ಆದರ್ಶ ಸಂಸಾರ

WhatsApp Image 2024-03-29 at 10.52.27 PM
Published on

ಹರೀಶನಿಗೆ ಒಳ್ಳೆಯ ಕೆಲಸ ಸಿಕ್ಕಿತ್ತು. ಕೈ ತುಂಬಾ ಸಂಬಳ. ಒಳ್ಳೆಯ ಹೆಂಡತಿ, ಮುದ್ದು ಮಗ. ಮನೆಯಲ್ಲಿ ಶಾಂತಿ-ಸಮಾಧಾನ ನೆಲೆಸಿದ್ದವು. ಒಮ್ಮೆ ಹರೀಶನ ಹೆಂಡತಿಗೆ ವಿಪರೀತ ಜ್ವರ. 3-4 ದಿವಸ ಮನೆಯಲ್ಲಿ ಅಡುಗೆ ಮಾಡಲು ಸಾಧ್ಯವಾಗಲಿಲ್ಲ. ಕೆಲವೊಮ್ಮೆ ಹರೀಶನೇ ಅಡುಗೆ ಮಾಡಿದ. ನಾಲ್ಕು ದಿನಗಳಾದ ಮೇಲೆ, ರಾತ್ರಿ ತಾನು ಅಡುಗೆ ಮಾಡುತ್ತೇನೆ ಎಂದು ಹೆಂಡತಿ ತಿಳಿಸಿದಳು.

ರಾತ್ರಿ ಅಡುಗೆ ತಯಾರಿಸಿ, ಹರೀಶನ ಹೆಂಡತಿ ಮಗನನ್ನು, ಗಂಡನನ್ನು ಕರೆಯುತ್ತಾಳೆ. ಇಬ್ಬರೂ ತಿನ್ನಲು ಪ್ರಾರಂಭಿಸಿದ್ದಾರೆ. ಅಡುಗೆ ಮನೆಯಿಂದ ಚಪಾತಿ-ದಾಲ್ ಹೇಗಿದೆ ಎಂದು ಕೇಳಿದಳು. ದಾಲ್​ಗೆ ಉಪ್ಪು ಜಾಸ್ತಿಯಾಗಿದೆ ಎಂದು ಮಗನು ಹೇಳುವಷ್ಟರಲ್ಲಿ ತಂದೆ ಅವನನ್ನು ತಡೆದು, ‘ತುಂಬಾ ಚೆನ್ನಾಗಿದೆ’ ಎಂದನು. ಮಗನು, ‘ಕೆಲವು ದಿವಸಗಳ ಹಿಂದೆ ನನಗೆ ಸುಳ್ಳು ಹೇಳಬಾರದು ಎಂದು ತಿಳಿಸಿದ್ದಿರಿ, ಆದರೆ ಇಂದು ನೀವೇ ಸುಳ್ಳು ಹೇಳುತ್ತಿದ್ದೀರಿ’ ಎನ್ನುವಂತೆ ತಂದೆಯನ್ನು ನೋಡಿದ.

ಊಟವಾದ ಬಳಿಕ ತಂದೆ ಮಗನನ್ನು ಪಕ್ಕಕ್ಕೆ ಕರೆದು, ‘ನೋಡು, ನಿನ್ನ ತಾಯಿ ಪ್ರತಿದಿವಸ ಚೆನ್ನಾಗಿ ಅಡುಗೆ ಮಾಡುತ್ತಾಳೆ. ಕೆಲವು ದಿವಸಗಳಿಂದ ಅವಳಿಗೆ ಆರೋಗ್ಯ ಚೆನ್ನಾಗಿಲ್ಲ. ಆದರೂ ನಮಗೋಸ್ಕರ ಅಡುಗೆ ಮಾಡಿದ್ದಾಳೆ. ದಾಲಲ್ಲಿ ಉಪ್ಪು ಹೆಚ್ಚಾಗಿದೆ ಎಂದು ಹೇಳಿದರೆ, ಅವಳ ಮನಸ್ಸಿಗೆ ನೋವಾಗುತ್ತದೆ’ ಎಂದನು. ಇತ್ತ ಹೆಂಡತಿ ಚಪಾತಿ-ದಾಲ್ ತಿನ್ನಲು ಪ್ರಾರಂಭಿಸಿದಳು. ದಾಲಲ್ಲಿ ಉಪ್ಪು ಹೆಚ್ಚಾಗಿತ್ತು. ಚಪಾತಿ ಸೀದಿತ್ತು. ಆದರೂ ಹೇಳಲಿಲ್ಲವಲ್ಲ ಎಂದು ಆಲೋಚಿಸಿದಳು.

ಗಬಗಬನೆ ಊಟ ಮುಗಿಸಿ, ಗಂಡನನ್ನು ಪ್ರಶ್ನಿಸಿದಳು. ಗಂಡನು, ‘ನೀನು ಪ್ರತಿದಿವಸ ಅಡುಗೆ ಸ್ವಾದಿಷ್ಟವಾಗಿ ಮಾಡುವೆ. ಇಂದು ಏನೋ ಕಾರಣದಿಂದ ಸ್ವಲ್ಪ ಹೆಚ್ಚು-ಕಡಿಮೆಯಾಗಿದೆ ಅಷ್ಟೇ’ ಎಂದು ಹೇಳುತ್ತಾ ಮಗನ ಕಡೆಗೆ ನೋಡಿದನು. ಗಂಡನ ಪ್ರೀತಿಯ ಮಾತುಗಳಿಂದ ಹೆಂಡತಿಯ ಕಣ್ಣಲ್ಲಿ ಸಂತೋಷದ ಕಣ್ಣೀರು ಬರಲಾರಂಭಿಸಿತು. ಇವರ ಆದರ್ಶ ಸಂಬಂಧ ಮಗನ ಮನಸ್ಸಿನ ಮೇಲೆ ಒಳ್ಳೆಯ ಸಂಸ್ಕಾರ ಮೂಡಿಸಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net