ಧರ್ಮಶಾಸ್ತ್ರದ ಪ್ರಮುಖ ಆಜ್ಞೆ

ವಿಜಯವಾಣಿ-3-4
Published on

ಯೇಸು ಕ್ರಿಸ್ತನ ಜನಪ್ರಿಯತೆಯನ್ನು ಕಂಡು ಸಹಿಸದ ಇಸ್ರಯೇಲ್​ನ ಸದ್ದುಕಾಯರು (ಸ್ಯಾಡ್ಯೂಸೀಸ್) ಹಾಗೂ ಫರಿಸಾಯರು (ಫ್ಯಾರಿಸೀಸ್) ಎಂಬ ಎರಡು ಗುಂಪಿನವರು ಯೇಸುವನ್ನು ಇಕ್ಕಟ್ಟಿಗೆ ಸಿಲುಕಿಸಬೇಕೆಂದು ಸದಾ ಹೊಂಚು ಹಾಕುತ್ತಿದ್ದರು. ಆದರೆ, ಇಂತಹ ವ್ಯರ್ಥ ಪ್ರಯತ್ನಗಳಲ್ಲಿ ಯೇಸು ಸದ್ದಕಾಯರನ್ನು ಈಗಾಗಲೆ ಸದ್ದೆತ್ತದಂತೆ ಮಣಿಸಿದ್ದರು. ಈ ಸುದ್ದಿ ತಿಳಿದ ಫರಿಸಾಯರು ಒಟ್ಟುಗೂಡಿ ಒಂದು ದಿನ ಯೇಸುವಿನ ಬಳಿಗೆ ಬಂದರು.

ಅವರಲ್ಲೊಬ್ಬ ಧರ್ವೇ ಪದೇಶಕನಾಗಿದ್ದ. ಯೇಸುವನ್ನು ಪರೀಕ್ಷಿಸುವ ಸಲುವಾಗಿ ಆತ, ‘ಬೋಧಕರೇ! ನಮ್ಮ ಧರ್ಮ ಶಾಸ್ತದಲ್ಲಿ ಪ್ರಮುಖವಾದ ಆಜ್ಞೆ ಯಾವುದು?’ ಎಂದು ಪ್ರಶ್ನಿಸಿದನು. ಅದಕ್ಕೆ ಯೇಸು ಸಮಾಧಾನ ಚಿತ್ತದಿಂದ ಹೀಗೆ ಹೇಳಿದರು: ‘ನಿನ್ನ ಸರ್ವೆಶ್ವರನಾದ ದೇವರನ್ನು ನಿನ್ನ ಪೂರ್ಣ ಹೃದಯದಿಂದಲೂ ನಿನ್ನ ಆತ್ಮದಿಂದಲೂ ಹಾಗೂ ನಿನ್ನ ಪೂರ್ಣ ಮನಸ್ಸಿನಿಂದಲೂ ಪ್ರೀತಿಸು. ಇದೇ ಪ್ರಮುಖ ಆಜ್ಞೆ’ ಎಂದರು. ಆಗ ಆತ, ಇದಕ್ಕೆ ಸರಿಸಮಾನವಾದ ಮತ್ತೊಂದು ಧರ್ಮಶಾಸ್ತ್ರದ ಆಜ್ಞೆ ಏನಾದರೂ ಇದೆಯೇ?’ ಎಂದು ಮತ್ತೆ ಪ್ರಶ್ನಿಸಿದ.

ಅದಕ್ಕೆ ಯೇಸು ಸಾವಧಾನದಿಂದ ಉತ್ತರಿಸಿದರು. ಅವರ ಉತ್ತರ ಹೀಗಿತ್ತು: ‘ಇದಕ್ಕೆ ಸರಿಹೊಂದುವ ಎರಡನೇ ಆಜ್ಞೆ ಯಾವುದೆಂದರೆ, ನಿನ್ನನ್ನು ನೀನು ಪ್ರೀತಿಸುವಂತೆ ನಿನ್ನ ನೆರೆಯವನನ್ನೂ ಪ್ರೀತಿಸು. ಅಂದರೆ ಆ ನೆರೆಮನೆಯಾತ ಯಾವುದೇ ಜಾತಿ, ಮತ, ಧರ್ಮ ಅಥವಾ ಯಾವುದೇ ದೇಶ ಪ್ರಾಂತ್ಯಗಳಿಗೆ ಸೇರಿದವನಾದರೂ ಆತನನ್ನು ನ್ನಿನ್ನಂತೆಯೇ ಪ್ರೀತಿಸು’. ಅಲ್ಲದೇ ಇನ್ನೊಂದು ಮಾತನ್ನೂ ಹೇಳಿದರು- ಸಮಸ್ತ ಧರ್ಮಶಾಸ್ತ್ರಕ್ಕೂ ಹಾಗೂ ಪ್ರವಾದಿಗಳ ಪ್ರವಚನಗಳಿಗೂ ಈ ಎರಡು ಆಜ್ಞೆಗಳೇ ಅಧಾರ ಎಂದು ವಿವರಿಸಿದರು. ಸಮಸ್ತ ನರಮಾನವರ ನಡುವೆ ಸ್ನೇಹ ಪ್ರೀತಿಗಳನ್ನು ಪೋಷಿಸಿ, ಬೆಳೆಸಿ ನರಮನುಷ್ಯರನ್ನು ಸಹೋದರರ ಹಾಗೆ ಮಾರ್ಪಡಿಸುವ ಈ ಮಾತುಗಳನ್ನು ಆಲಿಸಿದ ಆ ಫರಿಸಾಯ ಯೇಸುವಿನ ಹೃದಯ ವೈಶಾಲ್ಯತೆಗೆ ಬೆರಗಾದ. ಮುಂದೆ ಮತ್ತೇನನ್ನೂ ಪ್ರಶ್ನಿಸಲಾಗದೆ ಅಲ್ಲಿಂದ ಹೊರಟು ಹೋದನು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net