

ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ ಎಲ್ಲಿ ನೋಡಿದರೂ ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ಮದುವೆಯ ಸುದ್ದಿಯೇ ಟ್ರೆಂಡಿಂಗ್ ಆಗಿದೆ. ಜುಲೈ 12ರ ಶುಕ್ರವಾರದಂದು ಅನಂತ್ ಅಂಬಾನಿ ಅವರ ವಿವಾಹ ಸಮಾರಂಭ ನೆರವೇರಿತು.ಈ ಮದುವೆಗೆ ಬಾಲಿವುಡ್, ಟಾಲಿವುಡ್, ಸ್ಯಾಂಡಲ್ವುಡ್ ಹಾಗೂ ಕಾಲಿವುಡ್ ಸೆಲೆಬ್ರಿಟಿಗಳ ಜತೆಗೆ ಹಾಲಿವುಡ್ ಸೆಲೆಬ್ರಿಟಿಗಳು, ಕ್ರೀಡೆ, ರಾಜಕೀಯ ನಾಯಕರು ಕೂಡ ಆಗಮಿಸಿದ್ದರು.
ಮದುವೆ ಮಂಟಪದ ಅಲಂಕಾರ, ವಧು-ವರರು ಹಾಗೂ ಅಂಬಾನಿ ಕುಟುಂಬದ ಸದಸ್ಯರು ತೊಟ್ಟಿರುವ ಬಟ್ಟೆ, ಆಭರಣಗಳ ವಿವರ, ವೆಚ್ಚದ ಜತೆಗೆ ಅತಿಥಿಗಳಿಗೆ ನೀಡಿದ ಉಡುಗೊರೆ, ವೆರೈಟಿ ಭೋಜನಗಳು ಸೇರಿದಂತೆ ಸಾಕಷ್ಟು ವಿಚಾರಗಳಿಗೆ ಸಂಬಂಧಿಸಿದ ಸುದ್ದಿ ವೈರಲ್ ಆಗುತ್ತಿವೆ. ಇತ್ತೀಚೆಗೆ ಮತ್ತೊಂದು ಕುತೂಹಲಕಾರಿ ಸುದ್ದಿಯೊಂದಿಗೆ ಬೆಳಕಿಗೆ ಬಂದಿದೆ. ಅನಂತ್ ಅಂಬಾನಿ ಮದುವೆಯ ಸಂದರ್ಭದಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ವಜ್ರ ಮತ್ತು ದುಬಾರಿ ವಾಚ್ ಅನ್ನು ಧರಿಸಿದ್ದರು ಎಂಬ ಸಂಗತಿ ಬಯಲಾಗಿದೆ.
ಮದುವೆ ಸಂದರ್ಭದಲ್ಲಿ ಅನಂತ್ ಅಂಬಾನಿ ಪೇಟ ಧರಿಸಿದ್ದರು. ಅದರ ಮೇಲೆ ಅಲಂಕೃತವಾದ ಬ್ರೂಚ್‌ನಲ್ಲಿ ಅಪರೂಪದ ವಜ್ರವನ್ನು ಹೊದಿಸಲಾಗಿದೆ. ಇದನ್ನು ಕಲ್ಗಿ ಎಂದು ಕರೆಯಲಾಗುತ್ತದೆ. ಇತಿಹಾಸದಲ್ಲಿ ಇದನ್ನು ಭಾರತೀಯ ರಾಜರ ಸಂಕೇತವೆಂದು ಪರಿಗಣಿಸಲಾಗಿದೆ. ಅನೇಕ ರಾಜರು ಇದನ್ನು ಧರಿಸುತ್ತಿದ್ದರು. ಇದು ಅತಿ ದೊಡ್ಡ ವಜ್ರವಾಗಿದೆ. ಪ್ರಸ್ತುತ ಜಗತ್ತಿನಲ್ಲಿ ಇಂತಹ ವಜ್ರಗಳು ಬಹಳ ಕಡಿಮೆ ಎಂದು ಹೇಳಲಾಗುತ್ತದೆ. ಈ ರೀತಿಯ ಅಪರೂಪದ ವಜ್ರಗಳನ್ನು ಟೈಪ್ IIA ವಜ್ರಗಳು ಎಂದು ಕರೆಯಲಾಗುತ್ತದೆ. ಅನಂತ್ ಅಂಬಾನಿ ಧರಿಸಿರುವ ವಜ್ರದ ಬೆಲೆ ಸುಮಾರು 160 ಕೋಟಿ ರೂಪಾಯಿ ಎಂದು ತಿಳಿದುಬಂದಿದೆ.
ಅನಂತ್ ಅಂಬಾನಿಯವರ ಟರ್ಬನ್ ಬ್ರೂಚ್ ಮಧ್ಯದಲ್ಲಿ ಕಲ್ಗಿ ವಜ್ರವನ್ನು ಹೊಂದಿದೆ. ಮೊಟ್ಟೆಯ ಆಕಾರದ ಕಲ್ಗಿಯು 100 ಕ್ಯಾರೆಟ್‌ಗಿಂತ ಹೆಚ್ಚು ತೂಗುತ್ತದೆ ಎಂದು ತಿಳಿದುಬಂದಿದೆ. ಅನಂತ್ ಅಂಬಾನಿ ತಮ್ಮ ಮದುವೆಯಲ್ಲಿ ಸಾಕಷ್ಟು ವಜ್ರದ ಆಭರಣಗಳನ್ನು ಧರಿಸಿದ್ದರು. ಆದರೆ, ಅದರಲ್ಲಿ ಕಲ್ಗಿ ಬಹಳ ವಿಶೇಷವಾದದ್ದು. ಅನಂತ್ ಅಂಬಾನಿ ಮದುವೆಯ ಸಂದರ್ಭದಲ್ಲಿ 54 ಕೋಟಿ ರೂಪಾಯಿ ಬೆಲೆಬಾಳುವ ವಾಚ್ ಧರಿಸಿದ್ದರು. ಬಾಲಿವುಡ್‌ನ ತನ್ನ ಸ್ನೇಹಿತರಿಗೆ ತಲಾ 2 ಕೋಟಿ ರೂಪಾಯಿ ಮೌಲ್ಯದ ದುಬಾರಿ ವಾಚ್‌ಗಳನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂದು ವರದಿಯಾಗಿದೆ.
ಮುಕೇಶ್ ಅಂಬಾನಿ ಹಾಗೂ ನೀತು ಅಂಬಾನಿ ದಂಪತಿಯ ಕಿರಿಯ ಪುತ್ರ ಅನಂತ್ ಅಂಬಾನಿ ಮದುವೆ ಅದ್ಧೂರಿಯಾಗಿ ನಡೆದಿದ್ದು ಗೊತ್ತೇ ಇದೆ. ಜುಲೈ 12 ರಂದು ಮುಂಬೈನ ಜಿಯೋ ವರ್ಲ್ಡ್ ಸೆಂಟರ್‌ನಲ್ಲಿ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಏಳು ಹೆಜ್ಜೆಗಳನ್ನು ಹಾಕಿದರು. ಇದಲ್ಲದೆ, ಜುಲೈ 14 ರಂದು ಆರತಕ್ಷತೆ ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿರುವ ಜಿಯೋ ವರ್ಲ್ಡ್ ಸೆಂಟರ್‌ನಲ್ಲಿ ನಡೆಯುತ್ತಿದೆ. (ಏಜೆನ್ಸೀಸ್)