ಆದರ್ಶ ಜಗಳ

lord sriram
Published on
krishnaraja kuthpadi
ಕೃಷ್ಣರಾಜ ಕುತ್ಪಾಡಿ
ಈ ತಲೆಬರಹವೇ ಒಪ್ಪಿಕೊಳ್ಳಲಾಗದು. ಆದರೆ ರಾಮಾಯಣವೇ ಕಟ್ಟಿಕೊಟ್ಟದ್ದು. ಸೀತಾರಾಮರು ಲಕ್ಷ್ಮಣನೊಡನೆ ಚಿತ್ರಕೂಟದಲ್ಲಿ ನೆಲೆಸಿದ್ದಾರೆ. ಭರತ ಅಣ್ಣನನ್ನು ಹುಡುಕುತ್ತ ಬಂದಿದ್ದಾನೆ. ಆಶ್ರಮದ ಋಷಿಸದೃಶ ಪರಿಸರವನ್ನು ಗಮನಿಸಿದ್ದಾನೆ. ಮಿತವಾದ ಪರಿವಾರದೊಂದಿಗೆ ಓಡೋಡಿ ಬಂದು ಅಣ್ಣನ ಕಾಲುಗಳಿಗೆ ಎರಗಿದ್ದಾನೆ. ಕಣ್ಣೀರಿನಿಂದಲೇ ಅಣ್ಣನ ಪಾದಗಳನ್ನು ತೊಳೆದಿದ್ದಾನೆ. ತಾಯಂದಿರು, ವಸಿಷ್ಠ, ವಾಮದೇವ, ಜಾಬಾಲಿ, ಸುಮಂತ್ರಾದಿ ಹಿರಿಯರು ರಾಮನನ್ನು ಎದುರುಗೊಂಡಿದ್ದಾರೆ.

ಸಾಂತ್ವಿತಾ ಮಾಮಿಕಾ ಮಾತಾ
ದತ್ತಂ ರಾಜ್ಯಮಿದಂ ಮಮ ತದ್ದದಾಮಿ ತವೈವಾಹಂ ಭುಂಕ್ಷ್ವ ರಾಜ್ಯಮಕಂಟಕಂ||

ತಾಯಿಯನ್ನು ಸಂತೈಸಿದ್ದೇನೆ. ನನಗಿತ್ತ ರಾಜ್ಯವನ್ನು ಮರಳಿ ನಿನಗೊಪ್ಪಿಸಿದ್ದೇನೆ. ಯಾರ ತೊಡಕು ಇಲ್ಲದ ಅಯೋಧ್ಯೆಯ ಅಧಿಕಾರ ನಿನ್ನದೇ ಆಗಿದೆ. ಸ್ವೀಕರಿಸು.

‘ಎಲ್ಲರ ಹೃದಯ ಸಿಂಹಾಸನವನ್ನು ನೀನೆಂದೋ ಏರಿ ಆಗಿದೆ. ಕೇವಲ ಪೀಠದಲ್ಲಿ ದಾಖಲೆಗೊಳ್ಳಬೇಕಿತ್ತಷ್ಟೇ. ಎಲ್ಲ ಹಿರಿ-ಕಿರಿ ಸಜ್ಜನರ ಬಯಕೆಯನ್ನು ಈಡೇರಿಸುವುದು ನಿನಗುಚಿತವೇ ಆಗಿದೆ. ತಂದೆಯ ದುಡುಕಿನ ನಿರ್ಧಾರವನ್ನು ಮಕ್ಕಳಾಗಿ ನಾವೇ ಸರಿಪಡಿಸಬೇಕಷ್ಟೆ? ನೀನಿಲ್ಲದ ಅಯೋಧ್ಯೆ ಭಣಗುಟ್ಟುತ್ತಿದೆ.’

ಭರತನ ಈ ಮಾತಿಗೆ ರಾಮನ ಉತ್ತರವು ಅಷ್ಟೇ ಸೊಗಸಾಗಿತ್ತು. ‘ಸೇರುವುದು ಬಿಡಿಸಿಕೊಳ್ಳಲು. ಹತ್ತುವುದು. ಇಳಿಯುವುದು ಇದ್ದದ್ದೆ. ತುಂಬುವುದೆ ಬರಿದಾಗಲು ತಾನೆ? ರಾತ್ರಿ ಕಳೆದು ಬೆಳಕಾದಂತೆ ದುಃಖ ದಾಟಿ ಸುಖವನ್ನು ಹೊಂದಲಿಕ್ಕಿದೆ. ತಂದೆಯ ಕನಸನ್ನು ಮುಂದುವರಿಸುವುದು ನಮ್ಮೆಲ್ಲರ ಮೊದಲ ಹೊಣೆ. ನೀನು ಕೂಡ ಹೆತ್ತವರ ಆಣತಿಯಂತೆ ಪ್ರಜೆಗಳನ್ನು ಪೋಷಿಸು.’

ನ ಮಯಾ ಶಾಸನಂ ತಸ್ಯ ತ್ಯಕ್ತುಂ ನ್ಯಾಯ್ಯಮರಿಂದಮ|
ಸ ತ್ವಯಾಪಿ ಸದಾ ಮಾನ್ಯಃ ಸ ವೈ ಬಂಧುಃ ಸ ನಃ ಪಿತಾ||

ತಂದೆಯ ನುಡಿಗಳನ್ನು ಮೀರಲಾರೆ. ಅದು ನ್ಯಾಯಸಮ್ಮತವೂ ಅಲ್ಲ. ನೀನು ಕೂಡ ತಂದೆಯ ಮಾತನ್ನು ಮೀರುವಂತಿಲ್ಲ. ಯಾವತ್ತಿಗೂ ದಶರಥ ಮಾನ್ಯನೆ ಆಗಿದ್ದಾನೆ. ಅವನು ಬಂಧು, ಅವನು ನಮ್ಮೆಲ್ಲರ ಪಾಲಕನೂ ಹೌದು. ಭರತ ಮತ್ತೆ ಒತ್ತಾಯಿಸುತ್ತಾನೆ, ‘ಅಣ್ಣ! ನಿನ್ನ ಕೈಯಿಂದ ಅಧಿಕಾರವನ್ನು ಕಿತ್ತು ನನ್ನ ಕೈಗಿತ್ತದ್ದು ನನ್ನ ದೌರ್ಭಾಗ್ಯ’.

ಧರ್ಮಬಂಧೇನ ಬದ್ಧೋಸ್ಮಿ ತೇನೇಮಾಂ ನೇಹ ಮಾತರಂ|
ಹನ್ಮಿ ತೀವ್ರೇಣ ದಂಡೇನ ದಂಡಾರ್ಹಾಂ ಪಾಪಕಾರಿಣೀಂ||

ಧರ್ಮದ ಗಂಟಿನಲ್ಲಿ ಸಿಲುಕಿರುವೆ. ತಾಯಿಯನ್ನು ಲೆಕ್ಕಿಸಲಾರೆ. ತಂದೆಯ ಸಾವಿಗೆ, ನಿರಪರಾಧಿಯಾದ ನಿನ್ನನ್ನು ಕಾಡಿಗೆ ಅಟ್ಟಿದ್ದಕ್ಕಾಗಿ ದಂಡನೆಗೆ ಅರ್ಹಳು. ನಾನು ಆಕೆಯನ್ನು ತೀವ್ರವಾಗಿ ಶಿಕ್ಷಿಸುವುದಕ್ಕೂ ಸಿದ್ಧ.

ಶ್ರುತೇನ ಬಾಲಃ ಸ್ಥಾನೇನ ಜನ್ಮನಾ ಭವತೋ ಹ್ಯಹಂ|
ಸ ಕಥಂ ಪಾಲಯಿಷ್ಯಾಮಿ ಭೂಮಿಂ ಭವತಿ ತಿಷ್ಠತಿ||

ಕೇಳ್ಮೆಯಲ್ಲಿ, ಸ್ಥಾನದಲ್ಲಿ, ಹುಟ್ಟಿನಿಂದ ನಿನಗಿಂತ ಬಹಳ ಕಿರಿಯ. ನಿನಗೆ ದೊರೆಯದಿರುವ ನೆಲಕ್ಕೆ ನಾನೆಂತು ದೊರೆಯಾಗಲಿ.

‘ಕ್ಷತ್ರಿಯನಾಗಿ ನಿನ್ನ ಕರ್ತವ್ಯವನ್ನು ಪಾಲಿಸು. ಮನೆಯಲ್ಲಿ ಹಿರಿಯನಾಗಿ ಆಡಳಿತವನ್ನು ನಡೆಸು.’ ಹೀಗೆ ಭರತ ಅಧಿಕಾರವನ್ನು ನಿರಾಕರಿಸುವನು.

ರಾಮನ ಮಾತು ಆಗಲೂ ಅಚ್ಚರಿ ಹುಟ್ಟಿಸುವಂಥದ್ದು. ‘ಕೈಕೇಯಿಯನ್ನು ಅಶ್ವಪತಿರಾಜ ಮದುವೆ ಮಾಡಿಕೊಡುವಾಗಲೇ, ಅವಳ ಮಗನಿಗೆ ರಾಜ್ಯಾಧಿಕಾರ ನೀಡಬೇಕೆಂದು ಒಪ್ಪಂದವಾಗಿತ್ತು. ಎರಡು ಬಾರಿ ದಾನವಕಾಳಗದಲ್ಲಿ ದಶರಥನಿಗೆ ಸಹಕರಿಸಿ ಜೀವದಾನ ನೀಡಿದ್ದ ಕೈಕೇಯಿಗೆ ಎರಡು ವರ ನೀಡಲಾಗಿತ್ತು. ಅದನ್ನೇ ಕೈಕೇಯಿ ಈಗ ಬೇಡಿಕೊಂಡಿದ್ದಾಳೆ. ಕೈಕೇಯಿ ಈ ಘಟನೆಗೆ ನಿಮಿತ್ತ ಮಾತ್ರ. ನಿನ್ನನ್ನು ಹೆತ್ತು, ಹೊತ್ತು, ಸಲಹಿದ ಆಕೆಯನ್ನು ನಿಂದಿಸಿದರೆ ರಾಮನ ಬಾಂಧವ್ಯವನ್ನು ನೀನು ಕಳೆದುಕೊಳ್ಳಬೇಕಾಗುತ್ತದೆ. ನಾನು ಎಲ್ಲಿದ್ದರೂ ನೊಂದ ಜೀವಗಳಿಗೆ ಆಸರೆಯಾಗಿ ನನ್ನ ಕ್ಷಾತ್ರವನ್ನು ಪಾಲಿಸುತ್ತೇನೆ. ಹದಿನಾಲ್ಕುವರ್ಷಗಳ ನನ್ನ ವನವಾಸ ವ್ರತವನ್ನು ಮುಗಿಸಿಯೇ ಅಯೋಧ್ಯೆಗೆ ಮರಳುವೆನು. ನೀನಿಲ್ಲಿಂದ ಹೊರಡು. ರಾಜ್ಯವಾಳು. ಹಿರಿಯನಾಗಿ ಅಣ್ಣನಾಗಿ ತಂದೆಯ ಸ್ಥಾನದಿ ನಿಂತು ಪೇಳುವೆ. ನನ್ನ ಮಾತನ್ನು ನಡೆಸಿಕೊಡು ಎಂದು.’

‘ಪಟ್ಟಕ್ಕೆ ಮರಳುವ ಮಾತಿಲ್ಲ’ ಎಂಬ ತನ್ನ ದೃಢನಿರ್ಧಾರವನ್ನು ರಾಮ ಪ್ರಕಟಿಸುತ್ತಾನೆ. ಭರತ ನಿರಶನದ ಒತ್ತಾಯ ಮಾಡಿದರೂ ಮಣಿಯಲಿಲ್ಲ. ಜಾಬಾಲಿಗಳ ನಾಸ್ತಿಕ್ಯವಾದಕ್ಕೂ ಬಗ್ಗಲಿಲ್ಲ. ವಸಿಷ್ಠ ವಾಮದೇವಾದಿ ಹಿರಿಯರ, ಕೌಸಲ್ಯೆಯ ಒತ್ತಡಕ್ಕೂ ಒಲಿಯಲಿಲ್ಲ. ಬಹಳ ದೀರ್ಘವಾದ, ಸಾತ್ವಿಕವಾದ ಜಗಳ ರಾಮನ ನಿಶ್ಚಿತ ಬುದ್ಧಿಯಿಂದ ಪರಿಹೃತವಾಯಿತು.

ಲಾಭವಿದ್ದಲ್ಲಿ ಬೇಕುಗಳಿಗಾಗಿ ಶತಶತಮಾನಗಳ ಕಾಲ ಹೋರಾಟ ನಡೆಯುತ್ತದೆ. ನಮ್ಮಲ್ಲೂ ಬೇಡವೆಂದು ಮಾತು ಮೂಡುವುದು ಹೊರೆ ಎನಿಸುವ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಹೊತ್ತಿಗೆ ಮಾತ್ರ. ಅಧಿಕಾರ ಬೇಡವೇ ಬೇಡವೆಂದು ನಡೆದ ಜಗಳದ ಫಲಶ್ರುತಿ ಅನಿರೀಕ್ಷಿತ. ಕಾಡಿನಲ್ಲಿ ಉಳಿದು ರಾಮ ಗೆದ್ದ. ರಾಮನ ಪಾದುಕೆಯನ್ನು ಪೀಠದಲ್ಲಿರಿಸಿ ಭರತ ಗೆದ್ದ. ಇದು ಇಬ್ಬರನ್ನೂ ಗೆಲ್ಲಿಸಿದ ಆದರ್ಶ ಜಗಳ.

(ಲೇಖಕರು ಸಂಸ್ಕೃತ ಉಪನ್ಯಾಸಕರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net