲವು ಸಿದ್ಧಪುರುಷರ ಗಾಥೆಗಳನ್ನು ಆಲಿಸಿದರು. ಗಂಗೆ ಇಳಿದು ಬಂದ ಬಗೆಯನ್ನರಿತರು. ಆಸಕ್ತಿ ಮೂಡಿ, ಪ್ರಶ್ನೆಗಳು ಉದಯಿಸಿದಲ್ಲೆಲ್ಲ ಶಾಂತವಾದ ಉತ್ತರ ಸಿದ್ಧವಿತ್ತು.

ಸಿದ್ಧಪಡಿಸಿದ ಸಿಲೆಬಸ್​ನಲ್ಲಿ, ಚೂರುಚೂರು ಪಾಠಗಳಲ್ಲಿ, ಹುಡುಕಿ ತೆಗೆದ ಮೂರ್ನಾಲ್ಕು ಪ್ರಶ್ನೆಗಳಲ್ಲಿ, ಮುಖ್ಯವೆನಿಸಿದ ಒಂದೆರಡನ್ನು, ತಯಾರಿಸಿದಂತೆ ಉತ್ತರಿಸಿ ವಿದ್ಯಾವಂತರಾಗುವುದು ತರವೇ?

(ಲೇಖಕರು ಸಂಸ್ಕೃತ ಉಪನ್ಯಾಸಕರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net