ಗಾಯಗೊಂಡ ಗಂಡನನ್ನು ಬೆನ್ನ ಮೇಲೆ ಹೊತ್ತು ಸಾಗಿದ ಪತ್ನಿ! ಆಸ್ಪತ್ರೆ ವಿರುದ್ಧ ಜನಾಕ್ರೋಶ

Wife Husband
Published on

ಭೋಪಾಲ್​: ಗಂಡ-ಹೆಂಡತಿಯ ನಡುವಿನ ಒಡನಾಟ ಮತ್ತು ಪ್ರೀತಿ ಸಾಯುವವರೆಗೂ ಇರುತ್ತದೆ. ಸತಿ-ಪತಿ ಸಂಬಂಧ ಅನ್ನೋದೆ ಅತ್ಯಂತ ಪವಿತ್ರವಾದದ್ದು. ಕೇವಲ ದೇಹವನ್ನು ಮಾತ್ರವಲ್ಲ, ಸುಖ-ದುಃಖ, ನೋವು-ನಲಿವು ಎಲ್ಲವನ್ನು ಹಂಚಿಕೊಳ್ಳುತ್ತಾರೆ. ಇಬ್ಬರ ನಡುವೆ ಏನೇ ಕಷ್ಟ ಬರಲಿ ಒಬ್ಬರಿಗೊಬ್ಬರು ನೆರವಾಗುತ್ತಾರೆ. ಇದಕ್ಕೆ ತಾಜಾ ಉದಾಹರಣೆಯಂತಿರುವ ಹೃದಯಸ್ಪರ್ಶಿ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.

ಮಧ್ಯಪ್ರದೇಶದ ಭಿಂಡ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಮಹಿಳೆಯೊಬ್ಬಳು ಗಾಯಗೊಂಡ ತನ್ನ ಪತಿಯನ್ನು ಬೆನ್ನಿನ ಮೇಲೆ ಹೊತ್ತುಕೊಂಡು ಭಿಂಡ್ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ಯುತ್ತಿರುವ ದೃಶ್ಯವನ್ನು ವಿಡಿಯೋದಲ್ಲಿ ಕಾಣಬಹುದು.

ಮಹಿಳೆಯ ಪತಿಯ ಕಾಲಿಗೆ ಗಾಯವಾಗಿದ್ದು, ನಡೆಯಲು ಕೂಡ ಸಾಧ್ಯವಾಗುತ್ತಿಲ್ಲ. ಸೀರೆ ಧರಿಸಿರುವ ಮಹಿಳೆ ತನ್ನ ಪತಿಯನ್ನು ಹೊತ್ತು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ಆಸ್ಪತ್ರೆಯಲ್ಲಿ ವ್ಯಕ್ತಿಯೊಬ್ಬರು ಈ ಅಪರೂಪದ ದೃಶ್ಯವನ್ನು ತಮ್ಮ ಮೊಬೈಲ್​ನಲ್ಲಿ ಸೆರೆಹಿಡಿದಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಮಹಿಳೆಯ ಪತಿ ನಿಷ್ಠೆಯನ್ನು ನೆಟ್ಟಿಗರು ಕೊಂಡಾಡುತ್ತಿದ್ದಾರೆ.

ಇನ್ನೂ ನ್ಯಾಶನಲ್ ಕ್ವಾಲಿಟಿ ಅಶ್ಯೂರೆನ್ಸ್ ಸ್ಟ್ಯಾಂಡರ್ಡ್ಸ್ ಸಮೀಕ್ಷೆಯಲ್ಲಿ ಭಿಂಡ್ ಜಿಲ್ಲಾಸ್ಪತ್ರೆ ದೇಶದಲ್ಲೇ ಪ್ರಥಮ ಸ್ಥಾನ ಪಡೆದಿದೆ. ಆದರೆ, ಮಹಿಳೆಯೊಬ್ಬರು ಪತಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆ ಕರೆದುಕೊಂಡು ಹೋಗುತ್ತಿರುವ ವಿಡಿಯೋ ಆಸ್ಪತ್ರೆಯ ಆಡಳಿತದ ವೈಫಲ್ಯವನ್ನು ಬಯಲು ಮಾಡಿದೆ. ಸಾಕಷ್ಟು ಸ್ಟ್ರೆಚರ್‌ಗಳು, ಆಂಬ್ಯುಲೆನ್ಸ್ ಮತ್ತು ಇತರ ಅಗತ್ಯ ಸೌಲಭ್ಯಗಳ ಲಭ್ಯತೆಯ ಹೊರತಾಗಿಯೂ, ಮಹಿಳೆ ತನ್ನ ಗಂಡನನ್ನು ಬೆನ್ನಿನ ಮೇಲೆ ಹೊತ್ತುಕೊಂಡು ಹೋಗಬೇಕಾಯಿತು.

ಈ ವಿಷಯ ತಿಳಿದ ಆಸ್ಪತ್ರೆಯ ಆಡಳಿತ ಮಂಡಳಿ ತಕ್ಷಣ ಪ್ರಭಾರಿ ಸಿವಿಲ್ ಸರ್ಜನ್ ಡಾ.ಜೆ.ಎಸ್.ಯಾದವ್ ಮೂಲಕ ಆಸ್ಪತ್ರೆಯ ವ್ಯವಸ್ಥಾಪಕ ಸಾಕೇತ್ ಚೌರಾಸಿಯಾ ಅವರಿಗೆ ನೋಟಿಸ್ ಜಾರಿ ಮಾಡಿದೆ. ಜಿಲ್ಲಾಸ್ಪತ್ರೆಯಲ್ಲಿ ಸಾಕಷ್ಟು ಸ್ಟ್ರೆಚರ್‌ಗಳು, ವ್ಹೀಲ್‌ಚೇರ್‌ಗಳು ಲಭ್ಯವಿವೆ. ಆದರೂ ರೋಗಿಯು ಈ ಸಮಸ್ಯೆಗಳನ್ನು ಏಕೆ ಎದುರಿಸಬೇಕಾಯಿತು ಎಂದು ಆಸ್ಪತ್ರೆಯ ಮ್ಯಾನೇಜರ್ ಸಾಕೇತ್ ಚೌರಾಸಿಯಾಗೆ ಮಾಧ್ಯಮಗಳು ಪ್ರಶ್ನೆ ಮಾಡಿದಾಗ, ಅವರು ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net