

ಆಂಧ್ರಪ್ರದೇಶ: ತೆಲುಗಿನ ಕಿರುತೆರೆ ಲೋಕದಲ್ಲಿ ತನ್ನ ಸಖತ್ ಮಾತಿನಿಂದಲೇ ಹೆಚ್ಚು ಜನಪ್ರಿಯತೆ ಗಳಿಸಿರುವ ನಟಿ, ನಿರೂಪಕಿ ಸುಮಾ, ಕಳೆದ ಹಲವಾರು ದಿನಗಳಿಂದ ಯಾವುದೇ ಕಾರ್ಯಕ್ರಮಗಳು, ಸಿನಿಮಾಗಳ ಪ್ರೀ-ರಿಲೀಸ್ ಈವೆಂಟ್ನಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ತೆಲುಗು ಚಿತ್ರರಂಗದ ಯಾವುದೇ ಸಮಾರಂಭ ಅಥವಾ ಸಿನಿಮಾ ಪ್ರಚಾರ ಕಾರ್ಯಕ್ರಮಗಳಾಗಲಿ ಅಲ್ಲಿ ಸುಮ ಅವರ ಧ್ವನಿ ಇದ್ದೇ ಇರುತ್ತಿತ್ತು. ಆದ್ರೆ, ಕೆಲವು ದಿನಗಳಿಂದ ಸುಮಾ ಎಲ್ಲಿಯೂ ಕಾಣಿಸಿಕೊಳ್ಳದೆ ಇರುವುದಕ್ಕೆ ಕಾರಣ ಏನಿರಬಹುದು ಎಂದು ಅವರ ಅಭಿಮಾನಿಗಳು ತೀವ್ರ ಆತಂಕ ವ್ಯಕ್ತಪಡಿಸಿದ್ದರು. ಇದಕ್ಕೆ ಸ್ವತಃ ಸುಮಾ ಅವರ ಪತಿಯೇ ಉತ್ತರಿಸಿದ್ದಾರೆ.
ಇತ್ತೀಚಿನ ವರದಿಯೊಂದರ ಪ್ರಕಾರ, ಸುಮಾ ಅವರು ತಮ್ಮದೇ ಹೊಸ ಯೂಟ್ಯೂಬ್ ಚಾನೆಲ್ವೊಂದನ್ನು ಪ್ರಾರಂಭಿಸಿದ್ದು, ಸದ್ಯ ಅದರತ್ತ ಹೆಚ್ಚು ಗಮನ ಹರಿಸಲು ಬಯಸಿದ್ದಾರೆ ಎಂದು ಪತಿ ರಾಜೀವ್ ಹೇಳಿದ್ದಾರೆ ಎನ್ನಲಾಗಿದೆ. "ನಮ್ಮದು ಸರ್ಕಾರಿ ನೌಕರಿ ಅಲ್ಲ. ಇಂತಹ ವೃತ್ತಿಗಳಲ್ಲಿ ಏನನ್ನು ನಿರೀಕ್ಷಿಸಲಾಗುವುದಿಲ್ಲ. ಯಾವಾಗ ಏನು ಬೇಕಾದರೂ ಆಗಬಹುದು. ನಮ್ಮ ಕುಟುಂಬ ನಡೆಸಲು ಹಣದ ಅವಶ್ಯಕತೆ ಹೆಚ್ಚಿದೆ. ಹಾಗಾಗಿಯೇ ಸುಮಾ ಅವರನ್ನು ಒಳಗೊಂಡ ಯೂಟ್ಯೂಬ್ ಚಾನೆಲ್ವೊಂದನ್ನು ತೆರೆದಿದ್ದೇವೆ" ಎಂದಿದ್ದಾರೆ.
"ಇದರಿಂದ ಸುಮಾ ಯಾವುದೇ ಟಿವಿ ಅಥವಾ ಸಿನಿಮಾ ಕಾರ್ಯಕ್ರಮಗಳನ್ನು ಮಾಡಲು ಸಾಧ್ಯವಾಗುತ್ತಿಲ್ಲ. ಆದಷ್ಟು ಟಿವಿ ಸಂಚಿಕೆಗಳನ್ನು ಕಡಿಮೆ ಮಾಡಿಕೊಂಡಿದ್ದಾರೆ. ಸುಮಾ ಅನೇಕ ಕಾರ್ಯಕ್ರಮಗಳಲ್ಲಿ ಬ್ಯುಸಿಯಿದ್ದರೂ ಕೂಡ ಎಂದಿಗೂ ಮಕ್ಕಳನ್ನು ನಿರ್ಲಕ್ಷಿಸಲಿಲ್ಲ. ಕೆಲಸ ಮುಗಿಸಿ 6 ಗಂಟೆಗೆ ಮನೆಗೆ ಬರುತ್ತಿದ್ದರು. ಸದಾ ಮಕ್ಕಳಿಗೆ ತಾಯಿಯ ಗಮನ ಮತ್ತು ಪ್ರೀತಿ ಸಿಗುವಂತೆ ನೋಡಿಕೊಳ್ಳುತ್ತಿದ್ದರು" ಎಂದು ಸುಮಾ ಅವರ ಪತಿ ಹೇಳಿಕೊಂಡಿರುವುದಾಗಿ ವರದಿ ಉಲ್ಲೇಖಿಸಿದೆ,(ಏಜೆನ್ಸೀಸ್).