

ಎನ್.ಎಲ್. ಶಿವಮಾದು ಬೆಂಗಳೂರು
ಬೆಂಗಳೂರು ವಿಶ್ವವಿದ್ಯಾಲಯವು ನೀಡುತ್ತಿರುವ ಜಾಗಕ್ಕೆ ಪ್ರತಿಯಾಗಿ ‘ಭಾರತದ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯ’ (ಎನ್ಎಲ್ಎಸ್ಐಯು) ಕನ್ನಡಿಗರಿಗೆ ಹೆಚ್ಚುವರಿಯಾಗಿ 10 ಸೀಟು ನೀಡಲು ಒಪ್ಪಿಗೆ ನೀಡಿದೆ ಎಂದು ಉನ್ನತ ಶಿಕ್ಷಣ ಇಲಾಖೆ ಮೂಲಗಳು ಖಚಿತಪಡಿಸಿವೆ.
ವಿವಿ ಒಳಗೊಳ್ಳುವಿಕೆ ಮತ್ತು ವಿಸ್ತರಣಾ ಯೋಜನೆಯಡಿ 2021ರಿಂದ ಕನ್ನಡಿಗರಿಗೆ ಶೇ.25 ಸೀಟುಗಳನ್ನು ಪ್ರತಿ ವರ್ಷ ನೀಡುತ್ತ ಬರುತ್ತಿದೆ. ಅದರ ಜತೆಗೆ ಮುಂದಿನ ಶೈಕ್ಷಣಿಕ ವರ್ಷದಿಂದ 10 ಹೆಚ್ಚುವರಿ ಸೀಟುಗಳನ್ನು ನೀಡಲು ಇತ್ತೀಚೆಗೆ ವಿವಿ ಕಾರ್ಯಕಾರಿ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ. ಅಧಿಕೃತ ಆದೇಶ ಇನ್ನಷ್ಟೇ ಹೊರಬೀಳಬೇಕಿದೆ.
ಶೇ.50 ಸೀಟು ಬೇಡಿಕೆ: ಎನ್ಎಲ್ಎಸ್ಐಯುಗೆ 23 ಎಕರೆಯನ್ನು ಲೀಸ್/ ರೆಂಟ್ ಆಧಾರದಲ್ಲಿ ಈಗಾಗಲೇ ನೀಡಲಾಗಿದೆ. ಈಗ ಹೆಚ್ಚುವರಿಯಾಗಿ 7 ಎಕರೆ ಜಮೀನನ್ನು ನೀಡಲು ಇತ್ತೀಚೆಗೆ ನಡೆದ ಬೆಂವಿವಿ ಸಿಂಡಿಕೇಟ್ ಸಭೆಯಲ್ಲಿ ನಿರ್ಣಯ ಕೈಗೊಂಡಿದೆ. 30 ವರ್ಷಗಳ ಅವಧಿಗೆ ಲೀಸ್ ಆಧಾರದ ಮೇಲೆ ವಾರ್ಷಿಕ ಪ್ರತಿ ಎಕರೆಗೆ 50 ಸಾವಿರ ರೂ. ಲೀಸ್ ರೆಂಟ್ನಂತೆ ಮಂಜೂರು ಮಾಡಲಾಗಿದೆ. ಹಾಗೆಯೇ ಕನ್ನಡಿಗರಿಗೆ ಶೇ.50 ಸೀಟುಗಳನ್ನು ನೀಡಬೇಕೆಂಬ ಬೇಡಿಕೆಯನ್ನಿಟ್ಟಿದೆ.
ಇದಕ್ಕೂ ಮೊದಲು ಕಾನೂನು ವಿವಿ ಒಳಗೊಳ್ಳುವಿಕೆ ಮತ್ತು ವಿಸ್ತರಣಾ ಯೋಜನೆ ಅಡಿಯಲ್ಲಿ ಪ್ರಸಕ್ತ ಸಾಲಿನಲ್ಲಿ 1,040 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. 2028ರ ವೇಳೆಗೆ 2 ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪ್ರವೇಶ ಪಡೆಯುವ ನಿರೀಕ್ಷೆ ಹೊಂದಲಾಗಿದೆ. ಹಂತಹಂತವಾಗಿ ಬೋಧಕ, ಸಂಶೋಧಕ ಮತ್ತು ಆಡಳಿತಾತ್ಮಕ ಸಿಬ್ಬಂದಿಯನ್ನು ನೇಮಿಸಿಕೊಳ್ಳಲು ಯೋಜಿಸಲಾಗಿದೆ. ವಿದ್ಯಾರ್ಥಿಗಳ ವಸತಿ ಸ್ಥಳದ ಅಭಾವ ಎದುರಿಸುತ್ತಿರುವ ಕಾರಣ 16.9 ಎಕರೆ ಜಮೀನು ನೀಡುವಂತೆ ಕಾನೂನು ಶಾಲೆಯು ಕರ್ನಾಟಕ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಸರ್ಕಾರವು ಬೆಂವಿವಿಗೆ ಪರಿಶೀಲಿಸುವಂತೆ ತಿಳಿಸಿತ್ತು. ಅದಕ್ಕೆ ಪ್ರತಿಯಾಗಿ 7 ಎಕರೆ ಜಮೀನು ನೀಡಲು ಬೆಂವಿವಿ ಸಿಂಡಿಕೇಟ್ ನಿರ್ಣಯ ಕೈಗೊಂಡಿದೆ.
2020ರಲ್ಲಿ ಕಾಯ್ದೆ ತಿದ್ದುಪಡಿ: ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಕಾಯ್ದೆ 1986 ಅನ್ನು 2020ರಲ್ಲಿ ತಿದ್ದುಪಡಿ ಮಾಡಿ ಕನ್ನಡಿಗರಿಗೆ ಮೀಸಲಾತಿ ನೀಡಲಾಗಿದೆ. ಆ ಪ್ರಕಾರ, ರಾಜ್ಯದ ವಿದ್ಯಾಸಂಸ್ಥೆಗಳಲ್ಲಿ ಕನಿಷ್ಠ 10 ವರ್ಷ ವ್ಯಾಸಂಗ ಮಾಡಿರುವ ವಿದ್ಯಾರ್ಥಿಯು ಮೀಸಲಾತಿ ಪಡೆಯಲು ಅರ್ಹನಾಗಿರುತ್ತಾನೆ. ಆದರೆ, ಈ ತಿದ್ದುಪಡಿ ಕಾಯ್ದೆಯು ಅಮಾನ್ಯವೆಂದು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ. ಈ ತೀರ್ಪಿನ ವಿರುದ್ಧ ಕರ್ನಾಟಕ ಸರ್ಕಾರವು ಸುಪ್ರೀಂಕೋರ್ಟ್ನಲ್ಲಿ ಹೂಡಿರುವ ದಾವೆಯು ವಿಚಾರಣಾ ಹಂತದಲ್ಲಿದೆ. ಇಲ್ಲಿಯವರೆಗೂ ತೀರ್ಪು ಪ್ರಕಟವಾಗಿಲ್ಲ. ಹಾಗೆಯೇ ಈ ಮೀಸಲಾತಿಯು ಸಮತಲ (ಹಾರಿಜೆಂಟಲ್) ಮೀಸಲಾತಿಯನ್ನು ಮಾತ್ರ ಆದೇಶಿಸುತ್ತದೆ. ಲಂಬ (ವರ್ಟಿಕಲ್) ಮೀಸಲಾತಿಯನ್ನು ಆದೇಶಿಸುವುದಿಲ್ಲ.
2021ರಿಂದ ಮೀಸಲಾತಿ ಜಾರಿ: ಬೆಂಗಳೂರಿನ ಕಾನೂನು ಶಾಲೆಯು 1988ರಿಂದ ಕಾರ್ಯನಿರ್ವಹಿಸುತ್ತಿದೆ. ಅಲ್ಲಿಂದ 2020ರವರೆಗೆ ಯಾವುದೇ ಮೀಸಲಾತಿ ಜಾರಿಯಾಗಿರಲಿಲ್ಲ. ಸ್ಪರ್ಧಾತ್ಮಕ ಪರೀಕ್ಷೆಗಳ ಆಧಾರದಲ್ಲಿ ಸೀಟುಗಳನ್ನು ಭರ್ತಿ ಮಾಡುತ್ತಿತ್ತು. ಆದರೆ, 2021ರಿಂದ ‘ಒಳಗೊಳ್ಳುವಿಕೆ ಮತ್ತು ವಿಸ್ತರಣೆ’ ಯೋಜನೆ ಅಡಿಯಲ್ಲಿ ಶೇ.25 ಸೀಟುಗಳನ್ನು ಮೀಸಲಾತಿ ನೀಡುತ್ತಿದೆ. ಆ ಪ್ರಕಾರ, ಇಲ್ಲಿಯವರೆಗೂ ಬಿಎ/ ಎಲ್ಎಲ್ಬಿ, ಎಲ್ಎಲ್ಎಂ, ಎಲ್ಎಲ್ಬಿ (ಆನರ್ಸ್) ಸೇರಿ ಒಟ್ಟು 236 ಸೀಟುಗಳನ್ನು ಕನ್ನಡಿಗರಿಗೆ ವಿತರಣೆ ಮಾಡಲಾಗಿದೆ ಎಂದು ಕಾನೂನು ಶಾಲೆ ದತ್ತಾಂಶ ನೀಡಿದೆ. ಆದರೆ ಗರಿಷ್ಠ ಸಂಖ್ಯೆಯ ಕನ್ನಡಿಗರು ಪ್ರವೇಶ ಪಡೆಯಲು ಯಾವುದೇ ನಿರ್ಬಂಧವಿಲ್ಲ. ಸ್ಪರ್ಧಾತ್ಮಕ ಪರೀಕ್ಷೆಯ ಅಂಕಗಳ ಆಧಾರದಲ್ಲಿ ಪ್ರವೇಶ ಪಡೆಯಬಹುದು.
ಪ್ರತಿಕ್ರಿಯಿಸಲು ನಿರಾಕರಣೆ: ಸೀಟು ಹಂಚಿಕೆ ಸಂಬಂಧ ಪ್ರತಿಕ್ರಿಯೆ ಪಡೆಯಲು ‘ವಿಜಯವಾಣಿ’ಯು ಕರೆ ಮಾಡಿದಾಗ, ಎನ್ಎಲ್ಎಸ್ಐಯು ಕುಲಪತಿ ಪ್ರೊ. ಸುಧೀರ್ ಕೃಷ್ಣಸ್ವಾಮಿ ಹೇಳಿಕೆ ನೀಡಲು ನಿರಾಕರಿಸಿದ್ದಾರೆ.
ಹೆಚ್ಚುವರಿಯಾಗಿ 10 ಸೀಟುಗಳನ್ನು ನೀಡಲು ಎನ್ಎಲ್ಎಸ್ಐಯು ಕಾರ್ಯಕಾರಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಸೂಪರ್ ನ್ಯೂಮರರಿ ಕೋಟಾದಡಿ ಸೀಟು ನೀಡುವ ಸಾಧ್ಯತೆಗಳಿವೆ. ಈ ಸಂಬಂಧ ಇನ್ನಷ್ಟೇ ಅಧಿಕೃತ ಆದೇಶ ಹೊರಬೀಳಬೇಕಿದೆ.
| ಡಾ. ಎಂ.ಸಿ. ಸುಧಾಕರ್ ಉನ್ನತ ಶಿಕ್ಷಣ ಸಚಿವ